ತಿರುವನಂತಪುರಂ: ಮಲಯಾಳಂನ ಖ್ಯಾತ ಕಿರುತೆರೆ ನಟ ರಮೇಶ್ ವಲಿಯಸಲಾ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಿರುವನಂತಪುರಂನಲ್ಲಿರುವ ಮನೆಯಲ್ಲಿ ಶನಿವಾರ (ಸೆ.11) ಮುಂಜಾನೆ 6.30 ರ ಸುಮಾರಿಗೆ ರಮೇಶ್ ವಲಿಯಸಲಾ ಅವರ ಮೃತದೇಹ ಸಿಲ್ಲಿಂಗ್ ಪ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದನ್ನು ನೋಡಿ ಶಾಕ್ ಆದ ಆತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಇದೊಂದು ಅಸ್ವಾಭಾವಿಕ ಸಾವು ಎಂದು ಪರಿಗಣಿಸಿ ಸೆಕ್ಷನ್ 174ರಡಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಕೋವಿಡ್ ಲಾಕ್ ಡೌನ್ ನಲ್ಲಿ ರಮೇಶ್ ಅವರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಇದೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.
ತಿರುವನಂತಪುರಂ ವಲಿಯಾಶಲಾದಲ್ಲಿ ಎರಡನೇ ಪತ್ನಿ ಹಾಗೂ ಪುತ್ರನ ಜೊತೆ ರಮೇಶ್ ವಾಸವಾಗಿದ್ದರು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಶೂಟಿಂಗ್ ಮುಗಿಸಿಕೊಂಡು ಮನೆಗೆ ವಾಪಾಸ್ ಆಗಿದ್ದ ಅವರು ಇಂದು ಮುಂಜಾನೆ ನೇಣಿಗೆ ಶರಣಾಗಿದ್ದಾರೆ.
ರಮೇಶ್ ಕೇರಳದ ಅತ್ಯಂತ ಜನಪ್ರಿಯ ಮತ್ತು ಕಾರ್ಯನಿರತ ಟಿವಿ ಸೀರಿಯಲ್ ನಟರಲ್ಲಿ ಒಬ್ಬರಾಗಿದ್ದರು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ 22 ವರ್ಷಗಳಿಂದ ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದರು.