ಜೇವರ್ಗಿ: ವಿಶ್ವಗುರು ಅಣ್ಣ ಬಸವಣ್ಣನವರ ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಶ್ರೀಶೈಲ ಸಾರಂಗ ಮಠದ ಜಗದ್ಗುರು ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಸವಕೇಂದ್ರ ಹಾಗೂ ಲಿಂಗಾಯತ ಸಮನ್ವಯ ಸಮಿತಿ ತಾಲೂಕು ಘಟಕಗಳ ವತಿಯಿಂದ ಆಯೋಜಿಸಲಾಗಿದ್ದ ವಚನ ವಿಜಯೋತ್ಸವ ಹಾಗೂ ಶರಣರ ಜೀವನ ದರ್ಶನ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭವ್ಯ ಪರಂಪರೆ ಹೊಂದಿದ ಲಿಂಗಾಯತ ಧರ್ಮ ಸಮಾಜ ನರಳುವಂತಾಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿ ಮೌಡ್ಯ ಬಿತ್ತುವ ಕೆಲಸ ಮಾಡುತ್ತಿವೆ. ಕಾಯಕ, ದಾಸೋಹ ಕೊಟ್ಟ ಬಸವಣ್ಣನ ನಂಬಿದವರು ಯಾರೂ ಕೆಟ್ಟಿಲ್ಲ. ಕೆಲವು ಜನ ಜಗದ್ಗುರುಗಳು ಹೇಳುತ್ತಾರೆ ಕಲ್ಲಲ್ಲಿ ದೇವರು ಹುಟ್ಟಿದ್ದಾನೆ ಎಂದು. ಯಾರಾದರೂ ಕಲ್ಲಿನಲ್ಲಿ ಹುಟ್ಟಲು ಸಾಧ್ಯವೇ. ಕಲ್ಲಿನಲ್ಲಿ ಕಪ್ಪೆಗಳು ಮಾತ್ರ ಜನಿಸುತ್ತವೆ. ಕಪ್ಪೆ ಜಾತಿಯ ಜನರನ್ನು ಎಂದಿಗೂ ನಂಬಬೇಡಿ ಎಂದು ಹೇಳಿದರು.
ಜೇವರ್ಗಿ ಅನೇಕ ಜನ ಶರಣರು, ಸಂತರು, ವಚನಕಾರರು ಜನಿಸಿದ ಪುಣ್ಯ ಭೂಮಿ. ಈ ಭಾಗದ 2ನೇ ಕಲ್ಯಾಣವಾಗಿ ಜೇವರ್ಗಿ ಪ್ರಸಿದ್ಧಿ ಪಡೆದಿದೆ ಎಂದರು. ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 2018ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮವಾಗುವುದು ನಿಶ್ಚಿತ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರತಿಯೊಬ್ಬರೂ ಸ್ವಾಭಿಮಾನ, ಸಹಬಾಳ್ವೆಯಿಂದ ಬದುಕು ನಡೆಸಬೇಕು ಎಂದು ಹೇಳಿದರು.
ಬಸವಸೇವಾ ಪ್ರತಿಷ್ಠಾನದ ಅಕ್ಕಅನ್ನಪೂರ್ಣ ತಾಯಿ ಪ್ರವಚನ ನೀಡಿದರು. ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಗೌಡಪ್ಪಗೌಡ ಪಾಟೀಲ ಆಂದೋಲಾ, ಭೀಮರಾವ ಗುಜಗೊಂಡ, ಮಹಾಂತಸಾಹು ಹರವಾಳ, ಬಸವರಾಜ ಸಾಸಾಬಾಳ, ರಾಚಣ್ಣ ಹಂಗರಗಿ, ಗುರು ಮಾಲಿಪಾಟೀಲ ಆಗಮಿಸಿದ್ದರು. ಪ್ರಾಸ್ತಾವಿಕವಾಗಿ ಶರಣಬಸವ ಕಲ್ಲಾ ಮಾತನಾಡಿದರು, ಗುವಿವಿ ಸಿಂಡಿಕೇಟ್ ಸದಸ್ಯ ಸಂಗನಗೌಡ ಗುಳ್ಳಾಳ ಸ್ವಾಗತಿಸಿದರು, ಶಿಕ್ಷಕ ಪಂಡಿತ ನೆಲ್ಲಗಿ ನಿರೂಪಿಸಿ, ವಂದಿಸಿದರು.