Advertisement

ಕರಾವಳಿ ಮಲೇರಿಯಾ ಮುಕ್ತವಾಗಿಸುವ ಮಹತ್ವಾಕಾಂಕ್ಷೆ

10:54 PM Apr 24, 2022 | Team Udayavani |

ಮಲೇರಿಯಾ ಪ್ರಕರಣಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, 2025ರ ವೇಳೆಗೆ ಮಲೇರಿಯಾ ಮುಕ್ತ ಜಿಲ್ಲೆಗಳಾಗಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.

Advertisement

ವಿಶ್ವ ಮಲೇರಿಯಾ ದಿನಾಚರಣೆಯ ಹಿನ್ನೆಲೆ ಯಲ್ಲಿ “ಉದಯವಾಣಿ’ ಮಂಗಳೂರು ಕಚೇರಿಯಲ್ಲಿ ಏರ್ಪಡಿಸಿದ್ದ ಮಲೇರಿಯಾ ಸಂಬಂಧಿತ ಸಂವಾದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಕಿಶೋರ್‌ ಕುಮಾರ್‌ ಮತ್ತು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌ ಅವರು ಭಾಗವಹಿಸಿ, ಮಲೇರಿಯಾ ನಿಯಂತ್ರಣ ಮತ್ತು ಜಾಗೃತಿ ಕುರಿತಂತೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ ಅವರು ಉಪಸ್ಥಿತರಿದ್ದರು.

ಮಳೆಗಾಲದಲ್ಲಿ ಕರಾವಳಿ ಯನ್ನು ಅತಿಯಾಗಿ ಕಾಡುತ್ತಿದ್ದ ಮಲೇರಿಯಾ ನಿಯಂತ್ರಣಕ್ಕೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡು ಜಾಗೃತಿಯನ್ನು ಮೂಡಿಸಿದ ಕಾರಣ ಪ್ರಸ್ತುತ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಚಿಕಿತ್ಸಾ ವಿಧಾನದ ಕುರಿತೂ ಎಲ್ಲರಿಗೂ ಉನ್ನತ ಮಟ್ಟದ ಮಾಹಿತಿ ನೀಡಿರುವುದರಿಂದ ಚೇತರಿಕೆ ಕೂಡ ತುಂಬಾ ಬೇಗನೆ ಆಗುತ್ತಿದೆ.

ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಾಸ್ತಿ ಇವೆ. ಅದರಲ್ಲೂ ದ.ಕ. ಜಿಲ್ಲೆ ಮೊದಲ ಸ್ಥಾನದಲ್ಲಿದೆ. ರಾಜ್ಯದ ಶೇ. 70ರಷ್ಟು ಮಲೇರಿಯಾ ಪ್ರಕರಣಗಳು ಮಂಗಳೂರಿನಲ್ಲಿ ದಾಖಲಾಗುತ್ತಿವೆ. ಕಳೆದ ಮೂರು ವರ್ಷಗಳಿಂದ ಪ್ರತೀ ವರ್ಷವೂ ಅದರ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಮಲೇರಿಯಾದಿಂದ ಯಾವುದೇ ಸಾವು ಸಂಭವಿಸಿಲ್ಲ.

ದ.ಕ., ಉಡುಪಿ ಜಿಲ್ಲೆಗಳಲ್ಲಿ ಜಾಸ್ತಿ ಏಕೆ?
ಈ ಎರಡು ಜಿಲ್ಲೆಗಳಲ್ಲಿ ತೇವಾಂಶ ಜಾಸ್ತಿ. 18ರಿಂದ 36 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ವಾತಾವರಣದಲ್ಲಿ ಮಾತ್ರ ಮಲೇರಿಯಾ ಹರಡುವ ಸೊಳ್ಳೆ ಬದುಕುತ್ತವೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ ಹವಾಮಾನ ಈ ಸೊಳ್ಳೆಗಳ ಸಂತಾನ ಅಭಿವೃದ್ಧಿಗೆ ಪೂರಕವಾಗಿದೆ.

Advertisement

ಮಂಗಳೂರು, ಉಡುಪಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ ಅಧಿಕ. ಇಲ್ಲಿ ಕೆಲಸ ಮಾಡುವ ಹೊರ ರಾಜ್ಯಗಳ ಕಾರ್ಮಿಕರು ಮಲೇರಿಯಾ ರೋಗವಾಹಕರಾಗಿದ್ದಾರೆ. ಅವರು ಮಲಗುವಾಗ ಸೊಳ್ಳೆ ಕಡಿಯದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದಿಲ್ಲ. ಅವರು ಜಿಲ್ಲೆಗೆ ಬರುವಾಗ ಮಲೇರಿಯಾ ತರುವ ಸಾಧ್ಯತೆ ಒಂದೆಡೆಯಾದರೆ ಇಲ್ಲಿಂದ ಹಿಂದಿರುಗುವಾಗ ಅವರ ಊರಿಗೆ ಮಲೇರಿಯಾ ಕೊಂಡೊಯ್ಯುವ ಸಾಧ್ಯತೆಯೂ ಇದೆ.

ಬಾವಿಗಳು ಪಾಳು ಬಿದ್ದಿರುವುದು, ನಗರದಲ್ಲಿ ನಲ್ಲಿ ನೀರು ಸಂಪರ್ಕ ಇರುವುದರಿಂದ ಬಾವಿಗಳ ನೀರನ್ನು ಉಪಯೋಗಿಸುವುದು ಕಡಿಮೆ. ಬಾವಿಗಳ ನೀರನ್ನು ಕೊಡಪಾನದ ಮೂಲಕ ಮೇಲೆತ್ತದೆ ಇರುವುದೂ ಸೊಳ್ಳೆ ಉತ್ಪಾದನೆಗೆ ಕಾರಣವಾಗುತ್ತದೆ. ನೀರು ನಿಂತ ಸ್ಥಿತಿಯಲ್ಲಿದ್ದರೆ ಅದು ಮಲೇರಿಯಾ ಸೊಳ್ಳೆಗಳಿಗೆ ಸೋಪಾನ.

ಬದಲಾದ ಕಾರ್ಯತಂತ್ರ
ಮಲೇರಿಯಾ ಪತ್ತೆಗೆ ರಕ್ತ ಮಾದರಿ ಪರೀಕ್ಷೆಯ ಕಾರ್ಯತಂತ್ರವನ್ನು ಬದಲಾಯಿಸಲಾಗಿದೆ. ಈಗ 3 ಬಾರಿ ರಕ್ತ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆ ಕಳೆದು 6 ದಿನಗಳ ಬಳಿಕ ಹಾಗೂ 14 ದಿನಗಳ ಬಳಿಕ ಇಡೀ ಪರಿಸರದಲ್ಲಿ ರಕ್ತ ಮಾದರಿ ಪರೀಕ್ಷೆ ನಡೆಸಲಾಗುತ್ತದೆ.
ಸರಕಾರಿ/ ಖಾಸಗಿ ಆಸ್ಪತ್ರೆಗಳಲ್ಲಿ ಯಾವನೇ ರೋಗಿ 15 ದಿನಗಳಿಗೂ ಹೆಚ್ಚು ಕಾಲ ಚಿಕಿತ್ಸೆಗಾಗಿ ಉಳಿದುಕೊಂಡರೆ ಅವರನ್ನು ಮನೆಗೆ ಕಳುಹಿಸುವಾಗ ರಕ್ತ ಮಾದರಿ ಪರೀಕ್ಷೆ ಮಾಡಿ ಕಳುಹಿಸುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ಇದೆ.

ಬೈಲಾಗಳಿಗೆ ತಿದ್ದುಪಡಿ
ಖಾಸಗಿ ಮತ್ತು ಸರಕಾರಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಮಲೇರಿಯಾ ನಿಯಂತ್ರಣ ಕ್ರಮ ಅನುಸರಿಸುವಂತೆ ಬೈಲಾಗಳಿಗೆ ತಿದ್ದುಪಡಿ ತರಲಾಗಿದೆ. ಕಟ್ಟಡ ನಿರ್ಮಾಣ ಮಾನದಂಡಗಳನ್ನು ಪಾಲಿಸದಿದ್ದರೆ 15,000 ರೂ. ತನಕವೂ ದಂಡ ವಿಧಿಸಲಾಗುತ್ತಿದೆ.

ಪಾಸಿಟಿವ್‌ ಬಂದರೆ ಭಯ ಬೇಡ
ಮಲೇರಿಯಾ ಪಾಸಿಟಿವ್‌ ಬಂದರೆ ಭಯ ಪಡಬಾರದು. ವೈದ್ಯರು ಸೂಚಿಸಿದಂತೆ ಮಾತ್ರೆಗಳನ್ನು ತೆಗೆದುಕೊಳ್ಳ ಬೇಕು. 2- 3 ದಿನ ಮಾತ್ರೆ ಸೇವಿಸಿ ಗುಣ ಹೊಂದಿದಾಗ ಇನ್ನು ಮುಂದೆ ಮಾತ್ರೆ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ ಎಂಬ ನಿರ್ಲಕ್ಷ ಸಲ್ಲದು. ವೈದ್ಯರ ಸೂಚನೆಯಂತೆ ಎಲ್ಲ ಮಾತ್ರೆಗಳನ್ನು ಸೇವಿಸಬೇಕು. 6ನೇ ದಿನ ಮತ್ತೆ ಪರೀಕ್ಷೆ ಮಾಡಿಸಬೇಕು.

– ಯಾವುದೇ ಜ್ವರ ಬಂದಾಗ ಉಪ್ಪು, ಖಾರ, ಮಸಾಲೆ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು. ದ್ರವ ಆಹಾರಗಳನ್ನು ಹೆಚ್ಚು ಸೇವಿಸಬೇಕು.
– ಜ್ವರ ಮಾತ್ರವಲ್ಲ; ಪದೇ ಪದೆ ತಲೆ ನೋವು, ಕೈಕಾಲು ನೋವು, ದೈಹಿಕ ದೌರ್ಬಲ್ಯ ಕೂಡ ಕೆಲವೊಮ್ಮೆ ಮಲೇರಿಯಾದ ಲಕ್ಷಣಗಳಾಗಿ ಗೋಚರಿಸುವ ಸಾಧ್ಯತೆ ಇದೆ.

ಮಲೇರಿಯಾ ಪತ್ತೆಗೆ ಸಕ್ರಿಯ ರಕ್ತ ಲೇಪನ
ಸಾಂಕ್ರಾಮಿಕ ರೋಗ ಪತ್ತೆ ಮತ್ತು ಶೀಘ್ರ ಚಿಕಿತ್ಸೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ತರ ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಮನೆ ಮನೆಗೆ, ನಿರ್ಮಾಣ ಹಂತದ ಕಟ್ಟಡಗಳಿಗೆ ತೆರಳಿ ಸಾರ್ವಜನಿಕರಿಗೆ, ಕಾರ್ಮಿಕರಿಗೆ ಸಕ್ರಿಯ ರಕ್ತ ಲೇಪನ ಪರೀಕ್ಷೆ ನಡೆಸುತ್ತಿದೆ. ಮೊದಲು ರ್ಯಾಪಿಡ್‌ ಟೆಸ್ಟ್‌ ಮಾಡಲಾಗುತ್ತಿದ್ದು, ಇದರಲ್ಲಿ ಪಾಸಿಟಿವ್‌ ಬಂದರೆ ರಕ್ತ ಲೇಪನ ಪರೀಕ್ಷೆ ನಡೆಸಲಾಗುತ್ತದೆ. ಈ ಅಭಿಯಾನದ ಮುಖೇನ ಜ್ವರ ಇದ್ದವರ ತಪಾಸಣೆ, ಮಲೇರಿಯಾ ಜ್ವರ ಬಂದ ಕುಟುಂಬದ ಸದಸ್ಯರ ತಪಾಸಣೆ, ಸುತ್ತಮುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯ ಸಾರ್ವಜನಿಕರನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ.

ಹೆಚ್ಚಾಗಿ ಯಾರಿಗೆ ಬರುತ್ತದೆ?
ಯಾವುದೇ ರಕ್ಷಣೆ ಇಲ್ಲದೆ ಬೀದಿ ಮಲಗುವ ನಿರಾಶ್ರಿತರಿಗೆ, ಮುಂಜಾನೆ ಎದ್ದು ತರಕಾರಿ ಮಾರಾಟ ಕೆಲಸಕ್ಕೆ ಹೋಗುವವರಿಗೆ, ಮೀನಿನ ವ್ಯಾಪಾರಿಗಳಿಗೆ, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಮತ್ತು ವಾಹನ ಚಾಲಕರಿಗೆ, ಮೆಸ್ಕಾಂ ನೌಕರರಿಗೆ, ಕೆಎಸ್‌ಆರ್‌ಟಿಸಿ ಸಿಬಂದಿಗೆ, ನೈಟ್‌ ವಾಚ್‌ಮೆನ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಲೇರಿಯಾ ಕಂಡು ಬರುತ್ತದೆ.

ಮಲೇರಿಯಾ ಲಕ್ಷಣಗಳು
ಕರಾವಳಿಯಲ್ಲಿ ಪ್ಲಾಸೋಡಿಯಂ ವೈವಾಕ್ಸ್‌ ಹಾಗೂ ಪ್ಲಾಸೋಡಿಯಂ ಫಾಲ್ಸಿಪಾರಂ ಮಲೇರಿಯಾ ಕಂಡು ಬರುತ್ತದೆ. ಜ್ವರ ಇದರ ಪ್ರಮುಖ ಲಕ್ಷಣ. ಬಿಟ್ಟು ಬಿಟ್ಟು ಅಥವಾ ನಿರಂತರವಾಗಿ ಜ್ವರ ಇರಬಹುದು. ಹೆಚ್ಚು ಜನರಲ್ಲಿ ಚಳಿ ಮತ್ತು ನಡುಕ ಇರುತ್ತದೆ. ಜತೆಗೆ ತಲೆನೋವು, ಮೈಕೈ ನೋವು, ಕೀಲುನೋವು, ವಾಕರಿಕೆ ಹಾಗೂ ವಾಂತಿ ಇರಬಹುದು. ಜ್ಞಾನ ತಪ್ಪುವುದು, ಮೂತ್ರಕೋಶದ ವೈಫಲ್ಯ ಲಕ್ಷಣಗಳು, ಕಾಮಾಲೆ, ತೀವ್ರ ರಕ್ತಹೀನತೆ ಹಾಗೂ ರಕ್ತಸ್ರಾವ ತೀವ್ರ ಮಲೇರಿಯಾದ ಇತರ ಲಕ್ಷಣಗಳಾಗಿವೆ.

ಮಲೇರಿಯಾ ನಿಯಂತ್ರಣ ಹೇಗೆ?
ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರೇ ಜಾಗೃತರಾಗಬೇಕಿದೆ. ಮಲೇರಿಯಾ ಹರಡುವ ಸೊಳ್ಳೆ ಶುದ್ಧ ನೀರಿನಲ್ಲಿ ಮರಿ ಇಡುತ್ತಿದ್ದು, ಮನೆಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದ ರೀತಿ ನೋಡಿ ಕೊಳ್ಳಬೇಕು. ಮನೆಯೊಳಗೆ ಸೊಳ್ಳೆ ಪರದೆ ಅಳವಡಿಸಬೇಕು. ಸೊಳ್ಳೆ ಕಾಯಿಲ್‌ಗ‌ಳನ್ನೂ ಉಪಯೋಗಿ ಸಬಹುದು. ಕೈ ಮುಚ್ಚುವಂಥ ಡ್ರೆಸ್‌ ಹಾಕಿದರೆ ಉತ್ತಮ. ಮೈಗೆ ಎಣ್ಣೆ ಹಚ್ಚುವ ಮುಖೇನ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದು. ಹೂ ಕುಂಡದಲ್ಲಿ, ಪೈಪ್‌, ಟಯರ್‌ಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ತೋಟಗಳಲ್ಲಿ ಅಡಿಕೆ ಹಾಳೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ಹತ್ತಿ ರದ ವೈದ್ಯರನ್ನು ಭೇಟಿಯಾಗಿ ತಪಾಸಣೆ ನಡೆಸಿಕೊಳ್ಳುವುದು ಅತ್ಯಗತ್ಯ.

ಡಿಜಿಟಲ್‌ ದಾಖಲೆ
ಮಲೇರಿಯಾ ಬಗೆಗಿನ ಅಂಕಿ ಅಂಶಗಳನ್ನು ದಾಖಲಿಸಿ ನಿರ್ವಹಣೆ ಮಾಡಲು ಡಿಜಿಟಲ್‌ ಮಾಧ್ಯಮವನ್ನು ಸಮರ್ಥವಾಗಿ ಬಳಸಲಾಗುತ್ತಿದೆ. ಕೆಲವು ಕಡೆ ಆ್ಯಪ್‌ ಮತ್ತು ಗ್ರಾಮಾಂತರ ಭಾಗಗಳಲ್ಲಿ ಗೂಗಲ್‌ ಸ್ಪ್ರೆಡ್ ಶೀಟ್‌ ಬಳಕೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next