ಹೊಸದಿಲ್ಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಶ್ಲಾಘನೆ ಮಾಡಿದ್ದು, ಮೋದಿ ಅವರ ಮೇಕ್ ಇನ್ ಇಂಡಿಯಾ ಕ್ರಮವು ಭಾರತದ ಅರ್ಥ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದ್ದಾರೆ.
ಮಾಸ್ಕೋದಲ್ಲಿ ರಷ್ಯಾದ ಏಜೆನ್ಸಿ ಫಾರ್ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್ (ASI) ಆಯೋಜಿಸಿದ್ದ ವೇದಿಕೆಯಲ್ಲಿ ಪುಟಿನ್ ಮಾತನಾಡುತ್ತಿದ್ದರು.
ಸ್ಥಳೀಯವಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ತಯಾರಿಸಲು ಮತ್ತು ಕಂಪನಿಗಳನ್ನು ಪ್ರೋತ್ಸಾಹಿಸುವ ದೇಶಕ್ಕೆ ಭಾರತವನ್ನು ಉದಾಹರಣೆಯಾಗಿ ವ್ಲಾಡಿಮಿರ್ ಪುಟಿನ್ ಉಲ್ಲೇಖಿಸಿದ್ದಾರೆ ಎಂದು ವರದಿ ಹೇಳಿದೆ.
ನಮ್ಮ ಭಾರತದ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ವರ್ಷಗಳ ಹಿಂದೆ ಮೇಕ್ ಇನ್ ಇಂಡಿಯಾ ಕ್ರಮವನ್ನು ಕೈಗೊಂಡಿದ್ದರು. ಇದು ಭಾರತದ ಅರ್ಥ ವ್ಯವಸ್ಥೆಗೆ ನಿಜವಾಗಿಯೂ ಪರಿಣಾಮಕಾರಿ ಕೊಡುಗೆ ನೀಡಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಅನುಕರಿಸಲು ಇದು ಯಾವುದೇ ತಪ್ಪಿಲ್ಲ” ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾದಲ್ಲಿ ದೇಶೀಯ ಉತ್ಪನ್ನಗಳು ಮತ್ತು ಬ್ರ್ಯಾಂಡ್‌ಗಳನ್ನು ಉತ್ತೇಜಿಸಲು ಭಾರತದ ಉದಾಹರಣೆಯನ್ನು ನೀಡುತ್ತಾ ವ್ಲಾಡಿಮಿರ್ ಪುಟಿನ್ ಅವರು, “ನಮ್ಮ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಸಹಾಯ ಮಾಡುವ ಬೆಂಬಲ ಸಾಧನಗಳನ್ನು ನೀಡುವ ಅವಶ್ಯಕತೆಯಿದೆ” ಎಂದು ಹೇಳಿದರು.
ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಪರಿಣಾಮಕಾರಿ ಮಾದರಿಯನ್ನು ರಚಿಸಲು ಭಾರತದ ಕ್ರಮವನ್ನು ಅವರು ಶ್ಲಾಘಿಸಿದರು.
ಹೊಸತನದೊಂದಿಗೆ ನಮ್ಮ ಉತ್ಪನ್ನಗಳನ್ನು ಹೆಚ್ಚು ಅನುಕೂಲಕರವಾಗಿ ಮತ್ತು ಕ್ರಿಯಾತ್ಮಕವಾಗಿ ಮಾಡುವ ಬಗ್ಗೆ ನಾವು ಯೋಚನೆ ಮಾಡಬೇಕಿದೆ ಎಂದು ಪುಟಿನ್ ಒತ್ತಿ ಹೇಳಿದರು. ದೇಶಿಯ ವ್ಯವಹಾರವನ್ನು ಹೆಚ್ಚು ಬೆಳೆಸಲು ಕೈಗಾರಿಕಾ ಮತ್ತು ಉತ್ಪನ್ನ ವಿನ್ಯಾಸವು ಪ್ರಮುಖ ಮೂಲವಾಗಬೇಕು ಎಂದು ಪುಟಿನ್ ಹೇಳಿದರು.