Advertisement

ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್‌: ಮರಿನ್‌ ವಿರುದ್ಧ ಮಂಕಾದ ಸೈನಾ

01:30 AM Jan 20, 2019 | Team Udayavani |

ಕೌಲಾಲಂಪುರ: ಭಾರತದ ತಾರಾ ಆಟಗಾರ್ತಿ ಸೈನಾ ನೆಹ್ವಾಲ್‌ “ಮಲೇಶ್ಯ ಮಾಸ್ಟರ್’ ಬ್ಯಾಡ್ಮಿಂಟನ್‌ ಕೂಟದ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

Advertisement

ಶನಿವಾರ ನಡೆದ ವನಿತಾ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರನ್ನು ಸ್ಪೇನಿನ ಕ್ಯಾರೋಲಿನ್‌ ಮರಿನ್‌ 21-16, 21-13 ನೇರ ಗೇಮ್‌ಗಳಲ್ಲಿ ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದರು. ಗೆದ್ದರೆ ಮರಿನ್‌ 2ನೇ ಸಲ ಇಲ್ಲಿ ಪ್ರಶಸ್ತಿ ಎತ್ತಲಿದ್ದಾರೆ.

ಸೈನಾ ತೀವ್ರ ಪೈಪೋಟಿ ನೀಡಿದ್ದು ಮೊದಲ ಗೇಮ್‌ನ ಆರಂಭದಲ್ಲಿ ಮಾತ್ರ. 5-2 ಅಂಕಗಳ ಮುನ್ನಡೆ ಸೈನಾ ಅವರದ್ದಾಗಿತ್ತು. ಇದಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ ಮರಿನ್‌ ಸತತ ಅಂಕಗಳನ್ನು ಸಂಪಾದಿಸಿ 11-9 ಮುನ್ನಡೆ ಸಾಧಿಸಿದರು. 14-14 ಅಂಕಗಳ ವರೆಗೆ ಸೈನಾ ಪ್ರತಿರೋಧ ಒಡ್ಡಿದರಾದರೂ ಮರಿನ್‌ ಸತತ 6 ಅಂಕಗಳನ್ನು ಗಳಿಸಿ ಮುನ್ನುಗ್ಗಿದರು. ಹೀಗೆ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.

2ನೇ ಗೇಮ್‌ನಲ್ಲಿ ಮರಿನ್‌ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿ 6-2 ಮುನ್ನಡೆ ಸಂಪಾದಿಸಿದರು. ಸೈನಾಗೆ ಅಂಕ ಗಳಿಸಲು ಹೆಚ್ಚಿನ ಅವಕಾಶವನ್ನೇ ನೀಡಲಿಲ್ಲ. ಸೈನಾ ತಪ್ಪುಗಳ ಲಾಭವೆತ್ತಿದ ಮರಿನ್‌ ಸುಲಭದಲ್ಲಿ ಅಂಕಗಳನ್ನು ಬಾಚುತ್ತ ಹೋದರು. ಸೈನಾ ಭಾರೀ ಅಂತರದಿಂದ ಸೋತರು.

ಇಂತಾನನ್‌ ಎದುರಾಳಿ
ರವಿವಾರದ ಪ್ರಶಸ್ತಿ ಕಾಳಗದಲ್ಲಿ ಕ್ಯಾರೋಲಿನಾ ಮರಿನ್‌ ಥಾಯ್ಲೆಂಡ್‌ನ‌ ರಚನೋಕ್‌ ಇಂತಾನನ್‌ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಇಂತಾನನ್‌ ಮಲೇಶ್ಯದ ಗೋ ಜಿನ್‌ ವೀ ವಿರುದ್ಧ 21-16, 21-16 ಅಂತರದ ಗೆಲುವು ಒಲಿಸಿಕೊಂಡರು.

Advertisement

ಪುರುಷರ ಫೈನಲ್‌
ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಚೀನದ ಚೆನ್‌ ಲಾಂಗ್‌ ಮತ್ತು ಕೊರಿಯಾದ ಸನ್‌ ವಾನ್‌ ಹೊ ಪರಸ್ಪರ ಸೆಣಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಮಲೇಶ್ಯದ ಲ್ಯೂ ಡ್ಯಾರನ್‌ ವಿರುದ್ಧ ಸನ್‌ ವಾ ಹೊ “ವಾಕ್‌ ಓವರ್‌’ ಪಡೆದರು. ಇನ್ನೊಂದು ಪಂದ್ಯದಲ್ಲಿ ಚೆನ್‌ ಲಾಂಗ್‌ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ 21-13, 21-18 ಅಂತರದ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next