Advertisement

ಪ್ರವಾಸೋದ್ಯಮ ನೀತಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಕಡ್ಡಾಯ

10:27 AM Oct 18, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ನೂತನ ಪ್ರವಾಸೋದ್ಯಮ ನೀತಿ ರಚನೆಯ ಸಿದ್ಧತೆ ಆರಂಭಗೊಂಡಿದ್ದು, “ಪ್ರವಾಸೋದ್ಯಮದಲ್ಲಿ ಕನ್ನಡಿಗರು, ಅದರಲ್ಲೂ ಸ್ಥಳೀಯರಿಗೆ ಉದ್ಯೋಗ ಕಡ್ಡಾಯಗೊಳಿಸಲು’ ಗಂಭೀರ ಚಿಂತನೆ ನಡೆದಿದೆ.

Advertisement

ಪ್ರವಾಸೋದ್ಯಮದಲ್ಲಿ ಕನ್ನಡಿಗರಿಗೆ ಶೇ.50ರಷ್ಟು ಉದ್ಯೋಗ ಕಡ್ಡಾಯ. ಪ್ರವಾಸಿ ತಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ಗ್ರಾಮೀಣ ಯುವಕರ ತಂಡ ರಚಿಸಿ ಆ ತಂಡಗಳಿಗೆ ಪ್ರವಾಸೋದ್ಯಮ ಪ್ರಮೋಟ್‌ ಮಾಡುವ ಹೊಣೆಗಾರಿಕೆ ನೀಡುವುದು, ಅಲ್ಲಿ ಕ್ರೋಢೀಕರಣವಾಗುವ ಹಣದ ಅಧಿಕ ಪಾಲನ್ನು ಅವರಿಗೇ ನೀಡುವುದು ನೂತನ ಪ್ರವಾಸೋದ್ಯಮ ನೀತಿಯಲ್ಲಿ ಸೇರ್ಪಡೆಯಾಗಲಿದೆ.

ಕಾರ್ಪೋರೇಟ್‌ ಕಂಪನಿಗಳ ಸಿಎಎಸ್‌ಆರ್‌ ನಿಧಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಇನ್‌ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ನೇತೃತ್ವದ ಕಾರ್ಯಪಡೆ ಹಲವು ಸಲಹೆಗಳನ್ನು ನೀಡಿದೆ. ಅದನ್ನೂ ಸೇರಿಸಿಕೊಂಡು ಬಹುತೇಕ ವರ್ಷಾಂತ್ಯದೊಳಗೆ ನೂತನ ಪ್ರವಾಸೋದ್ಯಮ ನೀತಿ ಸಿದ್ಧಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಗುರುತಿಸಲಾಗಿರುವ 17 ಅಂತಾರಾಷ್ಟ್ರೀಯ ತಾಣಗಳಲ್ಲಿ ರಾಜ್ಯದ ಹಂಪಿಯೂ ಸೇರಿರುವುದರಿಂದ ಹಂಪಿ ಹಾಗೂ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್‌ ಬಿಗ್‌ ಬಸ್‌ ಮಾದರಿಯ 6 ಡಬಲ್‌ ಡೆಕ್ಕರ್‌ ತೆರೆದ ಬಸ್‌ನ್ನು ಕೆಎಸ್‌ಟಿಡಿಸಿಯಿಂದ ಪ್ರಾರಂಭಿಸುವ ಯೋಜನೆಯನ್ನೂ ಇಲಾಖೆ ರೂಪಿಸಿದೆ. ಜತೆಗೆ, ಚಾಲುಕ್ಯರ ಪರಂಪರೆ ಪರಿಚಯಿಸಲು ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿ ಮತ್ತು ಕರಕುಶಲ ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ 25 ಕೋಟಿ ರೂ.ಇಡಲಾಗಿದ್ದು, ಅದಕ್ಕೆ ರೂಪುರೇಷೆ ರಚಿಸಲಾಗುತ್ತಿದೆ.

ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ 834 ಸಂರಕ್ಷಿತ ಸ್ಮಾರಕಗಳಿದ್ದು, ಆ ಪೈಕಿ 600 ಸ್ಮಾರಕಗಳನ್ನು ಪ್ರವಾಸಿ ತಾಣಗಳಾಗಿಸುವುದು ಸೇರಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜಿಸಿ ಹೆಚ್ಚು, ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು “ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ ಆಯೋಜಿಸಲು ಸಿದ್ಧತೆ ನಡೆದಿದೆ.

Advertisement

ಅಂತರ್ಜಾಲದಲ್ಲಿ ಗ್ರಾಮಗಳ ಚರಿತ್ರೆ: ಐತಿಹಾಸಿಕ ಹಿನ್ನೆಲೆ ಇರುವ ರಾಜ್ಯದ ಗ್ರಾಮಗಳ ಚರಿತ್ರೆಯ ಅಧ್ಯಯನ ನಡೆಸಿ ಅಂತರ್ಜಾಲದಲ್ಲಿ ದಾಖಲಿಸಲು ಚಿಂತನೆ ನಡೆದಿದೆ. ಕೆಲವು ಗ್ರಾಮಗಳ ಇತಿಹಾಸ ಜಾನಪದ ರೂಪದಲ್ಲಿ ಉಳಿದಿದ್ದು, ಅದನ್ನು ಡಿಜಿಟಲೀಕರಣ ಮಾಡಲು ಇಲಾಖೆ ತೀರ್ಮಾನಿಸಿದೆ. ಇದಕ್ಕಾಗಿ ವಿಶ್ವವಿದ್ಯಾಲಯಗಳ ಅಧ್ಯಯನ ಪೀಠ, ಕನ್ನಡ ಭಾಷಾ ವಿದ್ಯಾರ್ಥಿಗಳನ್ನು ಬಳಕೆ ಮಾಡಲು ತೀರ್ಮಾನಿಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 319 ಪ್ರವಾಸಿ ತಾಣಗಳಿದ್ದು, 41 ಪ್ರವಾಸಿ ತಾಣಗಳ ಸರ್ಕ್ನೂಟ್‌ (ವರ್ತುಲ) ರಚಿಸಲಾಗಿದೆ. ಧಾರ್ಮಿಕ, ಪರಿಸರ, ಸಾಹಸ, ಪಾರಂಪರಿಕ, ಪ್ರವಾಸೋದ್ಯಮಕ್ಕೆ ಅವಕಾಶವಿದೆ. ನಮ್ಮ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಕನ್ನಡಿಗರು, ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಲು ಒತ್ತು ನೀಡಲಾಗುವುದು.
-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next