Advertisement

ಮಲೆ ಮಹದೇಶ್ವರ ರಥೋತ್ಸವ ಸಂಪನ್ನ

11:11 PM Oct 29, 2019 | Lakshmi GovindaRaju |

ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ 7.45 ರಿಂದ 9 ರವರೆಗಿನ ಶುಭ ಕಾಲದಲ್ಲಿ ಮಹಾರಥೋತ್ಸವ ನಡೆಯಿತು. ಮಹಾರಥೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ 7.45ರ ವೇಳೆಗೆ ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿಗಳನ್ನು ಸತ್ತಿಗೆ ಸುರಪಾನಿ, ಮಂಗಳವಾದ್ಯಗಳ ಸಮೇತ ದೇವಾಲಯದ ಪ್ರಾಂಗಣಕ್ಕೆ ಕರೆ ತರಲಾಯಿತು.

Advertisement

ಬಳಿಕ, ಪಟ್ಟದ ಗುರುಸ್ವಾಮಿಗಳ ಸಾನ್ನಿಧ್ಯದಲ್ಲಿ ಬೇಡಗಂಪಣ ಅರ್ಚಕರು ಉತ್ಸವಮೂರ್ತಿಯನ್ನು ಸಿದ್ಧಗೊಳಿಸಿ ಧೂಪ, ದೀಪ, ಮಂಗಳಾರತಿ ಸೇರಿ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ಕೈಗೊಂಡು ಬಿಳಿ ಆನೆ ಉತ್ಸವ ನೆರವೇರಿಸಿದರು. ಬಳಿಕ, ಉತ್ಸವಮೂರ್ತಿಯನ್ನು ಹೂ ತಳಿರು ತೋರಣಗಳಿಂದ ಸಿಂಗರಿಸಿ, ಸಿದ್ಧಗೊಳಿಸಿದ್ದ ರಥೋತ್ಸವಕ್ಕೆ ಇಟ್ಟು ಬೂದುಗುಂಬಳಕಾಯಿ ಆರತಿ ಬೆಳಗುವ ಮೂಲಕ ಮಹಾರಥೋತ್ಸವಕ್ಕೆ 8.30ರ ವೇಳೆಗೆ ಚಾಲನೆ ನೀಡಲಾಯಿತು.

ಮಹಾರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ಉಘೇ.. ಮಾದಪ್ಪ ಉಘೇ… ಮಾದಪ್ಪ ಎಂದು ಜಯ ಘೋಷಗಳನ್ನು ಕೂಗುತ್ತಾ ಭಕ್ತಿ ಮೆರೆದರು. ಮಹಾರಥೋತ್ಸವಕ್ಕೆ ಬೇಡಗಂಪಣ ಕುಲದ 101 ಹೆಣ್ಣುಮಕ್ಕಳು ಬೆಲ್ಲದ ಆರತಿ ಬೆಳಗಿ ರಂಗು ತಂದರು. ದೇವಾಲಯದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಹಾಕಿ ರಥೋತ್ಸವಕ್ಕೆ ತೆರೆ ಎಳೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next