ಬೀದರ: ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೆ, ಅವರನ್ನೇ ಆಸ್ತಿಯನ್ನಾಗಿ ಮಾಡಿ ಸಮಾಜಮುಖೀ ಹಾಗೂ ಅಧ್ಯಾತ್ಮ ಜೀವಿಗಳನ್ನಾಗಿ ಪರಿವರ್ತಿಸಬೇಕು ಎಂದು ಪ್ರಾಧ್ಯಾಪಕ ಲಕ್ಷ್ಮೀಕಾಂತ ಕುಲಕರ್ಣಿ ಕರೆ ನೀಡಿದರು.
ಇಲ್ಲಿನ ಜೆಪಿ ನಗರದ ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದಲ್ಲಿ 8ರಿಂದ 14 ವರ್ಷದ ಮಕ್ಕಳಿಗಾಗಿ ಆಯೋಜಿಸಿರುವ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಸಂಸ್ಕಾರವೂ ಅಗತ್ಯ. ಅದು ಯಾವುದೇ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ.
ಯಾರೂ ಹುಟ್ಟಿನಿಂದ ದಡ್ಡರಲ್ಲ, ಪ್ರತಿ ಮಕ್ಕಳಲ್ಲಿ ಒಂದೊಂದು ರೀತಿಯ ಪ್ರತಿಭೆ ಹುದುಗಿರುತ್ತದೆ. ಇಂಥ ತರಬೇತಿಗಳ ಮೂಲಕ ಅವರನ್ನು ಜಾಗೃತಗೊಳಿಸಿ, ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕಿದೆ ಎಂದರು.
ಕೇಂದ್ರದ ಪ್ರವರ್ತಕ ಪ್ರಭಾಕರ ಕೋರವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಬೌದ್ಧಿಕ ವಿಕಾಸಕ್ಕೆ ಯೋಗ, ಪ್ರಾಣಾಯಾಮ ಎಷ್ಟು ಮುಖ್ಯವೋ, ಮಾನಸಿಕ ಬೆಳವಣಿಗೆಗೆ ಧ್ಯಾನ ಹಾಗೂ ಆಧ್ಯಾತ್ಮ ಜ್ಞಾನ ಅಷ್ಟೇ ಮುಖ್ಯ. ಇವೆರಡೂ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಯೊಗ್ಯವಾಗಿದ್ದು, ಅವರ ಶೈಕ್ಷಣಿಕ ಬದುಕಿನಲ್ಲಿ ಈ ಎರಡು ಪ್ರಕ್ರಿಯಗಳು ನಿರಂತರವಾಗಿ ನಡೆಯಬೇಕಾಗಿದೆ ಎಂದು ಹೇಳಿದರು.
ತರಬೇತಿ ಸಂಪನ್ಮೂಲ ವ್ಯಕ್ತಿ ರೇಣುಕಾ ಮಾತನಾಡಿ, ಅನ್ನ, ನೀರು ಹಾಗೂ ಗಾಳಿ ಇವು ಮನುಷ್ಯನ ಪಂಚೇಂದ್ರಿಯಗಳಿಗೆ ಶಕ್ತಿ ನೀಡಿದರೆ, ರಾಜಯೋಗ, ಧ್ಯಾನ ಮನುಷ್ಯನ ಆತ್ಮಶಕ್ತಿ ಹೆಚ್ಚಿಸುತ್ತವೆ. ಇದರಿಂದ ಆತನ ಜೀವನ ಸುಂದರ ಹಾಗೂ ಶಾಂತವಾಗಿರಲು ಸಾಧ್ಯ ಎಂದರು.
ಶಿವಮೂರ್ತಿ ಅವರು, ಮಕ್ಕಳಲ್ಲಿ ಪ್ರಾಮಾಣಿಕತೆ ಹಾಗೂ ಉತ್ತಮ ನಡವಳಿಕೆ ಅಳವಡಿಕೆ ಕುರಿತು ತರಬೇತಿ ನೀಡಿದರು. ಸಮರ್ಥಿ ರಾಜಯೋಗ ಧ್ಯಾನ ನಡೆಸಿಕೊಟ್ಟರು. ಮಂಗಲಾ ಸ್ವಾಗತಿಸಿದರು. ಮಹಾನಂದಾ ನಿರೂಪಿಸಿದರು.