ಧಾರವಾಡ: ಪ್ರಸಕ್ತ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹೆಚ್ಚಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಒತ್ತಡ ಮುಕ್ತ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿದೆ ಎಂದು ನವದೆಹಲಿಯ ಅಖೀಲ ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಶಂಕರಾನಂದ ಬಿ.ಆರ್. ಹೇಳಿದರು.
ಕವಿವಿಯು “ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ-2020′ ಎಂಬ ವಿಷಯದ ಕುರಿತು ಆಯೋಜಿಸಿದ ಎರಡು ದಿನಗಳ ಆನ್‌ಲೈನ್ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಹೊಸ ಶಿಕ್ಷಣ ನೀತಿಯ ಕರಡನ್ನು ಸರಿಯಾಗಿ ವ್ಯಾಖ್ಯಾನಿಸುವ ಮೂಲಕ ಎಲ್ಲ ಶಿಕ್ಷಕರು, ಪರಿಣಿತರು ಅರ್ಥೈಸಿಕೊಳ್ಳಬೇಕು. ಈ ಶಿಕ್ಷಣ ನೀತಿಯ ವ್ಯಾಖ್ಯಾನ, ಅನುಷ್ಠಾನ ಬೋಧನೆ, ವಿವರಣೆಯ ಮೂಲಕ ತಿಳಿದು ಕೊಳ್ಳಬೇಕಾದ ಅವಶ್ಯಕತೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲೆ ಇದೆ. ಬಹು ವಿಷಯದ ಆಯ್ಕೆಗಳನ್ನು ವಿದ್ಯಾರ್ಥಿಗಳಿಗೆ ನೀಡುವುದರ ಜತೆ ಅಲ್ಪಾವಧಿ ಕೋರ್ಸಗಳಿಗೆ ಹೆಚ್ಚು ಮಹತ್ವವನ್ನು ಇಂದಿನ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ನೀಡಬೇಕಾಗಿದೆ ಎಂದರು.
ಸಮಗ್ರವಾಗಿ ದೇಶ ಕಟ್ಟಲು ಅವಶ್ಯಕವಾದ ಅಂಶಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಮಗೆ ಬೇಕಾದ ರೀತಿಯಲ್ಲಿ ಹೊಸ ಪೀಳಿಗೆಯನ್ನು ಸಿದ್ಧಗೊಳಿಸಬಹುದಾಗಿದ್ದು, ಇದು ಎಲ್ಲ ಶಿಕ್ಷಣ ಸಂಸ್ಥೆಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರಿಯಾಗಿ ಅನುಷ್ಠಾನ ಮಾಡಿದಲ್ಲಿ ಮಾತ್ರವೇ ಸಾಧ್ಯವಿದೆ ಎಂದು ಹೇಳಿದರು.
ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ| ಬಿ. ತಿಮ್ಮೇಗೌಡ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಅಗಾಧ ಬದಲಾವಣೆಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ. ವಿದ್ಯಾರ್ಥಿ ಸರ್ವತೊಮುಖ ಬೆಳವಣಿಗೆ ಸಹಾಯಕ ವಾಗಿದ್ದು, ವಿದ್ಯಾರ್ಥಿಯ ಸೃಜನಶೀಲತೆ, ಸಂಸ್ಕೃತಿ, ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವ ಹೆಚ್ಚಿಸಲು ಭಾಷಾ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ವೃತ್ತಿಪರ ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅದ್ಯತೆ ನೀಡುವುದು ಮತ್ತು ಸಂಶೋಧನೆ, ಬೋಧನೆ ಮತ್ತು ಅನ್ವೇಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಕವಿವಿ ಕುಲಪತಿ ಪ್ರೊ| ಕೆ.ಬಿ. ಗುಡಸಿ, ಮೌಲ್ಯಮಾಪಕ ಕುಲಸಚಿವ ಪ್ರೊ| ರವೀಂದ್ರ ಕದಮ್, ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ| ಮೀನಾ ಚಂದಾವರಕರ್ ಮೊದಲಾದವರಿದ್ದರು.