ಬಮಾಕೋ(ಮಾಲಿ):ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಮಾಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಬಿಕ್ಕಟ್ಟು ಇದೀಗ ದಿಢೀರ್ ಕ್ಷಿಪ್ರಕ್ರಾಂತಿ ನಡೆಯುವ ಮೂಲಕ ಬಂಡುಕೋರ ಸೈನಿಕರು ಮಾಲಿ ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಕಿಟಾ ಅವರನ್ನು ಬಂಧಿಸಿದ್ದು, ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಕಿಟಾ ಅವರು ಬುಧವಾರ ಬೆಳಗ್ಗೆ ಘೋಷಿಸಿದ್ದಾರೆ.
ಬಂಡುಕೋರ ಸೈನಿಕರು ಕ್ಷಿಪ್ರಕ್ರಾಂತಿ ಮೂಲಕ ಬೌಬಾಕರ್ ಕಿಟಾ ಹಾಗೂ ಪ್ರಧಾನಮಂತ್ರಿ ಸೌಮೆಲೊವು ಬೌಬೌ ಸಿಸ್ಸೆ ಅವರನ್ನು ಮಂಗಳವಾರ ಮಧ್ಯಾಹ್ನ ಬಂಧಿಸಿತ್ತು. ನಂತರ ಇಬ್ಬರನ್ನೂ ರಾಜಧಾನಿ ಬಮಾಕೋ ಸಮೀಪದ ಸೇನಾ ಶಿಬಿರಕ್ಕೆ ಕರೆದೊಯ್ಯಲಾಗಿತ್ತು ಎಂದು ವರದಿ ತಿಳಿಸಿದೆ.
ಉದ್ರಿಕ್ತ ಜನರು ಬೀದಿಗಿಳಿದು ಅಧ್ಯಕ್ಷ ಕಿಟಾ ಅವರ ರಾಜೀನಾಮೆಗೆ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ಮಾಲಿಯಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿತ್ತು. ಏತನ್ಮಧ್ಯೆ ಬಂಡಾಯ ಸೈನಿಕರು ಕ್ಷಿಪ್ರಕ್ರಾಂತಿ ಮೂಲಕ 75 ವರ್ಷದ ಕಿಟಾ ಅವರ ಆಡಳಿತವನ್ನು ಕೊನೆಗಾಣಿಸಿದ್ದಾರೆ ಎಂದು ವರದಿ ವಿಶ್ಲೇಷಿಸಿದೆ.
ಸ್ಟೇಟ್ ಟೆಲಿವಿಷನ್ ನಲ್ಲಿ ಶಾಂತಚಿತ್ತರಾಗಿ ಕಾಣಿಸಿಕೊಂಡಿದ್ದ ಕಿಟಾ ಅವರು, ಮಧ್ಯರಾತ್ರಿ ಸರ್ಕಾರ ಹಾಗೂ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿರುವುದಾಗಿ ಘೋಷಿಸಿದ್ದರು. ನನಗೆ ಬೇರೆ ಯಾವುದೇ ಆಯ್ಕೆಗಳಿಲ್ಲ, ಹೀಗಾಗಿ ತಕ್ಷಣವೇ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ಒಂದು ವೇಳೆ ನಾನು ಅಧಿಕಾರದಲ್ಲಿರಬಾರದು ಎಂದು ನಮ್ಮ ಸೇನೆ ನಿರ್ಧರಿಸಿದ್ದರೆ, ನಿಜಕ್ಕೂ ನನಗೆ ಬೇರೆ ಆಯ್ಕೆಗಳಲು ಇರಲು ಸಾಧ್ಯವೇ? ನನಗೆ ಯಾವುದೇ ಆಯ್ಕೆಗಳಿಲ್ಲದ ಕಾರಣ ರಾಜೀನಾಮೆ ನೀಡಿದ್ದೇನೆ. ಯಾಕೆಂದರೆ ನನಗೆ ರಕ್ತಪಾತವಾಗೋದು ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.