ಅದೊಂದು ಕಾಲವಿತ್ತು. ಯಾವುದಾದರೊಂದು ಅಪರೂಪದ ಸಂದರ್ಭಗಳಲ್ಲಿಯೋ ಅಥವಾ ಇನ್ನಾವುದೋ ಸಭೆ ಸಮಾರಂಭಗಳಲ್ಲಿಯೋ ಛಾಯಾಚಿತ್ರಗಾರರಿಂದ ತೆಗೆಸಿಕೊಂಡ ಫೋಟೋಗಳು ನಮ್ಮ ಮನೆಯ ಬೀರುವಿನೊಳಗಿರುತ್ತಿದ್ದ ಆಲ್ಬಂಗಳಲ್ಲಿ ಬೆಚ್ಚಗೆ ಇರುತ್ತಿದ್ದವು. ನೆನಪಾದಗಲೆಲ್ಲಾ ಒಮ್ಮೆ ಅವುಗಳನ್ನು ತೆಗೆದು ಆ ಕ್ಷಣಗಳನ್ನು ಮತ್ತು ಅನುಭವಗಳನ್ನು ನೆನೆಯುವ ಸವಿಯೇ ಬೇರೆಯಾಗಿರುತ್ತಿತ್ತು. ಶಾಲೆಯ ಬೀಳ್ಕೊಡುಗೆಯಲ್ಲೋ, ವಾರ್ಷಿಕೋತ್ಸವದ ಫೋಟೋಗಳನ್ನೋ ಇನ್ನ್ಯಾವತ್ತೋ ನೆನಪು ಮಾಡಿಕೊಂಡು ನೋಡುವುದೇ ನಮಗೆ ಬಹಳ ಆನಂದದ ಸಂಗತಿಯಾಗಿರುತ್ತಿತ್ತು. ನಿಧಾನವಾಗಿ ತಂತ್ರಜ್ಞಾನದ ಬೆಳವಣಿಗೆಯಾಗುತ್ತ ಬಂದಂತೆ ಎಲ್ಲರ ಮನೆಯಲ್ಲೂ ಸಣ್ಣಸಣ್ಣ ಕ್ಯಾಮರಾಗಳು ಓಡಾಡತೊಡಗಿದವು. ಇನ್ನೂ ಮುಂದುವರಿದ ಭಾಗವಾಗಿ ಬಂದುದೇ ಕ್ಯಾಮರಾ ಫೋನುಗಳು ಮತ್ತು ಸ್ಮಾರ್ಟ್ ಫೋನುಗಳು. ಎಲ್ಲಿ ಬೇಕಾದರೂ ನಿಮಗಿಷ್ಟವಾದ ಅಪರೂಪದ ಕ್ಷಣಗಳನ್ನು ಸೆರೆಹಿಡಿಯಬಹುದಾದ ಆಯ್ಕೆಗಳು ದೊರೆಯುತ್ತಾ ಬಂದವು.
ಬೇಕೆನಿಸಿದಾಗ ಮೊಬೈಲಿನ ಗ್ಯಾಲರಿಯಲ್ಲಿರುವ ಫೋಟೊಗಳನ್ನು ನೋಡುತ್ತ, ಸ್ಟೇಟಸ್ ಅಪ್ಡೇಟ್ ಮಾಡುವ ಅನುಕೂಲತೆ ಈ ಮೊಬೈಲದ್ದು..ಇಷ್ಟಕ್ಕೂ ಸಾಲದೆಂಬಂತೆ ಇತ್ತೀಚಿನ ಟ್ರೆಂಡ್ ಎಂದರೆ ಕಸ್ಟಮೈಸ್ಡ್ ಕಾಫಿ ಮಗ್ಗುಗಳು. ಗಿಫ್ಟ್ ಕೊಡಲಂತೂ ಸೂಕ್ತವಾಗಿರುವ ಈ ಬಗೆಯ ಕಸ್ಟಮೈಸ್ಡ್ ಮಗ್ ಸದ್ಯದ ರನ್ನಿಂಗ್ ಟ್ರೆಂಡ್. ಇವುಗಳ ವಿಶೇಷತೆ ಅಷ್ಟೇ ವಿಶೇಷವಾದುದು! ಮಗ್ಗುಗಳ ಮೇಲೆ ನಿಮ್ಮ ಆಯ್ಕೆಯ ಭಾವಚಿತ್ರಗಳನ್ನು, ದೃಶ್ಯಗಳನ್ನು, ಅಕ್ಷರಗಳನ್ನು, ಹೆಸರುಗಳನ್ನು, ಮೆಸೇಜುಗಳನ್ನು ಏನನ್ನಾದರೂ ಪ್ರಿಂಟ್ ಮಾಡಿಕೊಡಲಾಗುವುದು. ನಿಮ್ಮ ಕಾಫಿ ಮಗ್ಗುಗಳನ್ನು ನಿಮಗೆ ಬೇಕಾದಂತೆ ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಾಗಿ ಯುವಜನತೆ ಈ ಬಗೆಯ ಟ್ರೆಂಡಿಗೆ ಬಲು ಬೇಗ ಆಕರ್ಷಿತರಾಗುತ್ತಿದ್ದಾರೆ. ತಮ್ಮ ಫೋಟೋಗಳನ್ನೋ ಅಥವಾ ತಮ್ಮ ಸ್ನೇಹಿತರೊಂದಿಗಿನ ಫೋಟೋಗಳನ್ನೋ ಪ್ರಿಂಟ್ ಮಾಡಿಸಿಕೊಂಡು ಬಳಸುವುದನ್ನು ಇತ್ತೀಚೆಗೆ ನೋಡಬಹುದಾಗಿದೆ. ಸಾಧಾರಣ ಮಗ್ ಅನ್ನು ಸುಂದರವಾಗಿಸಿ ಬಳಸುವ ಕ್ರಮವೇ ಈ ಕಸ್ಟಮೈಸ್ಡ್ ಮಗ್. ನಮಗೆ ಪ್ರಿಯರಾದವರ ಫೋಟೋವನ್ನು ಮಗ್ಗಿನಲ್ಲಿ ಪ್ರಿಂಟ್ ಹಾಕಿಸಿಕೊಂಡು ಅವರ ಜೊತೆಗೇ ಕಾಫಿ ಕುಡಿದ ಅನುಭವವನ್ನು ಪಡೆಯಬಹದಾಗಿದೆ. ಕೇವಲ ಮಗ್ಗುಗಳಷ್ಟೇ ಅಲ್ಲದೆ ಟಿ ಶರ್ಟುಗಳ ಮೇಲೆಯೂ ಕೂಡ ಬೇಕಾದ ಫೋಟೋಗಳನ್ನು ಮತ್ತು ಲೋಗೊಗಳನ್ನು ಅಥವಾ ಬೇಕಾದಂತಹ ವಾಕ್ಯಗಳನ್ನು ಪ್ರಿಂಟ್ ಮಾಡಿಕೊಡಲಾಗುವುದು. ಕೇವಲ ಯುವಜನತೆಯಷ್ಟೇ ಅಲ್ಲದೆ ಮಕ್ಕಳೂ ಕೂಡ ತಮ್ಮ ಫೋಟೋಗಳಿರುವ ಟಿ ಶರ್ಟುಗಳನ್ನು ಧರಿಸಿ ಸಂತಸಪಡುವುದನ್ನು ನೋಡಬಹುದು. ಹುಟ್ಟಿದ ಹಬ್ಬಗಳಿಗೆ, ವಿಶೇಷ ಸಂದರ್ಭಗಳಲ್ಲಿ, ಸ್ನೇಹಿತರಿಗೆ ಇತ್ಯಾದಿ ಸಂದರ್ಭಗಳಲ್ಲಿ ಉಡುಗರೆ ನೀಡಲು ಈ ಬಗೆಯ ಕಸ್ಟಮೈಸ್ಡ್ ವಸ್ತುಗಳು ತುಂಬಾ ಸೂಕ್ತವಾದುದಾಗಿವೆ.
ಸರಳವಾದ ಪ್ರಿಂಟಿಂಗ್ ವಿಧಾನಗಳನ್ನು ಬಳಸಿಕೊಂಡು ಈ ಬಗೆಯ ಪ್ರಿಂಟನ್ನು ಮಾಡಲಾಗುತ್ತದೆ. ಮಗ್, ಟಿ ಶರ್ಟುಗಳಷ್ಟೇ ಅಲ್ಲದೆ ಕಸ್ಟಮೈಸ್ಡ್ ಪಿಲ್ಲೊ ಕವರುಗಳು, ಬೆಡ್ ಸ್ಪ್ರೆಡ್ ಗಳು, ಪ್ಲೇಟುಗಳು ಎಲ್ಲವೂ ದೊರೆಯುವುದರಿಂದ ನಿಮ್ಮ ಜೀವನಕ್ರಮವನ್ನು ಇನ್ನಷ್ಟು ಸ್ಟೈಲಿಶ್ ಆಗಿಸಿಕೊಳ್ಳಬಹುದು. ನೀವೂ ಕೂಡ ಇವುಗಳನ್ನು ಬಳಸಬಹುದು ಮತ್ತು ನಿಮ್ಮವರಿಗೂ ಉಡುಗೊರೆಯ ರೂಪದಲ್ಲಿ ನೀಡುವುದರ ಮೂಲಕ ಉಳಿದೆಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಬಹುದು. ಇವುಗಳು ಸುಲಭ ಲಭ್ಯವೂ ಆಗಿದ್ದು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ. ಇತ್ತೀಚೆಗೆ ಹೆಚ್ಚುತ್ತಿರುವ ಇಂತಹ ಮಳಿಗೆಗೆಳು ನಿಮ್ಮ ಅಭಿರುಚಿಗೆ ತಕ್ಕಂತಹ ಡಿಸೈನುಗಳನ್ನು ಪ್ರಿಂಟ್ ಮಾಡಿಕೊಡುತ್ತವೆ. ಅಥವ ಆನ್ ಲೈನ್ ಶಾಪಿಂಗ್ ಸೈಟುಗಳಲ್ಲಿಯೂ ಈ ಬಗೆಯ ಕಸ್ಟಮೈಸ್ಡ್ ವಸ್ತುಗಳನ್ನು ತಯಾರಿಸಿ ಕೊಡಲಾಗುತ್ತದೆ.
“Make your life little stylish and more beautiful”
-ಪ್ರಭಾ ಭಟ್ ಹೊಸ್ಮನೆ