Advertisement

ಕೋವಿಡ್ ಮಧ್ಯೆ ಸಾಂಕ್ರಾಮಿಕಗಳ ಕಾಟ

03:00 PM Mar 16, 2021 | Team Udayavani |

ಧಾರವಾಡ: ಜಿಲ್ಲೆಯಲ್ಲಿ ಒಂದಂಕಿಗೆ ಕುಸಿದಿದ್ದ ಕೋವಿಡ್ ಮತ್ತೆ ಎರಡಂಕಿಗೆ ಜಿಗಿದಿದೆ. ಈ ಆತಂಕದ ಮಧ್ಯೆಯೇ ಬೇಸಿಗೆಯ ಉರಿ ಬಿಸಿಲು ಹೆಚ್ಚಾದಂತೆ ಸಾಂಕ್ರಾಮಿಕ ರೋಗಗಳ ಲಕ್ಷಣಗಳೂ ಕಂಡುಬರುತ್ತಿವೆ. ಇದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಮೂಡುವಂತಾಗಿದೆ.

Advertisement

2019ರಲ್ಲಿ 250 ಜನರಲ್ಲಿ ಡೆಂಘಿ, 121 ಜನರಲ್ಲಿ ಚಿಕೂನ್‌ಗುನ್ಯಾ ಹಾಗೂ 2020ರಲ್ಲಿ 36 ಜನರಲ್ಲಿ ಡೆಂಘಿ, 17 ಜನರಲ್ಲಿ ಚಿಕೂನ್‌ಗುನ್ಯಾ, 8 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಸದ್ಯ ಬಿಸಿಲಿನ ತಾಪ ಏರಿದಂತೆ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಂಡುಬರುತ್ತಿದ್ದು, ಈ ವರ್ಷದ ಎರಡು ತಿಂಗಳ ಅಂತ್ಯಕ್ಕೆ 11 ಜನರಲ್ಲಿ ಡೆಂಘಿ ದೃಢವಾಗಿದ್ದರೆ ಮೂವರಲ್ಲಿ ಮಿದುಳು ಜ್ವರ ಖಚಿತವಾಗಿದೆ.

ಮೆದುಳು ಜ್ವರದ ಭೀತಿ  : 2016, 2017, 2019, 2020ರಲ್ಲಿ ಮೆದುಳು ಜ್ವರ ಕಂಡುಬಂದಿಲ್ಲ. ಆದರೆ 2018ರಲ್ಲಿ ಈ ಜ್ವರಕ್ಕೆ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದರು. ಆದರೆ ಈ ವರ್ಷ ಮೆದುಳು ಜ್ವರದ ಲಕ್ಷಣಗಳು ಕಂಡುಬಂದ ಮೂವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಮೆದುಳು ಜ್ವರ ದೃಢಪಟ್ಟಿರುವುದು ಆತಂಕ ಹೆಚ್ಚಿಸಿದೆ. ಧಾರವಾಡ ಗ್ರಾಮೀಣದಲ್ಲಿ ಇಬ್ಬರಲ್ಲಿ ಹಾಗೂ ನವಲಗುಂದದ ಒಬ್ಬರಲ್ಲಿ ಈ ಜ್ವರ ದೃಢಪಟ್ಟಿದೆ.

ಚಿಕೂನ್‌ಗುನ್ಯಾ-ಮಲೇರಿಯಾ :  2015ರಲ್ಲಿ 17, 2016ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019ರಲ್ಲಿ 121, 2020ರಲ್ಲಿ 17 ಜನರಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡಿತ್ತು. ಈ ವರ್ಷದ ಎರಡು ತಿಂಗಳಲ್ಲಿ ಸಂಶಯದ ಮೇರೆಗೆ 12 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾರಲ್ಲೂ ರೋಗ ದೃಢಪಟ್ಟಿಲ್ಲ. 2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17, 2020ರಲ್ಲಿ 8 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ, 2021ರ ಮೊದಲ ಎರಡು ತಿಂಗಳಲ್ಲಿ ಯಾರಲ್ಲು ಕಂಡುಬಂದಿಲ್ಲ.

ಡೆಂಘೀ ಆತಂಕ : 2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250, 2020ರಲ್ಲಿ 36 ಜನರಲ್ಲಿ ಡೆಂಘಿ ದೃಢಪಟ್ಟಿತ್ತು. ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿಯೇ 2020ರಲ್ಲಿ ಡೆಂಘಿಗೆ ಹುಬ್ಬಳ್ಳಿಯಲ್ಲಿ ಒಬ್ಬರು ಮೃತಪಟ್ಟಿದ್ದರು. ಸದ್ಯ ಈ ವರ್ಷದ ಫೆಬ್ರವರಿ ಅಂತ್ಯಕ್ಕೆ ಸಂಶಯ ಮೇರೆಗೆ 43 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 11 ಜನರಲ್ಲಿ ಡೆಂಘಿ ದೃಢಪಟ್ಟಿದೆ. ಈ ಪೈಕಿ ಧಾರವಾಡ ಗ್ರಾಮೀಣದಲ್ಲಿ 3, ಕುಂದಗೋಳದಲ್ಲಿ 3, ನವಲಗುಂದದಲ್ಲಿ 2, ಧಾರವಾಡ ಶಹರದಲ್ಲಿ 1 ಹಾಗೂ ಹುಬ್ಬಳ್ಳಿ ಶಹರದಲ್ಲಿ 2 ಜನರಲ್ಲಿ ಡೆಂಘಿ ಪ್ರಕರಣ ಖಚಿತವಾಗಿದೆ.

Advertisement

ಗ್ರಾಮೀಣದಲ್ಲೇ ಹೆಚ್ಚು :  ಪ್ರತಿವರ್ಷ ಡೆಂಘಿ, ಚಿಕೂನ್‌ಗುನ್ಯಾ, ಮಲೇರಿಯಾ ಉಪಟಳ ಹೆಚ್ಚು. ಆದರೆ 2021ರ ಫೆಬ್ರವರಿ ತಿಂಗಳಲ್ಲಿ ಚಿಕೂನ್‌ಗುನ್ಯಾ ಹಾಗೂ ಮಲೇರಿಯಾದ ಯಾವ ಲಕ್ಷಣಗಳು ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆದರೆ 7 ಜನರಲ್ಲಿ ಡೆಂಘಿ ಪತ್ತೆಯಾಗಿದೆ. ಮೂವರಲ್ಲಿ ಮೆದುಳು ಜ್ವರ ಪತ್ತೆಯಾಗಿದೆ. ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಅವಳಿನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಕಂಡುಬರುತ್ತಿದ್ದು, ಆಯಾ ಗ್ರಾಪಂಗಳು ಸೊಳ್ಳೆ ನಿಯಂತ್ರಣಕ್ಕೆ ಹಾಗೂ ಸ್ವತ್ಛತೆಗೆ ಆದ್ಯತೆ ನೀಡಬೇಕು. ಇಲ್ಲವಾದರೆ ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಲಿದೆ.

2020ರಲ್ಲಿ 1213 ಜನರಲ್ಲಿ ಕಂಡುಬಂದ ಕರುಳುಬೇನೆ :

2020ರ ಜನೇವರಿಯಿಂದ ಡಿಸೆಂಬರ್‌ ಅಂತ್ಯಕ್ಕೆ 1213 ಜನರಲ್ಲಿ ಕರುಳುಬೇನೆ ಪತ್ತೆಯಾಗಿದ್ದು, 12 ಜನರಲ್ಲಿ ಅರಿಶಿನ ಕಾಮಾಲೆ, 332 ಜನರಲ್ಲಿ ವಿಷಮಶೀತ ಜ್ವರ ಕಂಡುಬಂದಿದೆ. 5148 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನು 247 ಜನರು ಹಾವು ಕಡಿತಕ್ಕೆ ಒಳಗಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ವೈರಸ್‌ ಬಗ್ಗೆ ಮುಂಜಾಗೃತಾ ಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಜತೆಗೆ ಬೇಸಿಗೆ ಸಮಯದಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳು ಉಲ್ಬಣ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು.- ಡಾ| ಯಶವಂತ ಮದೀನಕರ, ಜಿಲ್ಲಾ ಆರೋಗ್ಯಾಧಿಕಾರಿ

 

ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next