Advertisement

Research Innovation: ಸಿಲಿಕಾನ್‌ ಸಿಟಿ ಸಮೀಪವೇ ದೇಶದ ಮೊದಲ ನಾಲೆಡ್ಜ್ ಸಿಟಿ

01:35 AM Sep 26, 2024 | Team Udayavani |

ರಾಜ್ಯ ರಾಜಧಾನಿ ಬೆಂಗಳೂರು ಸಿಲಿಕಾನ್‌ ಸಿಟಿ ಎಂಬ ಖ್ಯಾತಿ ಪಡೆದು ಜಾಗತಿಕವಾಗಿ ಗುರುತಿಸಿಕೊಂಡಿದೆ. ಇದೀಗ ಬೆಂಗಳೂರು ಸಮೀಪದಲ್ಲಿ ದೇಶದಲ್ಲೇ ಮೊದಲ ನಾಲೆಡ್ಜ್ (ಜ್ಞಾನ-ಆರೋಗ್ಯ- ಅವಿಷ್ಕಾರ-ಸಂಶೋಧ‌ನ ಕೆಎಚ್‌ಐಆರ್‌) ಸಿಟಿ ನಿರ್ಮಾಣವಾಗಲಿದೆ. ಆರೋಗ್ಯ, ಜ್ಞಾನ ಮತ್ತು ಜಾಗತಿಕ ಸಂಶೋಧನ ಕೇಂದ್ರಗಳ ನವೋದ್ಯಮಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುವ ನಾಲೆಡ್ಜ್ ಸಿಟಿ ಇದಾಗಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತಕ್ಕೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಈ ನಾಲೆಡ್ಜ್ ಸಿಟಿ ಯೋಜನೆ ಕುರಿತ ಸ್ಥೂಲ ನೋಟ ಇಲ್ಲಿದೆ.

Advertisement

ನಾಲೆಡ್ಜ್ ಸಿಟಿಯಲ್ಲಿ ಏನೇನು ಇರಲಿದೆ?
ವಿಶ್ವದರ್ಜೆಯ ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು, ಸಂಶೋಧನ ಸಂಸ್ಥೆಗಳು, ನವೋದ್ಯಮಗಳು, ಖಾಸಗಿ ಕಂಪೆನಿಗಳು, ಪ್ರವಾಸೋದ್ಯಮ ಕ್ಷೇತ್ರದ ಸಂಸ್ಥೆಗಳು, ಆರ್‌ ಆ್ಯಂಡ್‌ ಡಿ ಕೇಂದ್ರಗಳು, ಜೀವ ವಿಜ್ಞಾನ ಕೇಂದ್ರಗಳು, ಸೆಮಿಕಂಡಕ್ಟರ್‌, ಭವಿಷ್ಯದ ಸಂಚಾರ ವ್ಯವಸ್ಥೆ, ಅಡ್ವಾನ್ಸ್‌ ಉತ್ಪಾದನ ಕೇಂದ್ರ ಹಾಗೂ ವೈಮಾನಿಕ ರಿಕ್ಷ, ರಕ್ಷಣ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. ಒಟ್ಟಾರೆ ಆರೋಗ್ಯ, ಜ್ಞಾನ ಮತ್ತು ಜಾಗತಿಕ ಸಂಶೋಧನ ಕೇಂದ್ರಗಳ ನವೋದ್ಯಮಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುವ ದೇಶದ ಮೊದಲ ನಾಲೆಡ್ಜ್ ಸಿಟಿ ಇದಾಗಿದೆ.

1 ಲಕ್ಷ ಉದ್ಯೋಗ ಸೃಷ್ಟಿ?
ಜ್ಞಾನ, ಆರೋಗ್ಯ, ನಾವೀನ್ಯತೆ, ಸಂಶೋಧನೆ, ಮೂಲ ಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ರಾಜ್ಯ ಸರಕಾರ ಹೊಂದಿದೆ. ಈ ಮೂಲಕ ಈ ಹೊಸ ಸಿಟಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 1 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಜಾಗತಿಕ ಕೇಂದ್ರ
ದೇಶದಲ್ಲಿ ಕರ್ನಾಟಕವು ಶೇ.60ರಷ್ಟು ಜೈವಿಕ ತಂತ್ರಜ್ಞಾನ ಕಂಪೆನಿಗಳು, 350ಕ್ಕೂ ಅಧಿಕ ವೈದ್ಯಕೀಯ ಸಾಧನಗಳು ಹಾಗೂ ಸರಬರಾಜು ತಯಾರಿಕೆಗೆ ನೆಲೆಯಾಗಿದೆ. ರಕ್ಷಣ, ಬಾಹ್ಯಾಕಾಶ ಉತ್ಪನ್ನಗಳು, ಸಾಫ್ಟ್ವೇರ್‌ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಇದೀಗ ನಾಲೆಡ್ಜ್ ಸಿಟಿ ಯೋಜನೆಯಿಂದ ಜಾಗತಿಕ ಮಟ್ಟದ ಜ್ಞಾನ, ಆರೋಗ್ಯ, ಸಂಶೋಧ ಹಬ್‌ ಆಗುವ ನಿರೀಕ್ಷೆ ಇದೆ.

Advertisement

ನಾಲೆಡ್ಜ್ ಸಿಟಿಯಿಂದ ವಾರ್ಷಿಕ 1 ಲಕ್ಷ ಕೋಟಿ ರೂ. ವರಮಾನ
ಬೆಂಗಳೂರು ಈಗಾಗಲೇ ಸಿಲಿಕಾನ್‌ಸಿಟಿ ಎಂಬ ಖ್ಯಾತಿ ಪಡೆದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ದೇಶದಲ್ಲಿ ಸಾಫ್ಟ್ವೇರ್‌ ರಫ್ತಿನಲ್ಲಿ ಬೆಂಗಳೂರಿನ ಕೊಡುಗೆ ಶೇ.60ರಷ್ಟು ಇದೆ. ಈ ನಾಲೆಡ್ಜ್ ಸಿಟಿ ಯೋಜನೆಯಿಂದ ರಫ್ತು ಪ್ರಮಾಣ ಹೆಚ್ಚಾಗಿ ಆರ್ಥಿಕತೆಗೆ ಉತ್ತೇಜನ ನೀಡಲಿದೆ. ವಾರ್ಷಿಕ 1 ಲಕ್ಷ ಕೋಟಿ ರೂ.ನಷ್ಟು ವರಮಾನ ಉತ್ಪತ್ತಿಯಾಗಲಿದ್ದು, ರಾಜ್ಯದ ಜಿಡಿಪಿಗೆ ಶೇ.5ರಷ್ಟು ಕೊಡುಗೆ ಈ ನಾಲೆಡ್ಜ್ ಸಿಟಿಯಿಂದ ಬರಲಿದೆ. ಯೋಜನೆ ಪೂರ್ಣಗೊಂಡರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 1 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ.

ನಾಲೆಡ್ಜ್ ಸಿಟಿ ಎಲ್ಲಿದೆ?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಕಿ.ಮೀ. ದೂರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ- ದಾಬಸ್‌ಪೇಟೆ ನಡುವೆ ನಾಲೆಡ್ಜ್ ಸಿಟಿ ತಲೆ ಎತ್ತಲಿದೆ. ಈ ಸಿಟಿಯನ್ನು ಪ್ರತೀ ಎಕ್ರೆಗೆ 100 ಜನರ ವಸತಿ ಸಾಂದ್ರತೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗುತ್ತದೆ.

2,000 ಎಕ್ರೆ ಪ್ರದೇಶ
ದೊಡ್ಡಬಳ್ಳಾಪುರ-ದಾಬಸ್‌ಪೇಟೆ ನಡುವೆ 2,000 ಎಕ್ರೆ ಪ್ರದೇಶದಲ್ಲಿ ಕೆಎಚ್‌ಐಆರ್‌ ಸಿಟಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 500 ಎಕ್ರೆ ಜಾಗದಲ್ಲಿ ಅಭಿವೃದ್ಧಿಪಡಿಸ ಲಾ ಗುತ್ತಿದೆ. ಭವಿಷ್ಯದಲ್ಲಿ 5,000 ಸಾವಿರ ಎಕ್ರೆಗೆ ಯೋಜನೆಯನ್ನು ವಿಸ್ತರಿಸುವ ಚಿಂತನೆ ಕೂಡ ಇದೆ.

ಸಿಂಗಾಪುರ, ಅಮೆರಿಕವೇ ಈ ಸಿಟಿಗೆ ಮಾದರಿ!
ಬೆಂಗಳೂರಿನ ನಾಲೆಡ್ಜ್ ಸಿಟಿ ಯೋಜನೆಯನ್ನು ಸಿಂಗಾಪುರದ ಬಯೊಪೋಲಿಸ್‌, ರೀಸರ್ಚ್‌ ಟ್ರ್ಯಾಂಗಲ್‌ ಪಾರ್ಕ್‌, ಸೈನ್ಸ್‌ ಪಾರ್ಕ್‌, ಕೆಬಿಐಸಿ ಹಾಗೂ ಅಮೆರಿಕದ ಬೋಸ್ಟನ್‌ ಇನ್ನೋವೇಶನ್‌ ಕ್ಲಸ್ಟರ್‌ ಮಾದರಿಯಲ್ಲಿ ಅಭಿವೃದ್ಧಿಪಡಿ ಸಲಾ ಗುತ್ತಿದೆ. ಈ ನವೀನ ನಗರದಲ್ಲಿ ವಿಶ್ವ ದರ್ಜೆಯ ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು, ನಾವಿನ್ಯತೆಯ ಕೈಗಾರಿಕೆಗಳು ಮತ್ತು ಸಂಶೋಧನ ಸಂಸ್ಥೆಗಳು ತಲೆ ಎತ್ತಲಿವೆ.

ರಿಯಲ್‌ ಎಸ್ಟೇಟ್‌ ಅಭಿವೃದ್ಧಿ
ಈ ನಾಲೆಡ್ಜ್ ಸಿಟಿ ನಿರ್ಮಾಣದಿಂದ ರಿಯಲ್‌ ಎಸ್ಟೇಟ್‌ ಗಣನೀಯವಾಗಿ ಅಭಿವೃದ್ಧಿ ಹೊಂದಲಿದೆ. ಮುಂದೆ ನೆಲಮಂಗಲ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ ಭವಿಷ್ಯದಲ್ಲಿ ನೆಲಮಂಗಲ, ದಾಬಸ್‌ಪೇಟೆಗೆ ಮೆಟ್ರೋ ರೈಲು ಮಾರ್ಗವನ್ನು ವಿಸ್ತರಿಸುವ ಚಿಂತನೆ ಇದೆ. ನಾಲೆಡ್ಜ್ ಸಿಟಿ 5 ಸಾವಿರ ಎಕ್ರೆಯಲ್ಲಿ ಅಭಿವೃದ್ಧಿಪಡಿಸುತ್ತಿರುವುದರಿಂದ ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸ್‌ಪೇಟೆ, ತುಮಕೂರು ಆಸುಪಾಸಿನಲ್ಲಿ ಭಾರೀ ಪ್ರಮಾಣದಲ್ಲಿ ರಿಯಲ್‌ ಎಸ್ಟೇಟ್‌ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ.

ಸಲಹಾ ಮಂಡಳಿ ರಚನೆ
ನಾಲೆಡ್ಜ್ ಸಿಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಸಲಹಾ ಮಂಡಳಿರಚಿಸಲಾಗಿದೆ. ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ| ದೇವಿ ಶೆಟ್ಟಿ, ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ಇನ್ಫೋಸಿಸ್‌ ಮಂಡಳಿಯ ಸದಸ್ಯ ಮೋಹನ್‌ ದಾಸ್‌ ಪೈ, ಹೃದ್ರೋಗ ತಜ್ಞ ಡಾ| ವಿವೇಕ್‌ ಜವಳಿ, ಪ್ರಶಾಂತ್‌ ಪ್ರಕಾಶ್‌, ಆಕ್ಸೆಲ್‌ ಪಾಲುದಾರ ರಾಂಚ್‌ ಕಿಂಬಾಲ್‌, ಥಾಮಸ್‌ ಓಶಾ, ಸ್ಟೀಫನ್‌ ಎಕರ್ಟ್‌, ಆಸ್ಟಿನ್‌ ಮತ್ತಿತರ ಕ್ಷೇತ್ರಗಳ ತಜ್ಞರುಗಳನ್ನು ಒಳಗೊಂಡ ಸಲಹಾ ಮಂಡಳಿಯನ್ನು ರಚಿಸಲಾಗಿದೆ.

ಆರೋಗ್ಯ ಕ್ಷೇತ್ರಕ್ಕೆ ವಿಪುಲ ಅವಕಾಶ
ದೇಶದಲ್ಲಿ ಸುಮಾರು 5-7 ಕೋಟಿ ಆರೋಗ್ಯ ಕಾರ್ಯಕರ್ತರ ಕೊರತೆ ಇದೆ. ರೋಗಿಗಳನ್ನು ನೋಡಿಕೊಳ್ಳುವುದು ದಾದಿಯರು ಹಾಗೂ ಇತರ ಸಿಬಂದಿಯೇ ಹೊರತು ವೈದ್ಯರಲ್ಲ. ಇದೀಗ ದೇಶದಲ್ಲಿ ಅರೆ ವೈದ್ಯಕೀಯ ವಿಶ್ವವಿದ್ಯಾನಿಲಯವು ತುರ್ತು ಅಗತ್ಯವಿದೆ. ಈ ನಾಲೆಡ್ಜ್ ಸಿಟಿಯಲ್ಲಿ ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಯೋಜನೆಯ ಸಲಹಾ ಮಂಡಳಿ ಸದಸ್ಯರೂ ಆಗಿರುವ ನಾರಾಯಣ ಹೆಲ್ತ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next