Advertisement

ಮಕ್ಕಳಿಗೆ ಕೃಷಿಯ ಅರಿವು ಮೂಡಿಸುವ ಕಾರ್ಯವಾಗಲಿ

05:54 PM Jan 03, 2023 | Team Udayavani |

ಮುಧೋಳ: ರೈತ ಶ್ರಮಪಡದಿದ್ದರೆ ನಮಗೆ ಉಸಿರಾಡಲು ಉತ್ತಮ ಗಾಳಿ, ಶಾಂತಿಯುತವಾಗಿ ವಿಶ್ರಾಂತಿ ಪಡೆಯಲು ಅವಕಾಶ ಇರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು, ವಿದ್ಯಾರ್ಥಿ ದೆಸೆಯಿಂದಲೇ ನಾವು ಕೃಷಿಯ ಅರಿವನ್ನು ಮಕ್ಕಳ ಮನಸಿನಲ್ಲಿ ಬಿತ್ತುವ ಕಾರ್ಯ ವಾಗಬೇಕು ಎಂದು ಯುವ ಕೃಷಿಕ ಸಿದ್ದು ಕಳ್ಳೆನ್ನವರ ಹೇಳಿದರು.

Advertisement

ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಯುವ ಕೃಷಿಕರಿಗೆ ನೀಡುವ 2022-23ನೇ ಸಾಲಿನ ಶ್ರೀ ಸಂಗಮ ಯುವ ಕೃಷಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವಿಕರಿಸಿ ಅವರು ಮಾತನಾಡಿದರು. ಕೃಷಿ ಕಷ್ಟವಾಗಬಹುದು. ಆದರೆ, ಮುಂದೊಂದು ದಿನ ಅದಕ್ಕೆ ಮಹತ್ವ ಬರುತ್ತದೆ. ರೈತರಿಗೆ ನ್ಯಾಯಯುತ ಬೆಲೆ ಸಿಕ್ಕಾಗ ಕೃಷಿಯತ್ತ ಯುವಕರು ಸಾಗರೋಪಾದಿಯಲ್ಲಿ ಬರುತ್ತಾರೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತ ಉತ್ತೂರ ಗ್ರಾಮದ ರೈತ ಈರಣ್ಣ ಬೋರಡ್ಡಿ ಮಾತನಾಡಿ ನಾವು ಶಿಕ್ಷಣ ಪಡೆದು ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದು ಕೊಂಡಾಗ ನಮ್ಮ ಕಾಲೆಳೆದವರೇ ಹೆಚ್ಚು ಅಂತಹ ಸಮಾಜವನ್ನು ಎದಿರಿಸಿದಾಗ ಭೂತಾಯಿ ನಮ್ಮನ್ನು ಕೈ ಬಿಡಲಿಲ್ಲ ವರ್ಷಕ್ಕೆ ಎಕರೆಗೆ ಹತ್ತು ಲಕ್ಷದವರೆಗೆ ಆದಾಯ ಪಡೆಯುವಂತಾಗಿದ್ದೇವೆ ಎಂದು ಹೇಳಿದರು.

ಯುವ ಕೃಷಿಕರಾದ ಮರೆಗುದ್ದಿಯ ಮಲ್ಲಪ್ಪ ಕಂಬಾರ ಮಾತನಾಡಿ, ಆಯಗಾರ ಮನೆತನದಿಂದ ಬಂದ ನಮಗೆ ಕೃಷಿಯಲ್ಲಿ ತೊಡಗುವ ಸಮಯದಲ್ಲಿ ಸಾಕಷ್ಟು ತೊಂದರೆಯಾಗಿದ್ದು ಅದನ್ನು ಎದುರಿಸಿ ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಎಂಬ ಕವಿಯ ವಾಣಿಯನ್ನು ಅರಿತು ಕಲ್ಲು, ಗರಸು ಮಣ್ಣು ಇರುವ ಪ್ರದೇಶದಲ್ಲಿ ಲಕ್ಷಾಂತರ ರೂ. ಗಳ ಆದಾಯ ಬರುವಂತೆ ಮಾಡಿ ಮಡ್ಡಿ ನೆಲವನ್ನು ಬಂಗಾರ ಭೂಮಿ ಮಾಡಿ ವರ್ಷಕ್ಕೆ ಮೂವತ್ತು ಲಕ್ಷ ಅದಾಯ ಪಡೆಯುತ್ತಿದ್ದೇನೆ
ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಶಿಶಿರ ಮಲಘಾಣ ಮಾತನಾಡಿ, ಶಾಲಾ ಮಟ್ಟದಲ್ಲಿ ಕೃಷಿಯ ಬಗ್ಗೆ ಮಾಹಿತಿಯನ್ನು ಪಠ್ಯದ ಜತೆಗೆ ಕ್ಷೇತ್ರ ಕಾರ್ಯಮಾಡಿಸುವ ಮೂಲಕ ಅನ್ನದಾತನಾಗಲು ಮುಂದೆ ಬರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.

Advertisement

ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಂತ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇರುವ ವಿಷಯದ ಕಡೆಗೆ ಗಮನ ಹರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ತೆರೆ ಮರೆಯಲ್ಲಿ ಸಾಧನೆ ಮಾಡಿದ ಸಾಧಲ ಕೃಷಿಕರನ್ನು ಸನ್ಮಾನಿಸುವ ಮೂಲಕೃಷಿಕರಿಗೆ ಗೌರವ ಸೂಚಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ಪ್ರತಿ ವರ್ಷ ರೈತ ದಿನಾಚರಣೆ ನಿಮಿತ್ಯ ನೀಡಲಾಗುವ ಶ್ರೀ ಸಂಗಮ ಯುವ ಕೃಷಿ ರತ್ನ ಪ್ರಶಸ್ತಿಯನ್ನು ಮರೆಗುದ್ದಿಯ ಮಲ್ಲಪ್ಪ ಕಂಬಾರ, ಮುಗಳಖೋಡದ ಸಿದ್ದು ಕಳ್ಳೆನವರ, ಉತ್ತೂರದ ಈರಣ್ಣ ಬೋರಡ್ಡಿ ಅವರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಇದಕ್ಕೂ ಮುಂಚೆ ಸುಮಾರು 500ವಿದ್ಯಾರ್ಥಿಗಳು ರೈತರ ಉಡುಗೆಯಲ್ಲಿ ಮಿಂಚಿದ್ದು ವಿಶೇಷ.

ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಶಿಶಿರ ಮಲಘಾಣ, ಆಡಳಿತಾಧಿಕಾರಿ ಮಲ್ಲು ಕಳ್ಳೆನವರ, ಪ್ರಾಚಾರ್ಯ ಡಾ| ಎಸ್‌.ಖಾನ್‌, ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ, ಪ್ರತಿಭಾ ಚವ್ಹಾಣ ಇದ್ದರು. ಭಾಗ್ಯ ನಾಯಿಕ ಸ್ವಾಗತಿಸಿ, ಪ್ರೇಮಾ ಮಾದರ, ಆಶಾಬಿ ಮುಲ್ಲಾ ನಿರೂಪಿಸಿ, ಸುಮನ್‌ ಕೊಡಗ ವಂದಿಸಿದರು. ನಂತರ ರೈತ ಜೀವನ ಕುರಿತ ಸಾಕ್ಷé ಚಿತ್ರ ಹಾಗೂ ನೃತ್ಯ ಕಾರ್ಯಕ್ರಮವನ್ನು ಸಂಗಮನಾಥ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next