ಬೀದರ: ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರವೇ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಚಿನ್ ಗಾಣಿಗೇರ್ ಕಿವಿಮಾತು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಪರ ಸಂಘಟನೆಗಳ ಒಕ್ಕೂಟ) ವತಿಯಿಂದ ನಗರದ ಡಾ| ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ ಸಾಮಾಜಿಕ ಜಾಲತಾಣ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಮಾಹಿತಿಯ ತ್ವರಿತ ವಿನಿಮಯಕ್ಕೆ ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟ್ಟರ್, ಇನ್‌ಸ್ಟ್ರಾಗ್ರಾಂ ಮೊದಲಾದ ಸಾಮಾಜಿಕ ಜಾಲತಾಣಗಳು ಪ್ರಮುಖ ಮಾಧ್ಯಮಗಳಾಗಿವೆ ಎಂದು ತಿಳಿಸಿದರು.
ಕೋವಿಡ್ ಕಾರಣ ವೇದಿಕೆ ಸಾಮಾಜಿಕ ಜಾಲತಾಣ ಬಳಕೆಗೆ ಹೆಚ್ಚು ಆದ್ಯತೆ ನೀಡಿದೆ. ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆ ಚಟುವಟಿಕೆಗಳಿಗೆ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಪ್ರತಿನಿ ಧಿಗಳು ಹಾಗೂ ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನೂ ಮಾಡುತ್ತಿದೆ ಎಂದು ಹೇಳಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಮಾತನಾಡಿ, ರಾಜ್ಯ, ದೇಶ, ವಿದೇಶಗಳ ವಿದ್ಯಮಾನಗಳನ್ನು ಕ್ಷಣಾರ್ಧದಲ್ಲೇ ಅರಿಯುವಲ್ಲಿ ಸಾಮಾಜಿಕ ಜಾಲತಾಣಗಳು ಸಹಕಾರಿಯಾಗಿವೆ. ಕನ್ನಡ ನಾಡು, ನುಡಿ, ಅಸ್ಮಿತೆಗೆ ಧಕ್ಕೆ ಉಂಟಾದಾಗ, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಖಂಡಿಸಬೇಕು. ಸಂದೇಶ ಸಂಬಂಧಪಟ್ಟವರಿಗೆ ತಲುಪಿಸುವವರೆಗೂ ವಿರಮಿಸಬಾರದು ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಸಾಧಕ-ಬಾಧಕಗ ಳೆರಡೂ ಇವೆ. ಸಾಮಾಜಿಕ ಜಾಲತಾಣವನ್ನು ಒಳ್ಳೆಯ ಕೆಲಸಕ್ಕಷ್ಟೇ ಬಳಸಿಕೊಳ್ಳಬೇಕು. ಸುಳ್ಳು ಸುದ್ದಿಗಳನ್ನು ಹರಡಬಾರದು. ಸಮಾಜದ ಸ್ವಾಸ್ಥ್ಯ ಕಾಪಾಡಲು ನೆರವಾಗಬೇಕು ಎಂದು ತಿಳಿಸಿದರು. ವಿಭಾಗದ ಜಿಲ್ಲಾ ಸಂಚಾಲಕ ಗೋಪಾಲ್ ಕುಲಕರ್ಣಿ ಮಾತನಾಡಿದರು.
ಉದ್ಯಮಿ ಶಿವಾನಂದ ಜಾಬಾ, ಸಾಹಿತಿ ಸಂಜೀವಕುಮಾರ ಅತಿವಾಳೆ, ಪ್ರಮುಖರಾದ ಸಂಜುಕುಮಾರ ಸ್ವಾಮಿ, ಅರವಿಂದ ಕುಲಕರ್ಣಿ, ಶ್ರೀಕಾಂತ ಸ್ವಾಮಿ, ಪ್ರೊ| ಉಮಾಕಾಂತ ಮೀಸೆ, ಸಂತೋಷ ಚೆಟ್ಟಿ, ಉದಯಕುಮಾರ ಅಷ್ಟೂರೆ, ಸೋಮಶೇಖರ ಲಸೂನೆ, ಈಶ್ವರ ಖಂಡಾರೆ, ಶಿವರುದ್ರ ತೀರ್ಥ, ದತ್ತಾತ್ರಿ ಅಲ್ಲಂಕೇರೆ, ತುಕಾರಾಮ ಜಾನಕನೋರ, ಸಚಿನ್ ಕತ್ತೆ, ರಾಜಕುಮಾರ ಎಡವೆ, ಗಣೇಶ ಪಾಟೀಲ, ಸಚಿನ್ ತಿಬಶೆಟ್ಟಿ ಇದ್ದರು. ನಾಗಪ್ಪ ಜಾನಕನೋರ ನಿರೂಪಿಸಿದರು. ವಿಶ್ವನಾಥ ಗೌಡ ವಂದಿಸಿದರು.