ತಿ.ನರಸೀಪುರ: ಜಾತಿ ಧರ್ಮದ ಹೆಸರಿನಲ್ಲಿ ಹರಿದು ಹಂಚಿ ಹೋಗುತ್ತಿರುವ ಸಮಾಜವನ್ನು ಪ್ರೀತಿ ವಿಶ್ವಾಸದಿಂದ ಬೆಸೆಯುವ ಕೆಲಸವಾಗಬೇಕಿದೆ ಎಂದು ಗಾಯಕ ಹಾಗೂ ಕಿರುತೆರೆ ನಟ ಶಶಿಧರ ಕೋಟೆ ಹೇಳಿದರು.
ಪಟ್ಟಣದ ಪಿಆರ್‌ಎಂ ಕಲಾ ಪದ್ಮ ಸಭಾಂಗಣದಲ್ಲಿ ನಡೆದ ಪಿಆರ್‌ಎಂ ವಿಜಯ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಲರವ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಹಾಗೂ ಕನ್ನಡಿಗರ ಸಮಾಜ ಎಲ್ಲರನ್ನು ಪ್ರೀತಿಸಿ ಬದುಕುವ ವಾತಾವರಣ ಇತ್ತು.
ಪ್ರಸಕ್ತ ಸನ್ನಿವೇಶದಲ್ಲಿ ಜಾತಿ ಧರ್ಮ, ವರ್ಗದ ಹೆಸರಿನಲ್ಲಿ ಜನರು ಬೇರೆ ಬೇರೆಯಾಗುತ್ತಿದ್ದಾರೆ. ಈ ಪ್ರವೃತ್ತಿ ಸಮಾಜವನ್ನು ಒಡೆಯುತ್ತಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಿ ಪ್ರೀತಿಯಿಂದ ಬದುಕುವ ವಾತಾವರಣ ನಿರ್ಮಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಎಲ್ಲಾ ಭಾಷೆಗಳನ್ನು ಪ್ರೀತಿಸಿ ಗೌರವಿಸಿ. ಆದರೆ ನಮ್ಮ ಭಾಷೆ ಕನ್ನಡವನ್ನು ಆರಾಧಿಸಬೇಕು ಎಂದು ಹೇಳಿದರು.
ಪ್ರೀತಿ ಬೆಸೆಯುವ ಸಂಗೀತ: ಭಾಷೆ ಮತ್ತು ಸಂಗೀತದ ಶಕ್ತಿಯ ಬಗ್ಗೆ ವಿದ್ಯಾರ್ಥಿಗಳು ತಿಳಿಯಬೇಕು. ಸಂಗೀತ ಜನರಲ್ಲಿ ಪ್ರೀತಿಯ ಭಾವವನ್ನು ಬೆಳೆಸಿ ಅವರನ್ನು ಪರಸ್ಪರ ಬೆಸೆಯುತ್ತದೆ. ಕುವೆಂಪು ಆಶಯದಂತೆ ವಿಶ್ವಮಾನವ ಪ್ರಜ್ಞೆಯನ್ನು ಪ್ರೀತಿಯ ಮೂಲಕ ಸಾಧಿಸಲು ಸಾಧ್ಯವೆಂದು ಹೇಳಿದರು.
ಬೆಂಗಳೂರಿನ ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಆರ್.ವಿ.ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯುವುದರ ಜತೆಗೆ ಸಾಂಸ್ಕೃತಿಕವಾಗಿ ಮತ್ತು ಕ್ರೀಡೆ ಸಾಧಕರಾಗಿ ತಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತನೆ ಮಾಡುವಂತೆ ಸಲಹೆ ಮಾಡಿದರು.
ಇದೇ ವೇಳೆ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗಾಯಕ ಶಶಿಧರ್ ಕೋಟೆ ಬಾರಿಸು ಕನ್ನಡ ಡಿಂಡಿಮ ಹಾಗೂ ಕೋಡಗನ ಕೋಳಿ ನುಂಗಿತ್ತಾ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಪದ್ಮನಾಭ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಚಂದ್ರಮೋಹನ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.