ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ಬಲ್ಲರಾಯನದುರ್ಗದ ಕೆಳಭಾಗದಿಂದ ಭಾರಿ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿರುವ ಕುರಿತು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಮಕ್ಕಿ, ಪರ್ಲ, ದೈಪಿತ್ತಿಲು, ಎಲ್ಯರಕಂಡ ಸಹಿತ ಸುತ್ತಮುತ್ತ 16 ಕ್ಕೂ ಅಧಿಕ ಮನೆಗಳಿವೆ. ಕಳೆದ ವರ್ಷ ಆಗಸ್ಟ್ ಅವಧಿಯಲ್ಲಿ ಈ ಪ್ರದೇಶದಲ್ಲಿ ಭಾರಿ ಭೂ ಕುಸಿತ ಉಂಟಾದ ಹಿನ್ನೆಲೆ ಇಲ್ಲಿನ 40 ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿ ಬೇರೆಡೆ ಆಶ್ರಯ ನೀಡಲಾಗಿತ್ತು.
ಜು.14 ರಂದು ರಾತ್ರಿ ವೇಳೆಗೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಂದು ಇದೇ ಪ್ರದೇಶದಲ್ಲಿ ಹಾದು ಬರುವ ಏಳುವರೆ ಹಳ್ಳವು ಮಣ್ಣುಮಿಶ್ರಿತ ನೀರು ಬರುತ್ತಿರುವುದಾಗಿ ಸ್ಥಳೀಯರಾದ ಕೇಶವ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ 250 ಹೇಕ್ಟೇರ್ ಅಧಿಕ ಕೃಷಿ ಹೊಂದಿದ್ದು, ಕಳೆದ ಮೂರು ವರ್ಷಗಳ ಹಿಂದೆ ಭೂ ಕುಸಿತ ಉಂಟಾದ ಬಳಿಕ ಅರಣ್ಯ ಇಲಾಖೆಯು ಇಲ್ಲಿನ ಕುಟುಂಬಗಳನ್ನು ಪರಿಹಾರ ಒದಗಿಸಿ ಸ್ಥಳಾಂತರಿಸಲು ನಿರ್ಧರಿಸಿತ್ತು. ಈ ನೆಲೆಯಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಸರ್ವೇ ಕಾರ್ಯ ನಡೆಸಿ ಬಳಿಕ ಯಾವುದೇ ಸ್ಪಂದನೆ ನೀಡದೆ ಮೌನವಹಿಸಿತ್ತು. ಇದರಿಂದ ಇಲ್ಲಿನ ಮಂದಿ ಅತ್ತ ಸ್ಥಳಾಂತರಗೊಳ್ಳದೆ, ಇತ್ತ ಅಲ್ಲಿಯೂ ವಾಸಿಸಲು ಆಗದೆ ಭಯದಲ್ಲೇ ಕಾಲಕಳೆಯುವಂತಾಗಿದೆ.
ಇದನ್ನೂ ಓದಿ: 1985ರ Air India ಬಾಂಬ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮಲಿಕ್ ಗುಂಡಿನ ದಾಳಿಗೆ ಸಾವು
ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಇದೀಗ ಮಲವಂತಿಗೆ ಸಮೀಪ ಬಲ್ಲರಾಯನದುರ್ಗದ ಭಾಗದಲ್ಲಿ ಭೂಕುಸಿತ ಉಂಟಾಗಿರುವ ಸಾಧ್ಯತೆ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.