ಹೂವಿನಹಿಪ್ಪರಗಿ: ರಾಜ್ಯದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಕಾರ ಜಿಲ್ಲಾದ್ಯಂತ ಸಹಕಾರಿ ಸಂಘಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ, ಕೆಲವು ಖರೀದಿ ಕೇಂದ್ರಗಳು ರೈತರಿಂದ ಬೇಕಾ ಬಿಟ್ಟಿ ಹಣ ವಸೂಲಿ ಮಾಡುತ್ತಿವೆ.
ಬಸವನಬಾಗೇವಾಡಿ ತಾಲೂಕಿನ ಶರಣ ಸೋಮನಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕ್‌ನಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಮಳೆಯ ಕೊರತೆಯಿಂದ ತೊಗರಿ ಇಳುವರಿ ಕಡಿಮೆ ಬಂದಿದೆ. ಹೀಗಾಗಿ ಸರಕಾರ ಪ್ರತಿ ರೈತರಿಂದ ಹತ್ತು ಕ್ವಿಂಟಲ್ ತೊಗರಿ ಖರೀದಿಗೆ ನಿಗದಿಪಡಿಸಲಾಗಿದೆ. ಇಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ 120 ರೂಪಾಯಿ ರೈತರಿಂದ ವಸೂಲಿ ಮಾಡಲಾಗುತ್ತಿದೆ.
ಪ್ರತಿ ಕ್ವಿಂಟಲ್ ತೊಗರಿಗೆ ಸರಕಾರ 6,100 ರೂಪಾಯಿ ನಿಗದಿ ಮಾಡಿದೆ. ಕೇಂದ್ರ ಸರಕಾರ 5,675 ರೂ. ಬೆಂಬಲ ಬೆಲೆ ನೀಡಿದರೆ, ರಾಜ್ಯ ಸರ್ಕಾರ ಬರೀ 425 ರೂ.ಗಳನ್ನು ಬೆಂಬಲ ಬೆಲೆ ರೂಪದಲ್ಲಿ ರೈತರಿಗೆ ನೀಡುತ್ತಿದೆ. ಲೆಕ್ಕಹಾಕಿ ನೋಡಿದರೆ ಇದರಲ್ಲಿ ಬೀಜ, ಗೊಬ್ಬರ, ಕೂಲಿ ಆಳು, ತೊಗರಿ ಸಾಗಣಿಕೆ ವೆಚ್ಚ, ಔಷಧಿ ಖರೀದಿ ಸೇರಿದಂತೆ ಸಾವಿರಾರು ರೂಪಾಯಿ ಖರ್ಚಾ ಗುತ್ತದೆ. ಬೆಂಬಲ ಬೆಲೆ ನೀಡಿದರೂವರ್ಷವಿಡೀ ದುಡಿತಕ್ಕೆ ಏನು ಲಾಭ ಸಿಗುತ್ತಿಲ್ಲ ಎಂದು ಅನ್ನದಾತರು ಪ್ರಶ್ನಿಸುತ್ತಿದ್ದಾರೆ.
ತೊಗರಿ ಖರೀದಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಹಮಾಲಿಗಳಿಗೆ ಕೂಲಿ ಹಾಗೂ ಇತರೆ ವೆಚ್ಚಗಳನ್ನು ಟೆಂಡರ್ ಪಡೆದ ಗುತ್ತಿಗೆದಾರರು ಪಾವತಿಸಬೇಕೆಂಬ ಸರ್ಕಾರದ ನಿಯಮವಿದೆ. ಯಾವುದೇ ಕಾರಣಕ್ಕೂ ರೈತರು ಹಣ ನೀಡುವ ಅಗತ್ಯ ಇಲ್ಲ. ಹೀಗಿದ್ದರೂ ರೈತರಿಂದ ಹಣ ವಸೂಲಿ ಮಾತ್ರ ನಿಂತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಇನ್ನು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ದುರಾದೃಷ್ಟಕರ. ಇನ್ನಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ. ಬೇರೆ-ಬೇರೆ ಸಹಕಾರಿ ಸಂಘದಂತೆಯೇ ನಾವು ಕ್ವಿಂಟಲ್ ತೊಗರಿಗೆ 100 ರೂಪಾಯಿ ಪಡೆಯುತ್ತಿದ್ದೇವೆ. ರೈತರಿಗೆ ನಾವೇನೂ ತೊಗರಿ ಮಾರಾಟಕ್ಕೆ ತನ್ನಿ ಅಂತ ಹೇಳಿಲ್ಲ. ಬೇಕೆಂದರೆ ಬರಲಿ ಇಲ್ಲವಾದರೆ ಬಿಡಲಿ. ನಮಗೂ ಕಾಲಿ ಚೀಲ ತರಲು, ಹಮಾಲಿ ಸೇರಿದಂತೆ ಇತರೆ ಖರ್ಚುಗಳು ಇರುತ್ತವೆ.
ಎಸ್.ಎಂ. ದೇಸಾಯಿ, ಶರಣ ಸೋಮನಾಳ ಪಿಕೆಪಿಎಸ್ ಬ್ಯಾಂಕ್ ವ್ಯಪಸ್ಥಾಪಕ
ಯಾವುದೇ ಕ್ರಮ ಕೈಗೊಂಡಿಲ್ಲ ಎಲ್ಲ ಪಿಕೆಪಿಎಸ್‌ಗಳಲ್ಲಿ 80 ರೂಪಾಯಿಗಳು ರೈತರಿಂದ ಹಣ ಪಡೆಯುತ್ತಿದ್ದರೆ, ಶರಣ ಸೋಮನಾಳದಲ್ಲಿ ಪ್ರತಿ ಕ್ವಿಂಟಲ್‌ಗೆ 120 ರೂಪಾಯಿ ಪಡೆಯಲಾಗುತ್ತಿದೆ. ಇದು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಆದರೂ ಇತರೆ ಖರ್ಚು-ವೆಚ್ಚಕ್ಕೆ ನಮ್ಮಿಂದಲೂ 80 ರೂಪಾಯಿ ಪಡೆದರೂ ಸಾಕು. ಈಗ ವಸೂಲಿ ಮಾಡಿದ 120 ರೂ.ದಲ್ಲಿ 80 ರೂ. ಕಳೆದರೂ ಇನ್ನು 40 ರೂ.ಯನ್ನು ಪ್ರತಿ ರೈತರಿಗೆ ಮರಳಿ ಕೊಡಬೇಕು ಎಂದು ಹೆಸರು ಹೇಳಲು ಇಚ್ಚಿಸದ ರೈತರೊಬ್ಬರು ಆಗ್ರಹಿಸಿದರು.
ದಯಾನಂದ ಬಾಗೇವಾಡಿ