Advertisement

ಮೂರೇ ವರ್ಷದಲ್ಲಿ ದೇಶ ವಿಭಜನೆ ಬಿಜೆಪಿ ಸಾಧನೆ: ಕೇಜ್ರಿವಾಲ್‌

04:48 PM Nov 27, 2017 | Team Udayavani |

ಹೊಸದಿಲ್ಲಿ : “ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರಕಾರ ಭಾರತವನ್ನು ವಿಭಜಿಸುವ ಪಾಕಿಸ್ಥಾನದ ಗುರಿಯನ್ನು ಕೇವಲ ಮೂರೇ ವರ್ಷಗಳಲ್ಲಿ ಸಾಧಿಸಿದೆ’ ಎಂದು ಹೇಳುವ ಮೂಲಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಬಿಜೆಪಿ ವಿರುದ್ಧ ಹೊಸ ವಾಕ್‌ ದಾಳಿಯನ್ನು ಆರಂಭಿಸಿದ್ದಾರೆ. 

Advertisement

ಬಿಜೆಪಿಯು ದೇಶವನ್ನು ಧ್ರುವೀಕರಿಸುತ್ತಿದೆ ಎಂದು ಆರೋಪಿಸಿದ ಕೇಜ್ರಿವಾಲ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಹೆಸರನ್ನು ಉಲ್ಲೇಖೀಸದೆಯೇ, “ಆಮ್‌ ಆದ್ಮಿ ಪಕ್ಷವು ನೆಪೋಲಿಯನ್‌ ನ ಹಾಗಲ್ಲ; ಎಲ್ಲ ರಾಜ್ಯ ಚುನಾವಣೆಗಳನ್ನು ಗೆಲ್ಲಲೇ ಬೇಕೆಂಬುದು ಆಪ್‌ ಉದ್ದೇಶವಲ್ಲ; ಆಪ್‌ ನ ನಿಜವಾದ ಉದ್ದೇಶವೆಂದರೆ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವುದು’ ಎಂದು ಹೇಳಿದರು.

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಜನರು ಒಗ್ಗೂಡಿ ಬಿಜೆಪಿಯನ್ನು ಸೋಲಿಸಿ ದೇಶವನ್ನು ಉಳಿಸಬೇಕು ಎಂದು ಕೇಜ್ರಿವಾಲ್‌ ಕರೆ ನೀಡಿದರು. 

“ದೇಶವು ಈಗ ಕಷ್ಟಕಾಲದಲ್ಲಿ ಸಾಗುತ್ತಿದೆ; ಬಿಜೆಪಿ ಹಿಂದುಗಳನ್ನು ಮುಸ್ಲಿಮರ ವಿರುದ್ಧ ಮತ್ತು ಮುಸ್ಲಿಮರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟುತ್ತಿದೆ; ಭಾರತ ಹೋಳಾಗುವುದನ್ನು ಕಾಣುವುದಕ್ಕಿಂತ ದೊಡ್ಡ ಕನಸು ಪಾಕಿಸ್ಥಾನಕ್ಕೆ ಬೇರೆ ಇರಲು ಸಾಧ್ಯವೇ ?’ ಎಂದು ಕೇಜ್ರಿವಾಲ್‌ ಕಟಕಿಯಾಡಿದರು.

“ಪಾಕಿಸ್ಥಾನ ಮತ್ತು ಐಎಸ್‌ಐಗೆ ಕಳೆದ 70 ವರ್ಷಗಳಲ್ಲಿ ಮಾಡಲು ಅಸಾಧ್ಯವಾದುದನ್ನು ಬಿಜೆಪಿ ಕೇವಲ ಮೂರೇ ವರ್ಷಗಳಲ್ಲಿ ಮಾಡಿದೆ. ನಿಜಕ್ಕಾದರೆ ದೇಶವನ್ನು ಈ ರೀತಿ ಹೋಳು ಮಾಡುವವರು ರಾಷ್ಟ್ರೀಯವಾದಿಗಳ ರೂಪದಲ್ಲಿರುವ ಐಎಸ್‌ಐ ಏಜಂಟರೇ ಆಗಿದ್ದಾರೆ’ ಎಂದು ಕೇಜ್ರಿವಾಲ್‌ ಟೀಕಿಸಿದರು.

Advertisement

ಕೇಜ್ರಿವಾಲ್‌ ಅವರು ಇಲ್ಲಿನ ರಾಮ ಲೀಲಾ ಮೈದಾನದಲ್ಲಿ ಇಂದು ಸೋಮವಾರ ಆಮ್‌ ಆದ್ಮಿ ಪಕ್ಷದ ಐದನೇ ವರ್ಷಾಚರಣೆಯ ಅಂಗವಾಗಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಆಪ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

ಆಪ್‌ ನಾಯಕತ್ವದೊಂದಿಗೆ ಭಿನ್ನಮತ ಮತ್ತು ಅಹಿತಕರ ಸಂಬಂಧಗಳನ್ನು ಹೊಂದಿರುವ ಕುಮಾರ್‌ ವಿಶ್ವಾಸ್‌ ಕೂಡ ಈ ಸಂದರ್ಭದಲ್ಲಿ ಭಾಷಣ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next