ಮುಂಬಯಿ: ನಗರದ ಹಿರಿಯ ಧಾರ್ಮಿಕ ಸಂಘಟನೆಗಳಲ್ಲೊಂದಾದ ಮಲಾಡ್ ಪೂರ್ವದ ಇರಾನಿ ಕಾಲನಿಯ ಶ್ರೀ ಶನಿಮ ಹಾತ್ಮ ಪೂಜಾ ಸಮಿತಿಯ 63ನೇ ವಾರ್ಷಿಕ ಮಹಾಪೂಜೆಯು ಸಮಿತಿಯ ಶನಿಮಂದಿರದಲ್ಲಿ ಮಾ. 17ರಂದು ದಿನವಿಡೀ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಹಾಪೂಜೆಯು ವೇದಮೂರ್ತಿ ಕೆ. ಗೋವಿಂದ ಭಟ್ ಇವರ ಮಾರ್ಗದರ್ಶನ, ಮಂದಿರದ ಅರ್ಚಕ ಸುಧಾಕರ ಎಂ. ಶೆಟ್ಟಿ ಹಾಗೂ ಭುವಾಜಿ ಎಸ್. ಯು. ಬಂಗೇರ ಇವರ ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆದವು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 8ರಿಂದ ಗಣಹೋಮ ಪ್ರಾರಂಭಗೊಂಡು ಅನಂತರ ಮಂದಿರದ ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥಪೂಜೆ ನಡೆಯಿತು. ಪೂರ್ವಾಹ್ನ 11.15ರಿಂದ ಮಹಾಪ್ರಸಾದ ಪೂಜೆ, ಪಲ್ಲಪೂಜೆ ಜರಗಿತು.
ಅನಂತರ ಶ್ರೀ ಶನಿ ದೇವರಿಗೆ ಮಹಾಆರತಿ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನೆರವೇರಿತು. ಅಪರಾಹ್ನ 2.30 ರಿಂದ ಕಲಶ ಪ್ರತಿಷ್ಠೆ, ಶನಿದೇವರ ಬಿಂಬ ಮೂರ್ತಿಯೊಂದಿಗೆ ಮಂದಿರದಿಂದ ವಾದ್ಯವಾಲಗದೊಂದಿಗೆ ಪುಷ್ಪವೃಷ್ಠಿಯ ಮೂಲಕ ಅಶ್ವತ್ಥಕಟ್ಟೆಯವರೆಗೆ ಬಲಿಮೂರ್ತಿಯ ಮೆರವಣಿಗೆಯು ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಆನಂತರ ಮಂದಿರದಲ್ಲಿ ಶನಿಗ್ರಂಥ ಪಾರಾಯಣ ಮತ್ತು ಸಮಿತಿಯ ವತಿಯಿಂದ ಭಜನ ಕಾರ್ಯಕ್ರಮ ನೆರವೇರಿತು. ಸಂಜೆ 6ರಿಂದ ಸಭಾಂಗಣದಲ್ಲಿದ್ದ ಶ್ರೀ ಶನಿದೇವರ ಬಲಿಮೂರ್ತಿಗೆ ಹಾಗೂ ಅಲಂಕೃತಗೊಂಡ ಕಲಶ ಪ್ರತಿಷ್ಠೆಗೆ ವಿಶೇಷ ಮಂಗಳಾರತಿ ನೆರವೇರಿತು.
ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು, ಉದ್ಯಮಿಗಳು, ಸಮಾಜ ಸೇವಕರು, ದಾನಿಗಳು, ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶ್ರೀ ಶನಿದೇವರ ದರ್ಶನ ಪಡೆದು ಕೃತಾರ್ಥರಾದರು. ಹಲವಾರು ಭಕ್ತಾದಿಗಳು ಶ್ರೀದೇವರಿಗೆ ವಿವಿಧ ಪೂಜೆಗಳನ್ನು ಸಲ್ಲಿಸಿದರು. ಸಮಾಜದ ವಿವಿಧ ದಾನಿಗಳನ್ನು, ಸಮಾಜ ಸೇವಕರನ್ನು ಸಮಿತಿಯ ವತಿಯಿಂದ ಮಹಾ ಪ್ರಸಾದವನ್ನಿತ್ತು ಗೌರವಿಸಲಾಯಿತು.
ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷ ಬಿ. ದಿವಾಕರ ಡಿ. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಎಚ್. ಎಸ್. ಕರ್ಕೇರ ಮತ್ತು ಎಂ. ಎನ್. ಸುವರ್ಣ, ಜತೆ ಕೋಶಾಧಿಕಾರಿಗಳಾದ ಮೋಹನ್ ಜಿ. ಬಂಗೇರ ಮತ್ತು ಕರುಣಾಕರ ಎನ್. ಸಾಲ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್. ಪಿ. ದೇವಾಡಿಗ, ಎಸ್. ಯು. ಬಂಗೇರ, ಕೆ. ಎನ್. ಸಿ. ಸಾಲ್ಯಾನ್, ಸತೀಶ್ ಎ. ಸಾಲ್ಯಾನ್, ಎಂ. ಎನ್. ಕೋಟ್ಯಾನ್, ಪಿ. ಆರ್. ಅಮೀನ್, ಅತುಲ್ ಓಜಾ, ಬಿ. ಎಚ್. ಹೆಜಮಾಡಿ, ಜಯ ಎಂ. ಬಂಗೇರ ಹಾಗೂ ಇತರ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಉದ್ಯಾವರ