Advertisement

UV Fusion: ಮಲೆನಾಡು ಮತ್ತದರ ಜೀವನ ಪಾಡು

02:39 PM Nov 07, 2023 | Team Udayavani |

ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಇರಲು ಇಚ್ಛಿಸುವವರು ಇದ್ದಾರೆ. ಮಲೆನಾಡೆಂದರೆ ಮೊದಲು ನೆನಪಾಗುವುದು ಅಲ್ಲಿನ ಹಸುರು ಶ್ರೀಮಂತಿಕೆ, ಆದರೆ ಅಲ್ಲಿ ಬದುಕು ಸವೆಸುವವರ ಕುರಿತು ನಾವು ಯಾರೂ ಕೂಡ ತಿಳಿದುಕೊಳ್ಳಲು ಬಯಸುವುದೇ ಇಲ್ಲ.

Advertisement

ಮಲೆನಾಡಿನ ಜನರು ಮನೆಯಲ್ಲಿ ಸ್ವಂತ ವಾಹನಗಳನ್ನು ಹೊಂದಿರುತ್ತಾರೊ ಇಲ್ಲವೊ ಗೊತ್ತಿಲ್ಲ ಆದರೆ, ತಮ್ಮ ತಮ್ಮ ಕೃಷಿ ಭೂಮಿಯನ್ನು ಮಾತ್ರ ಹೆಚ್ಚಿನ ಎಲ್ಲ ಕುಟುಂಬಗಳು ಹೊಂದಿರುತ್ತವೆ. ಮಲೆನಾಡಿನ ಮುಂಜಾನೆಯ ಕುರಿತು ಸ್ವಲ್ಪ ತಿಳಿದುಕೊಳ್ಳುತ್ತ  ಹೋಗೋಣ, ಅಲ್ಲಿ ಎಲ್ಲರಿಗಿಂತ ಮೊದಲು ಬೆಳಕು ಹರಿಯುವುದು ಮನೆಯಲ್ಲಿ ಸಾಕಿದಂತಹ ಕೋಳಿಗಳಿಗೆ, ಅವುಗಳೇ ಮಲೆನಾಡಿನ ಅಲರಾಮ್‌ ಎಂದರೆ ನಿಜಕ್ಕೂ ತಪ್ಪಾಗದು.

ಅಲ್ಲಿಂದ ಆರಂಭವಾಗುವ ಮಲೆನಾಡಿಗರ ದಿನಚರಿ ಅದ್ಭುತ. ಸಾಮಾನ್ಯವಾಗಿ ಒಂದು ಕುಟುಂಬ ಎಂದರೆ ಅಜ್ಜ ಅಜ್ಜಿಯರಿಂದ ಹಿಡಿದು ಮೊಮ್ಮಕ್ಕಳವರೆಗೆ ಎಲ್ಲರೂ ಇರುತ್ತಾರೆ. ಮಕ್ಕಳಿಗೆ ಬೆಳಗಾದರೆ ಮೊದಲ ಕೆಲಸ ಕಾಫಿ ಲೋಟ ಬಾಯಿಗಿಟ್ಟುಕೊಂಡು ಒಲೆಯ ಎದುರಿಗೆ ಕೂರುವುದು. ಅದು ಮನೆಯಲ್ಲಿ ಅಪ್ಪ ಏಳುವವರೆಗೆ ಮಾತ್ರ, ಎದ್ದ ಕೂಡಲೇ ಮಗ ಬಚ್ಚಲಿನಲ್ಲಿ ಬಾಯಿ ಮುಕ್ಕಳಿಸುತ್ತಿರುತ್ತಾನೆ. ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವುದು ಪಿತೃ ಪ್ರಧಾನ ಕುಟುಂಬಗಳು ಮನೆಯ ಯಜಮಾನನಾದವನು ಮನೆಯಿಂದಾಚೆ ಹೋಗಿ ದುಡಿದು ಬರುತ್ತಾನೆ, ಆತನ ಹೆಂಡತಿ ಮನೆ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಳು, ಈಗೀಗ ಮಹಿಳೆಯರು  ಕೂಡ ಸ್ವತಃ ತಾವೇ ದುಡಿಯುತ್ತಾರೆ, ಇದು ಒಂದು ರೀತಿಯಲ್ಲಾದರೆ ಇನ್ನು ಮುಂದಿನದ್ದು ಮತ್ತೂಂದು ರೀತಿಯದ್ದು.

ಬೆಳಗ್ಗೆ ಕೆಲಸಕ್ಕೆ ಹೋಗುವ ಗಂಡನಿಗೆ ಬುತ್ತಿ ಶಾಲೆಗೆ ತೆರಳುವ ಮಕ್ಕಳಿಗೆ ತಿಂಡಿ, ಇವಿಷ್ಟು ಬೆಳಗ್ಗೆ 8ರ ಒಳಗೆ ಸಿದ್ಧವಾಗಬೇಕು ಅಂದರೆ ಆಕೆ ಎಷ್ಟು ಹೊತ್ತಿಗೆ ಹಾಸಿಗೆ ಬಿಡಬೇಕೆಂದು ನೀವೇ ಯೋಚನೆ ಮಾಡಿ ನೋಡಿ.ಅದಲ್ಲದೆ ಎಲ್ಲರೂ ಕೆಲಸಕ್ಕೆ ಹೊರಡುವ ಸಮಯಕ್ಕೆಯೇ ತಾನೂ ಹೊರಡಬೇಕು. ಜೀವನದಲ್ಲಿ ಸಣ್ಣ ಪುಟ್ಟ ಕಷ್ಟಗಳಿಗೆ ನಲುಗಿ ಹೋಗುವ ನಾವೆಲ್ಲಿ, ದಿನದ ಹಗಲಿನ ಅವಧಿ ಪೂರ್ತಿ ದುಡಿಯುವ ಅವರೆಲ್ಲಿ.

ಮನೆಯ ಯಜಮಾನನಾದವನು ಬಾವಿ ತೋಡುವುದಕ್ಕೋ ಅಥವಾ ಮನೆ ಕಟ್ಟುವ ಅಂದರೆ ಗಾರೆ ಕೆಲಸಕ್ಕೆ ಹೋದರೆ ಆತನ ಹೆಂಡತಿ ಊರಿನ ಎಸ್ಟೇಟ್‌ ಅಥವಾ ಸಣ್ಣ ಪುಟ್ಟ ತೋಟಗಳಿಗೆ ಬೇರೆ ಹೆಂಗಸರನ್ನೊಡಗೂಡಿಕೊಂಡು ಆಕೆಯು ಅತ್ತ ಹೆಜ್ಜೆ ಹಾಕಿಬಿಡುತ್ತಾಳೆ. 9ರ ಹೊತ್ತಿಗೆ ಕೆಲಸದ ಜಾಗಕ್ಕೆ ತಲುಪಿದ್ದರೆ, ಅಲ್ಲಿಂದ ಹೆಂಗಸರಿಗೆ ಅಡಿಕೆ ಮರಗಳಿಗೆ ಗೊಬ್ಬರ ಹಾಕುವುದು ಕಾಫಿ ಹಣ್ಣು ಕೊಯ್ಯುವುದು, ಚಿಗುರು ತೆಗೆಯುವುದು, ಇವು ಆಕೆಯ ಕೈಗೆ ಸಿಗುವ ಕೆಲಸಗಳು.

Advertisement

ಹಾ…! ಆಗ ಹೇಳಿದುದರ ಕುರಿತು ಒಂದು ಸಾಲು ನೆನಪಿಗೆ ಬರುತ್ತಿದೆ ಅದನ್ನು ಹೇಳಿಬಿಡುತ್ತೇನೆ. ನಾನಾಗ ಹೇಳಿದೆ ಈಗೀಗ ಮನೆಯ ಹೆಂಗಸರು ಕೆಲಸಕ್ಕೆ ಹೋಗುತ್ತಾರೆಂದು, ಯಾಕಿರಬಹುದೆಂದು ನೀವೂ ಕೇಳಲಿಲ್ಲ, ನಾನೂ ಹೇಳಲಿಲ್ಲ, ಇರಲಿ. ಮೊದಲನೆಯ ಉದ್ದೇಶ ತಾನು ಸಮರ್ಥಳು ಹಾಗೂ ತನ್ನಿಂದ ಆಗದೆ ಇರುವುದು ಯಾವುದು ಇಲ್ಲ ಎನ್ನುವುದನ್ನು ಸಾಬೀತು ಪಡಿಸಿಕೊಳ್ಳುವ ಉದ್ದೇಶ ಒಂದು ಕಡೆಯಾದರೆ, ಮತ್ತೂಂದು ಹೇಳಬಾರದು ಆದರೂ ಹೇಳುತ್ತೇನೆ, ಕುಡಿತ ಎನ್ನುವುದು ಯಾರನ್ನು ಬಿಟ್ಟಿದೆ ಹೇಳಿ ಎಳೆಯರಿಂದ ಹಿಡಿದು ಹಳೆಯರವರೆಗೂ ತನ್ನತ್ತ ಲೀಲಾಜಲವಾಗಿ ತನ್ನತ್ತ ಸೆಳೆದುಕೊಂಡು ಸಾವಿನ ಬಾಯಿಗೆ ತಳ್ಳುತ್ತದೆ.

ಇದಿಷ್ಟು ಹೇಳಿದ ಮೇಲೆ ಕುಡಿತದ ಚಟ ಯಾರಿಗೆ ಎಂಬ ಪ್ರಶ್ನೆ ಬೇಡ. ಮತ್ತೆ ವಿಷಯಕ್ಕೆ ಬರೋಣ. ಹೆಂಗಸರಿಗೆ 9 ರಿಂದ 3.30 ಆದರೆ ಗಂಡಸರಿಗೆ ಹೆಚ್ಚು ಕಮ್ಮಿ 5 ರ ಹೊತ್ತಾಗುತ್ತದೆ.10.30ರ ಚಹಾ ತಿಂಡಿ, ಮಧ್ಯಾಹ್ನದ ಊಟ ಎಲ್ಲವೂ ಅಲ್ಲೇ ಆಗುತ್ತದೆ. ಸಂಜೆ ಮನೆಗೆ ಬಂದು ಕಾಫಿ ಕುಡಿಯುವಷ್ಟು ಸಮಯ ಮಾತ್ರ, ಮತ್ತೆ ಹಂಡೆಗೆ ನೀರು, ಮನೆಯವರಿಗೆ ಅಡಿಗೆ ಸಿದ್ಧವಾಗಬೇಕು. ಕೆಲವೊಂದು ಸಂದರ್ಭ ಇದಿಷ್ಟನ್ನು ಮಾಡಿ ಮನೆಯ ಹೆಂಗಸರು ಅಡಿಕೆ ಸುಲಿಯುವುದಕ್ಕೋ, ಉದುರು ಹೇರುಕುವುದಕ್ಕೋ ಹೋಗುತ್ತಾರೆ, ಅಲ್ಲಿಂದ ಮತ್ತೆ ಮನೆಗೆ ಹಿಂದಿರುಗುವಾಗ ಗಡಿಯಾರದ ಚಿಕ್ಕ ಮುಳ್ಳು ಹನ್ನೊಂದರ ಮುಂದಿರುತ್ತದೆ.

ಇದು ಮಲೆನಾಡು ಮತ್ತದರ ಮಕ್ಕಳ ಕಥೆ. ಹೀಗೆ ಹುಡುಕುತ್ತ ಹೋದರೆ ನಮಗೆ ಅರಿವಿಗೆ ಬಾರದ ಅದೆಷ್ಟೋ ಕುತೂಹಲಕಾರಿ ವಿಷಯಗಳಿವೆ. ಅಲ್ಲಿರುವ ಜನರ ಜೀವನ ಶೈಲಿ ನಿಜಕ್ಕೂ ಒಂದು ರೀತಿ ಸಾಹಸ. ಅವರಿಗೆ ಅವರೇ ಸರಿ ಸಾಟಿ, ಜಗತ್ತು ಇಂದು ಎಷ್ಟೇ ಮುಂದೆ ಬಂದಿರಬಹುದು ಆದರೆ, ನೆಮ್ಮದಿಯ ಜೀವನ ನಡೆಸುವುದರಲ್ಲಿ ನಾವಿನ್ನು ಅಲ್ಲೇ

-ರಾಹುಲ್ ಆರ್‌. ಸುವರ್ಣ

ಆಳ್ವಾಸ್‌ ಕಾಲೇಜು ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next