ಮುದ್ದೇಬಿಹಾಳ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಮಾದರಿಯಲ್ಲಿ ಸಮಾಜದ ಕಟ್ಟ ಕಡೆ ಸ್ಥಾನದಲ್ಲಿರುವ ದಲಿತ ಮಹಿಳೆಯರ ಅಭಿವೃದ್ಧಿಗೆ ಸಮ್ಮಾನ್ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ರೀತಿ ಪ್ರಸ್ತಾವನೆಯನ್ನು ಸರ್ಕಾರದ ಎದುರು ಇಟ್ಟಿರುವ ಮೊದಲ ಶಾಸಕ ನಾನಾಗಿದ್ದೇನೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ವಿವಿಧ ದಲಿತ, ಸಂಘಟನೆಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಏ. 11ರಂದು ಉದಯವಾಣಿಯ ಮುಖಪುಟದಲ್ಲಿ ದಲಿತ ಮಹಿಳೆಯರ ಅಭಿವೃದ್ಧಿಗೆ ಸಮ್ಮಾನ್ ಶಿರೋನಾಮೆಯಡಿ ಪ್ರಕಟಗೊಂಡಿದ್ದ ವಿಶೇಷ ವರದಿ ಪ್ರಸ್ತಾಪಿಸಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಮಹಿಳೆಯರು ಮದುವೆಯಾದ ಮೇಲೆ ಗುಳೆ, ವಲಸೆ ಹೋಗುವುದನ್ನು ತಡೆಯಬೇಕಿದೆ. ಇವರನ್ನು ಮೇಲೆತ್ತುವ ಸಂಕಲ್ಪವನ್ನು ನಮ್ಮ ಬಿಜೆಪಿ ಸರ್ಕಾರ ಮಾಡಿದೆ. 18 ವರ್ಷ ವಯಸ್ಸಿಗೆ ಬರುವ ಎಲ್ಲ ಎಸ್ಸಿ, ಎಸ್ಟಿ ಮಹಿಳೆಯರಿಗೆ ಮಾಸಿಕ ಸಾವಿರ ರೂ ಮಾಸಾಶನ ಕೊಡುವುದು ಸಮ್ಮಾನ್ ಯೋಜನೆಯ ಮುಖ್ಯ ಅಂಶವಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಪ್ರತಿಯೊಂದು ದಲಿತ ಕೇರಿಗೆ ಪ್ರವಾಸ ಮಾಡಿ ಅವರ ಮನೆಯ ವಾಸ್ತವ ಚಿತ್ರಣ, ಬೇಕು ಬೇಡಗಳ ಪಟ್ಟಿ ಮಾಡುತ್ತೇನೆ. ಅವರಿಗೆ ನ್ಯಾಯ ಕೊಡಿಸಲು ಅವರ ಧ್ವನಿಯಾಗಿ ವಿಧಾನಸಭೆಯ ಒಳಗಡೆ, ಹೊರಗಡೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಖಂಡ ಡಿ.ಬಿ. ಮುದೂರ ಸಮಾಜದ ಪರವಾಗಿ ಪ್ರಸ್ತಾಪಿಸಿದ ಮೂರೂ ಬೇಡಿಕೆಗಳನ್ನು ಮುಂದಿನ ವರ್ಷದ ಅಂಬೇಡ್ಕರ್ ಜಯಂತಿ ಯೊಳಗೆ ಈಡೇರಿಸುತ್ತೇನೆ. ವಿಪಕ್ಷದವರು ಇತಿಹಾಸ ಮರೆಮಾಚುತ್ತಿದ್ದಾರೆ. ದಲಿತರನ್ನು ದಾರಿ ತಪ್ಪಿಸುವುವರಿಂದ ಎಚ್ಚರಾಗಿರಿ ಎಂದರು.
ಕಸಾಪ ಅಧ್ಯಕ್ಷ ಎಂ.ಎಚ್. ಹಾಲಣ್ಣವರ್, ಮುಖಂಡ ಡಿ.ಬಿ. ಮುದೂರ, ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಬಿ.ಎಸ್. ಕಡಕಭಾವಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಶಿವಪುರ, ಪುರಸಭೆ ಸದಸ್ಯರು, ಗಣ್ಯರಾದ ಸೋಮನಗೌಡ ಬಿರಾದಾರ, ಅಯ್ಯೂಬ ಮನಿಯಾರ, ಎಸ್.ಬಿ. ಚಲವಾದಿ, ಹರೀಶ ನಾಟೀಕಾರ, ಚನ್ನಪ್ಪ ವಿಜಯಕರ್, ಪ್ರಕಾಶ ಚಲವಾದಿ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ ಸೇರಿ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸೇರಿ ಹಲವರು ವೇದಿಕೆಯಲ್ಲಿದ್ದರು. ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಟಿ.ಡಿ. ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ನೇತಾಜಿ ನಗರದಿಂದ ಅಂಬೇಡ್ಕರ್ ವೃತ್ತದವರೆಗೆ ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಇದಲ್ಲದೆ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ, ವಿವಿಧ ಸರ್ಕಾರಿ ಕಚೇರಿಗಳಲ್ಲಿ ಆಯಾ ಮುಖ್ಯಸ್ಥರಿಂದ ಭಾವಚಿತ್ರ ಪೂಜಿಸಿ ಜಯಂತಿ ಆಚರಿಸಲಾಯಿತು. ಜಯಂತಿ ಹಿನ್ನೆಲೆ ಅಂಬೇಡ್ಕರ್ ವೃತ್ತ ಮತ್ತು ಮುಖ್ಯ ರಸ್ತೆಯ ಎರಡೂ ಬದಿ ಅಲಂಕಾರಿಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.