Advertisement

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

11:56 PM Apr 26, 2024 | Team Udayavani |

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆಯನ್ನು ರಾಜ್ಯ ಸರಕಾರ ಹಗುರವಾಗಿ ಪರಿಗಣಿಸಿದ್ದು, ಮೊದಲ ದಿನವೇ ತನಿಖೆ ಹಾದಿ ತಪ್ಪಿದೆ. ಕುಟುಂಬದವರಿಗೆ ನ್ಯಾಯ ಸಿಗಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

Advertisement

ನೇಹಾಳ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ದೊಡ್ಡ ದುರ್ಘ‌ಟನೆ ನಡೆದರೂ ಪೊಲೀಸರು ಹಂತಕನನ್ನು ತಮ್ಮ ವಶಕ್ಕೆ ಕೇಳದೆ ಮೊದಲ ದಿನದಿಂದಲೇ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ಮೊದಲ ದಿನವೇ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುವಲ್ಲಿ ವಿಫಲರಾದರು. ಈ ಪ್ರಕರಣದ ತನಿಖೆ ಮೊದಲ ದಿನದಿಂದಲೇ ದಾರಿ ತಪ್ಪಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಘಟನೆ ಬಗ್ಗೆ ರಾಜ್ಯ ಸರಕಾರ ನಡೆದುಕೊಂಡ ರೀತಿ ಪ್ರಕರಣದ ದಾರಿ ತಪ್ಪಿಸುವಂತದ್ದಾಗಿದೆ. ಇಂದಿಗೂ ಮೃತಳ ತಂದೆ-ತಾಯಿ ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಅದೆಲ್ಲದರ ಸಮಗ್ರ ತನಿಖೆ ಆಗಬೇಕಾದರೆ ಈ ಪ್ರಕರಣ ಸಿಬಿಐಗೆ ವಹಿಸಬೇಕೆಂದು ಹೇಳುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಸಿಐಡಿಗೆ ಕೊಟ್ಟು ಕೈತೊಳೆದುಕೊಳ್ಳುವ ಕೆಲಸ ಮಾಡಿದೆ. ಸರಕಾರ ಅಪರಾಧಿಗಳನ್ನು ರಕ್ಷಿಸುತ್ತಿಲ್ಲ ಎಂದಾದರೆ ಯಾರಿಗೂ ಭಯಪಡದೆ ಇದನ್ನು ಸಿಬಿಐಗೆ ವಹಿಸಬೇಕು ಎಂದರು.

ಯುವತಿ ಹಾಡಹಗಲೇ ಕಾಲೇಜ್‌ ಕ್ಯಾಂಪಸ್‌ನಲ್ಲಿ ಕೊಲೆಯಾದರೂ ವಿಪಕ್ಷಗಳು ಸುಮ್ಮನೆ ಕುಳಿತು ಕೊಳ್ಳಬೇಕೆಂದು ಮುಖ್ಯಮಂತ್ರಿ ಭಾವಿಸುತ್ತಿದ್ದಾರೋ? ಈ ಘಟನೆಯಿಂದ ಇಡೀ ರಾಜ್ಯದ ಜನತೆ ಹೌಹಾರಿದ್ದಾರೆ, ಆತಂಕಗೊಂಡಿದ್ದಾರೆ. ಇದನ್ನು ಖಂಡಿಸಿ ಬಿಜೆಪಿ ಮಾತ್ರವಲ್ಲ ಮಠಾಧೀಶರು, ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಯವರು ಪ್ರತಿರೋಧ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರೆಲ್ಲರೂ ರಾಜಕೀಯ ಮಾಡುತ್ತಿದ್ದಾರೆಯೇ? ನಿಮ್ಮ ಹೇಳಿಕೆಗಳಿಂದಲೇ ರಾಜಕೀಯ ಲೇಪ ಬಂದಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಈಗಲೂ ಕಾಲ ಮಿಂಚಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ನ್ಯಾಯ ಸಿಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next