Advertisement

ಸಾಲ ಸೌಲಭ್ಯದಿಂದ ಆರ್ಥಿಕ ಪ್ರಗತಿ ಸಾಧಿಸಿ

09:34 AM Jan 18, 2019 | |

ಬೀದರ: ಬೀದರ ದಕ್ಷಿಣ ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿ, ಸಚಿವನಾಗಿ ಆಯ್ಕೆ ಆಗಿದ್ದೇನೆ. ಬಡವರಿಗಾಗಿ ಏನಾದರೂ ಮಾಡಬೇಕೆಂದು ಚಿಂತಿಸಿ ಸಹಕಾರ ಇಲಾಖೆ ಅಡಿಯಲ್ಲಿ ಬಡವರ ಬಂಧು ಹಾಗೂ ಕಾಯಕ ಯೋಜನೆಗೆ ಚಾಲನೆ ನೀಡಲಾಗಿದ್ದು, ಯೋಜನೆಯಡಿ ಅರ್ಹ ಫಲಾನುಭವಿಗಳು ಸೌಲಭ್ಯ ಪಡೆದು ಆರ್ಥಿಕವಾಗಿ ಬೆಳೆಯಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಗುರುವಾರ ಬಡವರ ಬಂಧು ಮತ್ತು ಕಾಯಕ ಯೋಜನೆಯ ಫಲಾನುಭವಿಗಳಿಗೆ ಚೆಕ್‌ ಹಾಗೂ ಸಾಲ ಮಂಜೂರು ಆದೇಶ ಪತ್ರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದುಡಿಯುವ ಕೈಗಳು ಬೇಡುವ ಕೈಗಳಾಗಬಾರದು, ಬದಲಿಗೆ ನೀಡುವ ಕೈಗಳಾಗಬೇಕು ಎಂಬ ಪರಿಕಲ್ಪನೆ ಹಿನ್ನೆಲೆಯಯಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಕಾಯಕ ಯೋಜನೆ ಅಡಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ 5 ರಿಂದ 10 ಲಕ್ಷದ ವರೆಗೆ ಸಾಲ ನೀಡಲಾಗುತ್ತಿದೆ. ಮಹಿಳಾ ಗುಂಪುಗಳು ಯೋಜನೆಯ ಕುರಿತು ತಿಳಿದುಕೊಂಡು ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು. ವರ್ಷಕ್ಕೆ 10 ಸಾವಿರ ಸ್ವಸಹಾಯ ಸಂಘಗಳಿಗೆ ಸಾಲ ನೀಡುವ ಯೋಜನೆ ಇದೆ. ಪ್ರತಿ ವರ್ಷ ಇದೇ ರೀತಿ ಮುಂದುವರಿದರೆ ಸ್ವಸಹಾಯ ಸಂಘಗಳು ಸಾಲ ನೀಡುವ ಹಂತಕ್ಕೆ ಬರುತ್ತವೆ. ಆ ಗುಂಪಿನ ಮಹಿಳೆಯರು ಆರ್ಥಿಕವಾಗಿ ಬೆಳೆಯುತ್ತಾರೆ ಎಂದರು.

ಸಾಲಮನ್ನಾ: ಮೈತ್ರಿ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಕುರಿತು ಇಂದು ದೇಶದ ಎಲ್ಲಾ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ 50 ಸಾವಿರ ರೂ. ಸಾಲಮನ್ನಾ ಯೋಜನೆಯಡಿ ಬೀದರ ಜಿಲ್ಲೆಯಲ್ಲಿ 522 ಕೋಟಿ ಸಾಲ ಮನ್ನಾ ಆಗಿತ್ತು. ಇದೀಗ ಮತ್ತೆ ಮೈತ್ರಿ ಸರ್ಕಾರದಲ್ಲಿ 503 ಕೋಟಿ ಸಾಲ ಮನ್ನಾ ಆಗಲಿದೆ ಎಂದರು. ರೈತರಿಂದ ಪಡೆದ ದಾಖಲೆಗಳು ದತ್ತಾಂಶದ ಮೂಲಕ ಸರಿಪಡಿಸುವ ನಿಟ್ಟಿನಲ್ಲಿ ಸ್ವಲ್ಪ ವಿಳಂಬವಾಗುತ್ತಿದ್ದು, ಹಂತ ಹಂತವಾಗಿ ಸಾಲಮಆ್ನ ಯೋಜನೆಯ ವೇಗ ಹೆಚ್ಚಲಿದೆ ಎಂದರು.

ಬಡವರ ಬಂಧು: ಬೀದಿ ವ್ಯಾಪಾರಸ್ಥರಿಗೂ ನೆರವು ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬೀದಿ ವ್ಯಾಪಾರಸ್ಥರು ಪ್ರತಿ ನಿತ್ಯ ಸಾಲದ ಹಣ ತಂದು ವ್ಯಾಪಾರ ಮಾಡಿ, ಸಂಜೆ ಬಡ್ಡಿ ಜತೆಗೆ ಹಣ ಪಾವತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ವ್ಯಾಪರಸ್ಥರು ಅನೇಕ ತೊಂದರೆ ಎದುರಿಸುತ್ತಿದ್ದರು. ಸರಾಸರಿ ದಿನಕ್ಕೆ ಶೇ.10ರಷ್ಟು ಬಡ್ಡಿ ಬಡವರಿಂದ ಸುಲಿಗೆ ಮಾಡಲಾಗುತ್ತಿತ್ತು. ಇದನ್ನು ಗಮನಿಸಿ, ವ್ಯಾಪಾರಸ್ಥರ ಜತೆಗೆ ಮಾತುಕತೆ ನಡೆಸಿ ಬಡವರ ಬಂಧು ಯೋಜನೆಯ ಚಿಂತನೆ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳ ಜತೆಗೆ ಕೂಡ ಚರ್ಚೆ ನಡೆಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಯೋಜನೆ ಅನುಷ್ಠಾನ ಮಾಡಲಾಗಿದೆ. 2 ಸಾವಿರ ದಿಂದ 10 ಸಾವಿರ ವರೆಗೆ ಯಾವುದೇ ಅಡಮಾನ ಇಲ್ಲದೆ ಹಾಗೂ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಯೋಜನೆ ಅನುಷ್ಠಾನಗೊಂಡಿದ್ದು, ಸಾಲ ಪಡೆದ ಜನರು ಈಗಾಗಲೇ ಸಾಲದ ಶೇ.40ರಷ್ಟು ಹಣ ಪಾವತಿ ಮಾಡಿದ್ದಾರೆ. ಸರ್ಕಾರದ ಯೋಜನೆ ಲಾಭ ಪಡೆದು ಆರ್ಥಿಕವಾಗಿ ಬೀದಿ ವ್ಯಾಪಾರಸ್ಥರು ಬೆಳೆಯಬೇಕು ಎಂದರು.

Advertisement

ಅಧಿಕಾರಿ ನೇಮಿಸಿ: ಅನೇಕ ವ್ಯಾಪರಸ್ಥರು ಬೀದಿ ವ್ಯಾಪಾರ ಮಾಡುವ ಗುರುತಿನ ಚೀಟಿ ಹೊಂದಿಲ್ಲ. ಕಾರಣ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗುತ್ತಿದ್ದು, ವ್ಯಾಪಾರಸ್ಥರನ್ನು ಗುರುತಿಸುವ ಕಾರ್ಯಕ್ಕೆ ಬ್ಯಾಂಕ್‌ಗಳು ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು. ಬೀದಿಯಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಗುರುತಿಸಿ, ಅವರ ಚಿತ್ರ ತೆಗೆದುಕೊಂಡು ಸರಳವಾಗಿ ಸಾಲ ನೀಡುವ ಕೆಲಸ ಮಾಡಬೇಕು. ಅಲ್ಲದೇ ಬೀದಿ ವ್ಯಾಪಾರಸ್ಥರಿಗೆ ಯೋಜನೆಯ ಸೂಕ್ತ ಮಾಹಿತಿ ನೀಡುವ ಕೆಲಸ ಆಗಬೇಕು ಎಂದರು.

ವಸ್ತುಗಳ ಖರೀದಿ: ಕಾಯಕ ಯೋಜನೆಯಡಿ ಸಾಲ ಪಡೆದ ಸಂಘಗಳು ಉದ್ಯೋಗ ಪ್ರಾರಂಭಿಸಿ ವಿವಿಧ ವಸ್ತುಗಳನ್ನು ತಯಾರಿಸಿದ ನಂತರ ಅವುಗಳ ಮಾರಾಟಕ್ಕೆ ಸಹಕಾರ ಇಲಾಖೆ ಅಡಿಯಲ್ಲಿ ಯೋಜನೆಯೊಂದನ್ನು ರೂಪಿಸಿ ಸಂಘಗಳ ಎಲ್ಲಾ ವಸ್ತುಗಳ ಖರೀದಿಸುವ ಆಲೋಚನೆ ಇದ್ದು, ಬರುವ ಬಜೆಟ್‌ನಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಇದರಿಂದ ಸಂಘಗಳು ತಯಾರಿಸುವ ವಸ್ತುಗಳಿಗೆ ಸರಳವಾಗಿ ಮಾರುಕಟ್ಟೆ ಕಲ್ಪಿಸಿದಂತಾಗುತ್ತದೆ ಎಂದರು.

ಕ್ರಾಂತಿಕಾರಿ ಯೋಜನೆಗಳು: ಈ ವೇಳೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ರಹೀಂ ಖಾನ್‌ ಮಾತನಾಡಿ, ಸಹಕಾರಿ ಇಲಾಖೆಯು ಇಡೀ ರಾಜ್ಯದಲ್ಲಿ ಕ್ರಾಂತಿ ಮಾಡುವಂತಹ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಕಾಯಕ ಮತ್ತು ಬಡವರ ಬಂಧುಗಳಂತಹ ಯೋಜನೆಗಳಿಂದ ಬಡವರಿಗೆ ಬಹಳಷ್ಟು ಅನುಕೂಲವಾಗಲಿದೆ. ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ಈಗಿನ ಸಮ್ಮಿಶ್ರ ಸರ್ಕಾರ ಮುಂದುವರೆಸಿದ್ದಲ್ಲದೇ ಹೊಸದಾಗಿ ಕೂಡ ಅನೇಕ ಬಡವರ ಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.

ಚೆಕ್‌ ವಿತರಣೆ: ಸಮಾರಂಭದಲ್ಲಿ ಸಾಯಿಬಾಬಾ ಸ್ವ ಸಹಾಯ ಸಂಘ, ಮಾತೆ ಮಾಣಿಕೇಶ್ವರಿ ಸ್ವ ಸಹಾಯ ಸಂಘ, ಜೀವದಾನಿ ಸ್ವ ಸಹಾಯ ಸಂಘ ಮತ್ತು ಅಕ್ಕಮಹಾದೇವಿ ಸ್ವ ಸಹಾಯ ಸಂಘಗಳಿಗೆ ಸಚಿವ ಬಂಡೆಪ್ಪ ಖಾಶೆಂಪೂರ ಅವರು ತಲಾ 5 ಲಕ್ಷ ರೂ. ಸಾಲ ಮಂಜೂರಾತಿ ಆದೇಶ ಪತ್ರ ನೀಡಿದರು. ಚಹಾ ಅಂಗಡಿಯ ವ್ಯಾಪಾರಿಗಳಾದ ಬಲರಾಮ, ಬಬಿತಾ ಜಗದೀಶ, ಮೆಹತಾಬ, ಸಂತೋಷ ಮತ್ತು ಎಂ.ಡಿ.ಅಮೀನ್‌ ಸೇರಿದಂತೆ ಇತರರಿಗೆ ತಲಾ 10 ಸಾವಿರ ರೂ. ಚೆಕ್‌ ನೀಡಲಾಯಿತು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ, ತಾಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮುಲು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಮಾಂಜ್ರಾ ಮಹಿಳಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಗಾಂಧಿಗಂಜ್‌ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ವಿಜಯಕುಮಾರ ಪಾಟೀಲ ಹಾಗೂ ಇತರರು ಇದ್ದರು. ಸಹಕಾರ ಇಲಾಖೆಯ ಉಪ ನಿಬಂಧಕ ಕಲ್ಲಪ್ಪ ಒಬಣ್ಣಗೋಳ, ಜಂಟಿ ನಿಬಂಧಕ ಐ.ಎಸ್‌.ಗಿರಡ್ಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಮಹಾಜನ್‌ ಹಾಗೂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next