ಉಡುಪಿ: ಕುಡಿಯುವ ನೀರಿನ ಸಮಸ್ಯೆ ಎಲ್ಲೆಲ್ಲೂ ಕಂಡುಬರುತ್ತಿರುವುದರಿಂದ ನಗರಸಭೆ ವತಿಯಿಂದ ಗುರುವಾರ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ಮತ್ತು ಶ್ರೀಕೃಷ್ಣ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ, ಎಳನೀರಿನ ಅಭಿಷೇಕ ನಡೆಯಿತು.
ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸಚಿವ ಪ್ರಮೋದ್ ಮಧ್ವರಾಜ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ಸದಸ್ಯರಾದ ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಪೌರಾಯುಕ್ತ ಡಿ. ಮಂಜುನಾಥಯ್ಯ ಮೊದಲಾದ ವರು ಉಪಸ್ಥಿತರಿದ್ದರು.
ನೀರಿನ ಕೊರತೆಯಿಂದ ಜನರು, ಗೋವುಗಳು, ರೈತರು ಸಂಕಷ್ಟದಲ್ಲಿದ್ದಾರೆ. ದುರ್ಮುಖೀ ಸಂವತ್ಸರದ ದುರ್ಮುಖ ಕಳೆದು ಹೇಮಲಂಬಿ ಸಂವತ್ಸರ ಆರಂಭವಾಗಿದೆ. ಹೊಸ ಸಂವತ್ಸರದಲ್ಲಿ ಹೇಮದಂತಹ (ಬಂಗಾರ) ಮಳೆಯಾಗಿ ರಾಜ್ಯ ಮತ್ತು ದೇಶದಲ್ಲಿ ಸುಭಿಕ್ಷೆ ನೆಲೆಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.
ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟಿನಲ್ಲಿ ಕೇವಲ 5 – 10 ದಿನ ಮಾತ್ರ ಸಾಕಾಗುವಷ್ಟು ನೀರಿದೆ. ನೀರು ಸರಬರಾಜಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಮಳೆ ಬಾರದಿದ್ದರೆ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಮಳೆ, ಗಾಳಿ, ನೀರನ್ನು ದೇವರೇ ಒದಗಿಸಬೇಕು, ಸರಕಾರದ ನಿಯಂತ್ರಣದಲ್ಲಿಲ್ಲ. ಹಿಂದಿನ ವರ್ಷಗಳಲ್ಲಿ ಮಳೆಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ಅದು ಈಡೇರಿದ್ದು ಈ ವರ್ಷ ಕೂಡ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.