Advertisement
ಕಾರ್ಯಕ್ರಮ ಹಿನ್ನೆಲೆ ಗಾಯಕ ವಿ. ರಘುರಾಂ ಬೆಂಗಳೂರು ಅವರ ಸುಶ್ರಾವ್ಯವಾದ ನಾಟ ರಾಗದ ಮಹಾ ಗಣಪತಿಂನಿಂದ ಆರಂಭಗೊಂಡಿತು. ಮಾಲವಿಕ ತನ್ನ ಪ್ರದರ್ಶನವನ್ನು ವಿ| ಬಾಲಸುಬ್ರಹ್ಮಣ್ಯ ಶರ್ಮ ರಚಿಸಿದ ನಿರಂಜನಿ ರಾಗ, ಮಿಶ್ರಛಾಪು ತಾಳದ ಪುಷ್ಪಾಂಜಲಿಯಿಂದ ಪ್ರಾರಂಭಿಸಿದರು. ವಿವಿಧ ಅಡವು, ವಿನ್ಯಾಸ, ಶೊಲ್ಕಟ್ಟು, ತೀರ್ಮಾನ ಗಳಿಂದ ಈ ನೃತ್ಯಬಂಧ ಸರ್ವರಿಗೂ ನಮನಗೈಯುವ ಭಾವ ಹೊಂದಿದ್ದು ನರ್ತಕಿ ಇದನ್ನು ಚೆನ್ನಾಗಿ ನಿರ್ವಹಿಸಿದರು.
Related Articles
Advertisement
ತದನಂತರ ಪ್ರಸ್ತುತಿಗೊಂಡ ತುಸು ಗಂಭೀರವಾದ ಸಾಹಿತ್ಯ, ಲಯ ಪ್ರಧಾನವಾಗಿರುವ ಭೈರವಿ ರಾಗದ ಯಾರೋ ಇವರ್ಯಾರೋ ತಮಿಳು ಪದಂನ ನಾಯಕ ಶ್ರೀರಾಮ ಹಾಗೂ ನಾಯಕಿ ಸೀತಾ. ಸೀತಾ ಸ್ವಯಂವರದ ಒಂದು ಪೂರ್ವಭಾವಿ ಸನ್ನಿವೇಶದಲ್ಲಿ ನಾಯಕ ಮತ್ತು ನಾಯಕಿ ಪರಸ್ಪರ ಅವಲೋಕಿಸುವ, ಅವರಲ್ಲಿ, ಮುಖ್ಯವಾಗಿ ಸೀತೆಯಲ್ಲಿ ಉಂಟಾಗುವ ಶೃಂಗಾರಪೂರ್ಣ ಭಕ್ತಿ ಮುಂತಾದ ಸಮ್ಮಿಶ್ರ ಭಾವಗಳು ಈ ಪದಂನ ವಸ್ತು. ಬಹಳ ಹಳೆಯದಾದ, ಸಂಗೀತ ಕಛೇರಿಗಳಲ್ಲಿ ಗಾಯಕರ ಪ್ರಧಾನ ಆಯ್ಕೆ ಎನಿಸಿದ ಈ ವಿಳಂಬ ಆದಿ ತಾಳದ ಪದಂನ್ನು ಆಯ್ಕೆ ಮಾಡಿ ನೃತ್ಯ ಸಂಯೋಜಿಸಿದ ಗುರುಗಳಿಗೂ ನರ್ತಿಸಿದ ಶಿಷ್ಯೆಗೂ ವಿಶೇಷ ಅಭಿನಂದನೆಗಳು. ಜೀವನಾನುಭವ ಪಕ್ವತೆಯೇ ಈ ಪದಂನ್ನು ಅಭಿನಯಿಸಲು ಬೇಕಾದ ಗುಣ. ಮಾಲವಿಕಾ ಹಿತವಾಗಿ ಇದನ್ನು ಅಭಿನಯಿಸಿದರು.
ಜಯದೇವನ ಗೀತ ಗೋವಿಂದ ಅಷ್ಟನಾಯಿಕೆಯರ ಭಾವ ಪೋಷಣೆಗೆಂದೇ ಸೃಷ್ಟಿಗೊಂಡಂತಿರುವ ರಚನೆ. ಎಂಟು ಪದ್ಯಗಳಿರುವ ಸರ್ಗಗಳನ್ನು ಹೊಂದಿರುವ ಈ ಗೀತಗೋವಿಂದದ ಕೆಲವು ಸರ್ಗಗಳನ್ನು ಮೆಡ್ಲೆ ರೂಪದಲ್ಲಿ ಪ್ರಸ್ತುತಪಡಿಸಿದರು. ರಾಧೆಯ ವಿರಹೋತ್ಕಂಠಿತಾ, ಖಂಡಿತಾ, ಕಲಹಂತರಿಕಾ ಮುಂತಾದ ನಾಯಕೀಭಾವಗಳನ್ನು ಬಿಂಬಿಸುತ್ತಾ ಕೊನೆಗೆ ಮಾಧವನಲ್ಲಿ ಐಕ್ಯವಾಗುವ ಸಾಹಿತ್ಯದ ಅಭಿನಯವನ್ನು ನೃತ್ಯಗಾತಿ ಮನೋಜ್ಞವಾಗಿ ನಿರ್ವಹಿಸಿದರು. ಇದಕ್ಕೆ ಗಾಯಕ ರಘುರಾಂ ಅವರ ರಾಗ ಸಂಯೋಜನೆ ಆಪ್ಯಾಯಮಾನವಾಗಿತ್ತು.
ಕಾರ್ಯಕ್ರಮದ ಮಂಗಳವು ವಿ| ಗುರುಮೂರ್ತಿಯವರ ಜೋಗ್ ರಾಗದ ತಿಲ್ಲಾನ ಖಂಡ ತ್ರಿಪುಟ ತಾಳದಲ್ಲಿದ್ದು, ವಿವಿಧ ಅಡವುಗಳು, ಭಂಗಿಗಳು, ಆರುಧಿಗಳು ಹಾಗೂ ರಂಗಾಕ್ರಮಣಗಳಿಂದ ಸುಂದರವಾಗಿ ಮೂಡಿಬಂತು.ಹಿಮ್ಮೇಳ ಕಲಾವಿದರು ಈ ಪ್ರದರ್ಶನಕ್ಕೆ ಮಹತ್ವದ ಕೊಡುಗೆ ನೀಡಿದರು. ಗಾಯಕ ರಘುರಾಂ ಸಾಹಿತ್ಯ ಸ್ಪಷ್ಟತೆಯ ಮಧುರ ಗಾಯನ ನೀಡಿದರೆ, ಮೃದಂಗವಾದಕ ಹರ್ಷ ಸಾಮಗ ತಮ್ಮ ಮೃದಂಗದ ಎಡಬಲಗಳ ಸರಿದೂಗುವ ನುಡಿತಗಳಿಂದ ನಟುವಾಂಗದ ಗುರುಗಳಿಗೂ ನೃತ್ಯಾಂಗನೆಗೂ ಉತ್ತಮ ನೆರವು ನೀಡಿದರು. ನಿತೀಶ್ ಅಮ್ಮಣ್ಣಾಯ ತನ್ನ ಕೊಳಲಿನ ನಿನಾದದ ಅಲೆಯನ್ನು ಮಧುರವಾಗಿ ತೇಲಿಸಿದರೆ, ಬೆಂಗಳೂರಿನ ವಿ| ಗೋಪಾಲರು ತಮ್ಮ ವೀಣೆಯ ಝೇಂಕಾರದಿಂದ ಕಳೆ ತುಂಬಿದರು. ಉತ್ತಮ ವೇದಿಕೆ, ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ, ಪ್ರಸಾಧನ ಮತ್ತು ವಸ್ತ್ರಾಲಂಕಾರಗಳ ಜತೆಗೆ ಪ್ರಬುದ್ಧ ಪ್ರೇಕ್ಷಕರು ಕೂಡ ಈ ರಂಗಪ್ರವೇಶದ ಯಶಸ್ಸಿಗೆ ಕಾರಣರು. ಕುಂದಾಪುರದ ಹೆಬ್ಟಾರ್ ಕ್ಲಿನಿಕ್‌ನ ಡಾ| ಎಚ್.ಆರ್. ಹೆಬ್ಟಾರ್ ಹಾಗೂ ಡಾ| ಪುಷ್ಪಗಂಧಿನಿ ಹೆಬ್ಟಾರ್ ದಂಪತಿಯ ಪುತ್ರಿಯಾಗಿರುವ ಮಾಲವಿಕಾ ಕೂಡ ವೈದ್ಯೆ. ಮಣಿಪಾಲದ ಕೆಎಂಸಿಯಲ್ಲಿ ಜೆನೆಟಿಕ್ಸ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ತನ್ನ ಸ್ವ ಆಸಕ್ತಿ ಹಾಗೂ ಹೆತ್ತವರ ಒತ್ತಾಸೆಯಿಂದ ಎಳವೆಯಿಂದಲೇ ಭರತನಾಟ್ಯ ಕಲಿಕೆಗೆ ಒಡ್ಡಿಕೊಂಡವರು. ಈಕೆಯ ಪ್ರಥಮ ಗುರುಗಳು ಶ್ರೀನಿವಾಸ ಆಚಾರ್ಯ ಹಾಗೂ ಅವರ ಪುತ್ರಿ ಶ್ರದ್ಧಾ ಆಚಾರ್ಯ. ಆ ಬಳಿಕ ವಿ| ಲಕ್ಷ್ಮೀ ಗುರುರಾಜ್ ಅವರಿಂದ ನೃತ್ಯಶಿಕ್ಷಣವನ್ನು ಅತ್ಯಂತ ಶ್ರದ್ಧೆ, ಬದ್ಧತೆ ಹಾಗೂ ಪರಿಶ್ರಮಗಳಿಂದ ಪಡೆಯುತ್ತಿದ್ದಾರೆ. ವಿ| ಪ್ರತಿಭಾ ಎಂ.ಎಲ್. ಸಾಮಗ