Advertisement

ಹೊಸ ವರ್ಷದ ಮೊದಲ ವಾರ ಮಲೇಷಿಯಾ ಮರಳು ಲಭ್ಯ

06:20 AM Dec 29, 2017 | Harsha Rao |

ಬೆಂಗಳೂರು: ರಾಜ್ಯದಲ್ಲಿ ನೈಸರ್ಗಿಕ ನದಿ ಮರಳಿನ ಕೊರತೆ ನಿವಾರಿಸಲು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಮಲೇಷಿಯಾದಿಂದ ಮರಳು ಆಮದಿಗೆ ಮುಂದಾಗಿದ್ದು, ಹೊಸ ವರ್ಷದ ಮೊದಲ ವಾರದಲ್ಲಿ ಗ್ರಾಹಕರಿಗೆ 195 ರೂ. ದರದಲ್ಲಿ 50 ಕೆ.ಜಿ. ಮರಳಿನ ಮೂಟೆ ಸಿಗಲಿದೆ.

Advertisement

ಏರಿಳಿತ: ಎಂಎಸ್‌ಐಎಲ್‌ ಬೆಂಗಳೂರಿನಲ್ಲಿ ಒಂದು ಟನ್‌ ಮಲೇಷಿಯಾ ನೈಸರ್ಗಿಕ ನದಿ ಮರಳಿಗೆ 3,900 ರೂ. ದರ ನಿಗದಿ ಪಡಿಸಿದೆ. ಆರಂಭದಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ಹಾಗೂ ಹುಬ್ಬಳ್ಳಿ- ಧಾರವಾಡಗಳಲ್ಲಿ ಎಂಎಸ್‌ಐಎಲ್‌ ಸ್ಥಾಪಿಸಲಿರುವ ಯಾರ್ಡ್‌ಗಳಲ್ಲಿ ಮರಳಿನ ಮೂಟೆಗಳು ಲಭ್ಯವಾಗಲಿವೆ. ಅಂತರಕ್ಕೆ ತಕ್ಕಂತೆ ಮೂಟೆಯ ಬೆಲೆಯಲ್ಲೂ ಏರಿಳಿತವಾಗಲಿದೆ.

ಪರದಾಟ: ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ನೈಸರ್ಗಿಕ ನದಿ ಮರಳಿನ ಗಣಿಗಾರಿಕೆಗೆ ನಿಷೇಧವಿರುವುದರಿಂದ ಪರ್ಮಿಟ್‌, ರಸೀದಿ
ಇಲ್ಲದೆ ಅಕ್ರಮವಾಗಿ ಪೂರೈಕೆಯಾಗುವ ಮರಳನ್ನೇ ಜನ ಬಳಸಬೇಕಾದ ಅನಿವಾರ್ಯತೆ ಇದೆ. ಕೆಲ ವರ್ಷಗಳಿಂದ
ನೈಸರ್ಗಿಕ ಮರಳಿನ ಬೇಡಿಕೆ, ಬೆಲೆ ಏರುಮುಖವಾಗಿದೆ. ಹಾಗಾಗಿ ಗ್ರಾಹಕರು ಪರದಾಡುವಂತಾಗಿದೆ.

ಮುಕ್ತ ಅವಕಾಶ: ನೈಸರ್ಗಿಕ ಮರಳಿನ ಅಭಾವ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಲೇಷಿಯಾದಿಂದ ಮರಳು
ಆಮದಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಈ ಸಂಬಂಧ ಉಪಖನಿಜ ನಿಯಮಾವಳಿಗೆ ಇತ್ತೀಚೆಗೆ ತಿದ್ದುಪಡಿ ತರಲಾಗಿದೆ. ಅದರಂತೆ ಯಾರು ಬೇಕಾದರೂ ನಿಯಮಾನುಸಾರ ಮಲೇಷಿಯಾದಿಂದ ಮರಳು ಆಮದು ಮಾಡಿಕೊಂಡು ಮಾರಾಟ ಮಾಡಲು ಅವಕಾಶವಿದೆ. ಸರ್ಕಾರದ ಎಂಎಸ್‌ಐಎಲ್‌ ಸಂಸ್ಥೆಯು ಮರಳು ಆಮದು ಮಾಡಿಕೊಂಡು ಸ್ಪರ್ಧಾತ್ಮಕ ಬೆಲೆಯಲ್ಲಿ ಜನರಿಗೆ ಮಾರಾಟ ಮಾಡಲು ಮುಂದಾಗಿದೆ. ಖಾಸಗಿ ಸಂಸ್ಥೆಗಳು ಈ ವ್ಯವಹಾರದಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ.

ಪೂರೈಕೆ ಹೇಗೆ?
ಮಲೇಷಿಯಾದಿಂದ ಹಡಗಿನಲ್ಲಿ ಆಂಧ್ರಪ್ರದೇಶದ ಕೃಷ್ಣ ಪಟ್ಟಣಂಗೆ ಪೂರೈಕೆಯಾಗುವ ನೈಸರ್ಗಿಕ ಮರಳು ಅಲ್ಲಿಯೇ 50
ಕೆ.ಜಿ. ಚೀಲಗಳಲ್ಲಿ ಶೇಖರಣೆಯಾಗಲಿದೆ. ನಂತರ ಮರಳಿನ ಮೂಟೆಗಳನ್ನು ರೈಲಿನಲ್ಲಿ ಬೆಂಗಳೂರಿಗೆ ಪೂರೈಸಲಾಗುತ್ತದೆ.
ಬಿಡದಿ, ಕ್ಯಾತಸಂದ್ರ, ದೊಡ್ಡಬಳ್ಳಾಪುರ, ಚನ್ನಸಂದ್ರ ಸೇರಿ ಬೆಂಗಳೂರಿನ ಸುತ್ತಮುತ್ತ ಆಯ್ದ ಕಡೆ ಯಾರ್ಡ್‌ಗಳಲ್ಲಿ ಮರಳಿನ
ಮೂಟೆ ಮಾರಾಟ ವ್ಯವಸ್ಥೆಯನ್ನು ಎಂಎಸ್‌ಐಎಲ್‌ ಕಲ್ಪಿಸಲಿದೆ. ಮಂಡ್ಯ, ಮೈಸೂರು, ಹುಬ್ಬಳ್ಳಿ- ಧಾರವಾಡಗಳಲ್ಲಿ ತಲಾ ಒಂದು ಯಾರ್ಡ್‌ ತೆರೆದು ಮಾರಾಟ ಮಾಡಲು ತೀರ್ಮಾನಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next