ಮುದ್ದೇಬಿಹಾಳ: ಇಂದಿನ ವಿದ್ಯಾರ್ಥಿಗಳು ಅದೃಷ್ಟವಂತರು. ಸರ್ಕಾರದ ಹಲವಾರು ಸೌಲಭ್ಯಗಳೊಂದಿಗೆ ಉಚಿತ ಯೋಜನೆಗಳ ಪ್ರಯೋಜನ ಪಡೆದುಕೊಂಡು ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳುವ ಸರಳ ದಾರಿ ಪಡೆದುಕೊಂಡವರು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ಬಿದರಕುಂದಿ ಗ್ರಾಮ ವ್ಯಾಪ್ತಿಯ ಆರ್‌ಎಂಎಸ್‌ಎ ಆದರ್ಶ ವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಪಾಲಕರ ಸಮಾಲೋಚನಾ ಸಭೆ, ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರದ ವಸತಿ ಶಾಲೆಗಳಿಗೆ ಪ್ರವೇಶ ಪಡೆದುಕೊಳ್ಳುವ ಮಕ್ಕಳ ಬುದ್ಧಿಮಟ್ಟ ಸಾಮಾನ್ಯ ಮಕ್ಕಳಿಗಿಂತ ಹೆಚ್ಚಾಗಿರುತ್ತದೆ. ಇಂಥವರಿಗೆ ಬೋಧಿಸಲು ಹೆಚ್ಚು ಜಾಣ್ಮೆ, ಪಾಂಡಿತ್ಯ ಉಳ್ಳ ಶಿಕ್ಷಕರೇ ಇಂಥ ವಸತಿ ಶಾಲೆಗಳಲ್ಲಿರುತ್ತಾರೆ. ಇವರಾರೂ ಸಂಬಳಕ್ಕಾಗಿ ಕೆಲಸ ಮಾಡಬಾರದು. ಜಾಣ ಮಕ್ಕಳನ್ನು ಇನ್ನಷ್ಟು ಜಾಣರನ್ನಾಗಿಸಿ ಅವರ ಉನ್ನತ ಶಿಕ್ಷಣದ ಕನಸು ನನಸು ಮಾಡುವಂಥ ಪರಿಣಾಮಕಾರಿ ಬೋಧನೆ ಅಳವಡಿಸಿಕೊಂಡು ಬೋಧಿಸಬೇಕು ಎಂದರು.
ತಾವು 35-40 ವರ್ಷಗಳ ಹಿಂದೆ ಪಡೆದುಕೊಂಡ ಪ್ರಾಥಮಿಕ, ಪ್ರೌಢ ಶಿಕ್ಷಣ ವ್ಯವಸ್ಥೆಯನ್ನು ಸ್ಮರಿಸಿಕೊಂಡ ಶಾಸಕರು ಬಾಲ್ಯದಲ್ಲಿ ನಾವು ಕಲಿಯುವಾಗ ಇದ್ದ ಕಷ್ಟ ಕಾರ್ಪಣ್ಯ ಈಗಿಲ್ಲ. ಆಗ ನಾವು ದೂರದ ಶಾಲೆಗಳಿಗೆ ನಡೆದುಕೊಂಡು ಹೋಗಿ ಪಾಠ ಕಲಿಯಬೇಕಿತ್ತು. ಆದರೆ ಈಗ ಆ ತೊಂದರೆ ಇಲ್ಲ. ಸರ್ಕಾರ ಬಸ್ ಸೌಲಭ್ಯ ಕಲ್ಪಿಸಿದೆ. ಆಗ ಶಿಕ್ಷಣ ಕಲಿಯಲು ನಾವು ಅನುಭವಿಸುತ್ತಿದ್ದ ಸಮಸ್ಯೆಗಳೂ ಈಗ ಇಲ್ಲವಾಗಿವೆ. ಶಿಕ್ಷಣದ ಗುಣಮಟ್ಟ ಸಾಕಷ್ಟು ಸುಧಾರಣೆ ಕಂಡಿದೆ. ಉಚಿತ ಶಿಕ್ಷಣ ವ್ಯವಸ್ಥೆ ಜಾರಿಯಾದ ಮೇಲೆ ಸರ್ಕಾರಿ ಶಾಲೆಗಳು ಹೆಚ್ಚಾಗಿವೆ. ಇಂಥ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ. ಪಾಲಕರು ಇಂಥ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಅವರ ಕಲಿಕಾ ಚಟುವಟಿಕೆ ಮೇಲೆ ನಿಗಾ ವಹಿಸಬೇಕು ಎಂದರು.
ಇಂದಿನ ಶಿಕ್ಷಕರು ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರು ಮನಸ್ಸು ಮಾಡಿದರೆ ಎಲ್ಲ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದತ್ತ ಕೊಂಡೊಯ್ದು ಅವರ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿ ನೇಮಕಗೊಂಡ ಶಿಕ್ಷಕರು ಮಕ್ಕಳನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಲು ಮುಂದಾಗಬೇಕು ಎಂದರು.
ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪುರಸಭೆ ಸದಸ್ಯರಾದ ಸದಾನಂದ ಮಾಗಿ, ಬಸವರಾಜ ಮುರಾಳ, ಬಿಜೆಪಿ ಧುರೀಣ ಬಸವರಾಜ ಗುಳಬಾಳ, ಎಸ್ಡಿಎಂಸಿ ಅಧ್ಯಕ್ಷ ಎಸ್.ಎಂ. ಚಿಲ್ಲಾಳಶೆಟ್ಟರ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವೈ. ಜೇವರಗಿ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ಸಿಆರ್‌ಪಿ ನಿಂಗನಗೌಡ ಬಿರಾದಾರ, ಶಿಕ್ಷಣ ಸಂಯೋಜಕ ದೊಡಮನಿ, ಮುಖ್ಯಾಧ್ಯಾಪಕಿ ನೀಲಮ್ಮ ತೆಗ್ಗಿನಮಠ, ಶಾಲೆಯ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಇದ್ದರು. ಪ್ರಿಯಾ ಹಿರೇಮಠ, ಸೃಷ್ಟಿ ಹೊಕ್ರಾಣಿ ಸ್ವಾಗತಿಸಿದರು. ಜ್ಯೋತಿ ಕುಂಬಾರ, ಭಾಗ್ಯಾಬಿರಾದಾರ ನಿರೂಪಿಸಿದರು. ರಶ್ಮಿ ಬೆನಕಟಗಿ ಅನಿಸಿಕೆ ಹೇಳಿದರು. ಸಂಜನಾ ಮನಗೂಳಿ ಶಾಸಕರ ಕುರಿತ ಸ್ವರಚಿತ ಕವನ ವಾಚಿಸಿದರು. ಸಂಜನಾ ಪವಾರ ವಂದಿಸಿದರು.
ಈ ವೇಳೆ ಶಾಸಕರು ಮಕ್ಕಳೊಂದಿಗೆ ಎಂದಿನಂತೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಾದ ಕಾರ್ತಿಕ ಕನಸಾಯಿ, ಪ್ರೀತಂ ಮಾಗಿ, ದಾನಮ್ಮ ಹೆಬ್ಟಾಳ, ಪೂರ್ವಿಕಾ ನಂದೆಪ್ಪನವರ, ಸುಚಿತ್ರಾ ನಾಯಕ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು. ಸಂವಾದದಲ್ಲಿ ಪಾಲ್ಗೊಂಡ ಎಲ್ಲರಿಗೂ ಶಾಸಕರು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಮಕ್ಕಳು ಮುಂದೆ ಏನಾಗಲು ಅಪೇಕ್ಷೆ ಪಡುತ್ತಾರೆ ಎನ್ನುವುದನ್ನು ಅವರಿಂದಲೇ ಕೇಳಿ ಮಕ್ಕಳಿಂದ ಚಪ್ಪಾಳೆ ಹಾಕಿಸಿದರು. ಸ್ಥಳದಲ್ಲಿದ್ದ ಪಾಲಕರಿಗೂ ಪ್ರತ್ಸಾಹ ನೀಡಿದರು. ಎಲ್ಲ ಮಕ್ಕಳಿಗೂ ನಡಹಳ್ಳಿ ಕುಟುಂಬದಿಂದ ಉಚಿತ ನೋಟ್ ಬುಕ್ ವಿತರಿಸಲಾಯಿತು.