ಅರಸೀಕೆರೆ: ಪ್ರತಿವರ್ಷ ಆಷಾಢ ಶುದ್ಧ ದ್ವಾದಶಿ ಯಂದು ನಡೆಯುತ್ತಿದ್ದ ಮಾಲೇಕಲ್ ತಿರುಪತಿ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮಹಾರಥೋತ್ಸವ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮಾಘ ಶುದ್ಧ ಷಷ್ಠಿ ಬುಧವಾರ, ನೂರಾರು ಭಕ್ತರ ಸಮ್ಮು ಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ನಗರ ಸಮೀಪದ ಮಾಲೇಕಲ್‌ನ ಇತಿಹಾಸ ಪ್ರಸಿದ್ಧ ತಿರುಪತಿ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ಮಹಾರಥೋತ್ಸವವು ವೈಖಾನ ಸಾಗಮ ಸಂಪ್ರದಾಯದಂತೆ ಬುಧವಾರ ಮಧ್ಯಾಹ್ನ 11.20 ರಿಂದ 12.30 ರೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ನೆರವೇರಿತು.
ಮಹಾರಥಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಸದಸ್ಯ ಜಿ.ವಿ.ಟಿ.ಬಸವರಾಜು, ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ.ಪ್ರಸಾದ್, ಡಿವೈಎಸ್‌ಪಿ ಎಲ್.ನಾಗೇಶ್ ಅವರು ಶಾಸ್ತ್ರೋಕ್ತ ವಾಗಿ ಪೂಜಾ ಕೈಂಕರ್ಯಗಳು ನೆರವೇರಿಸಿದರು.
ನಂತರ ಪುಷ್ಪಾರ್ಚನೆ ಮಾಡಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರಾಮಹೋತ್ಸವದಲ್ಲಿ ನೆರೆದಿದ್ದ ನೂರಾರು ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತ, ಮಹಾರಥೋತ್ಸವನ್ನು ಎಳೆದು ಧನ್ಯತಾ ಭಾವ ಮೆರೆದರು. ರಥ ಸಾಗುತ್ತಿದ್ದಂತೆ ಕೆಲವರ ಬಾಳೆಹಣ್ಣು, ಧವನ, ಹೂವನ್ನು ಎಸೆದು, ತಮ್ಮ ಭಕ್ತಿಭಾವ ಸಮರ್ಪಿಸಿದರು. ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿದ್ದರೂ ಮಳೆ ಬರಲಿಲ್ಲ. ಮುಂಜಾನೆಯಿಂದಲೇ ತಂಪಿನ ವಾತಾವರಣ ಇತ್ತು. ಕೊರೊನಾ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬೆಟ್ಟ ಹತ್ತದ ಭಕ್ತರು: ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ನವದಂಪತಿಗಳು, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದ ಭಕ್ತರು 1250 ಮೆಟ್ಟಿಲುಗಳ ಬೆಟ್ಟವನ್ನು ಹತ್ತಿ ಶ್ರೀನಿವಾಸ, ಪದ್ಮಾವತಿ ಅಮ್ಮನವರ ದರ್ಶನ ಪಡೆಯುತ್ತಿದ್ದರು. ಆದರೆ, ಈ ಬಾರಿ ಬೆಟ್ಟ ಹತ್ತದೇ, ತಪ್ಪಲಿನಲ್ಲಿರುವ ಗೋವಿಂದರಾಯ ಸ್ವಾಮಿ ಮತ್ತು ಶ್ರೀಲಕ್ಷ್ಮೀದೇವಿ ಅಮ್ಮನವರ ದರ್ಶನವನ್ನು ಸಾಲಿನಲ್ಲಿ ನಿಂತು ಪಡೆದು ಪುನೀತರಾದರು.
ಜಾತ್ರಾ ಮಹೋತ್ಸವದಲ್ಲಿ ನಗರಸಭೆ ಪೌರಾಯುಕ್ತ ಕಾಂತರಾಜ್, ಉತ್ಸವ ಸಮಿತಿ ಅಧ್ಯಕ್ಷ ಟಿ.ಎ.ನಾಗರಾಜು, ಸದಸ್ಯರಾದ ವೆಂಕಟೇಶ್ ಬಾಬು, ಎನ್.ಸಿ.ಗೋವಿಂದರಾಜು, ಟಿ.ಆರ್.ಚಂದ್ರು, ಪರಮಶಿವಯ್ಯ, ವಿಶ್ವನಾಥ್, ನಗರಸಭೆ, ತಾಪಂ ಸದಸ್ಯರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.