ಕುಂದಾಪುರ: ಕರ್ನಾಟಕ ನಗರ ಮೂಲ ಸೌಕರ್ಯದ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಎಡಿಬಿ ನೆರವಿನ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ-ಜಲಸಿರಿ ಯೋಜನೆಯಡಿಯಲ್ಲಿ ಚಿಕನ್ಸಾಲ್ ಬಲ ಬದಿ ವಾರ್ಡ್ ನಂ. 8ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಪುರಸಭೆ ಸದಸ್ಯ ಕೆ. ಜಿ. ನಿತ್ಯಾಂದ ವಹಿಸಿ, ಯೋಜನೆಯು ಕುಂದಾಪುರ ಪಟ್ಟಣಕ್ಕೆ 24×7 ನಿರಂತರ ನೀರು ಸರಬರಾಜು ಯೋಜನೆಯಾಗಿದೆ. ಇದರಿಂದ ನೀರು ವ್ಯರ್ಥವಾಗದೆ ಮಿತವಾಗಿ ಬಳಸಬಹುದು. ನೀರು ಬಳಸಿ ದಷ್ಟೆ ಬಿಲ್ ಬರುವುದು. ಈ ಯೋಜನೆ ಯಶ್ವಸಿಯಾಗಬೇಕಾದರೆ ಪಟ್ಟಣದ ಎಲ್ಲ ಮನೆಗಳೂ ನಳ್ಳಿ ಸಂಪರ್ಕ ತೆಗೆದುಕೊಂಡಾಗ ಮಾತ್ರ ಎಂದರು.
ಸಹಾಯಕ ಕಾರ್ಯಪಾಲಕ ಅಭಿಯಂತ ವಾಲ್ಮೀಕಿ ಹರೀಶ ವಿ., ನಳ್ಳಿಯಲ್ಲಿ ನಿರಂತರ ನೀರು ಬರುವುದರಿಂದ ನೀರು ತುಂಬಿಸಿಡುವ ಅಗತ್ಯವಿಲ್ಲ. ಸುರಕ್ಷಿತ ನೀರು ಸರಬರಾಜಿನಿಂದ ಜನರ ಆರೋಗ್ಯದಲ್ಲಿ ಸುಧಾರಣೆ, ವಿದ್ಯುತ್ ವೆಚ್ಚದಲ್ಲಿ ಉಳಿತಾಯವಾಗುತ್ತದೆ.
ಕುಂದಾಪುರ ವಿವಿಧ ಪ್ರದೇಶಗಳಲ್ಲಿ ಹಾಲಿ ಇರುವ 3 ಮೇಲ್ಮಟ್ಟದ ಜಲಸಂಗ್ರಹಗಾರದ ಜತೆಗೆ 2 ಹೆಚ್ಚುವರಿ ವಿವಿಧ ಸಾಮರ್ಥ್ಯಗಳ ಮೇಲ್ಮಟ್ಟದ ಟ್ಯಾಂಕ್‌ಗಳ ನಿರ್ಮಾಣ ಮಾಡಲಾಗಿದೆ. 24×7 ಗ್ರಾಹಕರ ಸೇವಾ ಕೇಂದ್ರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನೀರಿಗೆ ಸಂಬಂಧಿಸಿದ ಯಾವುದೇ ತೊಂದರೆಯನ್ನು ಫೋನ್ ಮುಖಾಂತರ ಸಲ್ಲಿಸಬಹುದು ಎಂದರು.
ಪಿಐಯು ಉಡುಪಿ ಸಮುದಾಯ ಅಭಿವೃದ್ಧಿ ಸಹಾಯಕ ಮಾಲತೇಶ ಎಂ. ಎಚ್. ಪ್ರಸ್ತಾವಿಸಿದರು. ಆರತಿ ಕೆ.ಎಸ್. ಸ್ವಾಗತಿಸಿದರು. ಆರ್‌ಡಿಎಸ್ ಸಂಸ್ಥೆಯ ಜ್ಯೋತಿ ನಿರೂಪಿಸಿದರು. ಆರ್.ಡಿ.ಎಸ್. ನ ಸಮುದಾಯ ಅನುವುಗಾರರಾದ ಮಂಜುಳಾ ವಂದಿಸಿದರು.