Advertisement

Savadatthi: ಯಲ್ಲಮ್ಮ ದೇವಿ ಭಕ್ತರಿಗೆ ದಾಸೋಹ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಿ: ಸಿಎಂ

08:28 PM Oct 13, 2024 | Team Udayavani |

ಬೆಳಗಾವಿ: ಶ್ರೀರೇಣುಕಾ ಯಲ್ಲಮ್ಮ ದೇವಿ ಸನ್ನಿಧಿಗೆ ಪ್ರತೀ ವರ್ಷ 1.5 ಯಿಂದ 2 ಕೋಟಿ ಭಕ್ತರು ಬರುವುದರಿಂದ ಆರೋಗ್ಯಕರ ದಾಸೋಹ ವ್ಯವಸ್ಥೆ ಮತ್ತು ವೈಜ್ಞಾನಿಕ ಪದ್ಧತಿಯ ಕಸ ವಿಲೇವಾರಿ ವ್ಯವಸ್ಥೆ ರೂಪಿಸಬೇಕು. ಹಾಗೆಯೇ ಬರುವ ಭಕ್ತರಿಗೆ ತಾಯಿಯ ದರ್ಶನ ಕಡ್ಡಾಯ ಸಿಗುವ ವ್ಯವಸ್ಥೆಯ ಪ್ರಥಮ ಆದ್ಯತೆಯಲ್ಲಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

Advertisement

ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ರವಿವಾರ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಯಲ್ಲಿ  ಭಾಗಿಯಾಗಿ ಮಾತನಾಡಿ ಭಕ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ದೇವಿಯ ದರ್ಶನದ ಖಾತ್ರಿಯಾದರೆ, ಪ್ರವಾಸಿಗರ ಪ್ರಮಾಣ ಇನ್ನೂ ಹೆಚ್ಚಾಗಲಿದೆ.

ಕ್ಷೇತ್ರಕ್ಕೆ ಬರುವ ಭಕ್ತರ ಆರೋಗ್ಯಕ್ಕೆ ಪೂರಕ ವ್ಯವಸ್ಥೆಗಳ ಕಲ್ಪಿಸಬೇಕು. ಕ್ಷೇತ್ರಕ್ಕೆ ಬಡವರು, ಶ್ರಮಿಕರು, ತಳ ಸಮುದಾಯದವರು, ಮಹಿಳೆಯರು ಮತ್ತು ದುಡಿಯುವ ವರ್ಗದವರೇ ಹೆಚ್ಚಾಗಿ ಬರುತ್ತಾರೆ ಆದ್ದರಿಂದ ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಉಳಿಯಲು ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಬೇಕು. ತಿರುಪತಿ, ಧರ್ಮಸ್ಥಳ ಮಾದರಿಯಲ್ಲಿ ವ್ಯವಸ್ಥೆಗಳ ಕಲ್ಪಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಸೂಚಿಸಿದ ಇತರ ಸಲಹೆಗಳು: 

1.  ಕ್ಷೇತ್ರದಲ್ಲಿ ಸೌಕರ್ಯಗಳು ಅಚ್ಚುಕಟ್ಟಾಗಿದ್ದರೆ, ಆದಾಯವೂ ಹೆಚ್ಚಾಗುತ್ತದೆ. ಈ ಆದಾಯದಿಂದ ಭಕ್ತರಿಗೆ ಇನ್ನೂ ಹೆಚ್ಚಿನ ಮೂಲಭೂತ ಸವಲತ್ತು ಒದಗಿಸಬಹುದು. ಒಟ್ಟಾರೆ ಕ್ಷೇತ್ರ ಆಕರ್ಷಣೀಯವಾಗಿರಬೇಕು.

Advertisement

2. ಎತ್ತಿನಗಾಡಿಯಲ್ಲಿ ಅತಿ ಹೆಚ್ಚು ಪ್ರಮಾಣದ ಭಕ್ತರು ಆಗಮಿಸುವುದರಿಂದ ಕಾರು, ಬೈಕುಗಳ ಜೊತೆಗೆ ಎತ್ತಿನಗಾಡಿ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು. ಎತ್ತು, ಹಸುಗಳಿಗೆ ಉತ್ತಮ ಮೇವು ನೀರು-ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಪೂರಕವಾಗಿ ಕಾರ್ಯಯೋಜನೆ ರೂಪಿಸಬೇಕು.

3. ಕ್ಷೇತ್ರಕ್ಕೆ ಸೇರಿದ ಜಾಗ, ಜಮೀನನ್ನು ಮೊದಲು ಗುರುತಿಸಿ, ಒತ್ತುವರಿ ಆಗಿದ್ದರೆ ಬಿಡಿಸಿಕೊಳ್ಳಬೇಕು. ಸ್ಥಳದ ಸುತ್ತ ಕಾಂಪೌಂಡ್, ಫೆನ್ಸಿಂಗ್ ಹಾಕಿ ಜಾಗದ ಭದ್ರತೆ ಮಾಡಿಕೊಳ್ಳಬೇಕು.

4.  ಭಕ್ತರು ಬರುವ ದೇವಸ್ಥಾನದ ಮಾರ್ಗ ಮತ್ತು ಸುತ್ತಲ ಪ್ರದೇಶಗಳಲ್ಲಿ ಹಾಗೂ ಭಕ್ತರು ಉಳಿಯುವ ಜಾಗದಲ್ಲಿ ಬೀದಿ ದೀಪ, ವಿದ್ಯುತ್ ಸೌಲಭ್ಯ ಒದಗಿಸಬೇಕು.

5. ರೋಪ್ ವೇ ಸವಲತ್ತು ಕಲ್ಪಿಸುವುದರಿಂದ ಅನುಕೂಲ ಆಗುತ್ತದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು.

ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಪ್ರವಾಸೋದ್ಯಮ ಸಚಿವ ಎಚ್‌.ಕೆ ಪಾಟೀಲ್‌, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಕ್ಷೇತ್ರದ ಶಾಸಕ ವಿಶ್ವಾಸ್ ವೈದ್ಯ ಮತ್ತು ಜಿಲ್ಲೆಯ ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಜೆಪಿಯ ಮೊದಲು ದೂರವಿಡಿ: ಸಿದ್ದರಾಮಯ್ಯ ಟೀಕೆ 
ಶಕ್ತಿ ಯೋಜನೆಯಿಂದ ಇದುವರೆಗೂ ರಾಜ್ಯದಲ್ಲಿ 300 ಕೋಟಿ ಮಹಿಳೆಯರು ಉಚಿತವಾಗಿ ಸಂಚರಿಸಿದ್ದಾರೆ. ಇವರಲ್ಲಿ ಲಕ್ಷಾಂತರ ಮಂದಿ ತಾಯಿ ರೇಣುಕಾ ಯಲ್ಲಮ್ಮನ ದರ್ಶನ ಕೂಡ ಪಡೆದಿದ್ದಾರೆ. ದೇವರು, ಧರ್ಮ ತಮಗೆ ಮಾತ್ರ ಸೇರಿದ್ದು ಎಂದು ಬಿಜೆಪಿಯವರು ಭಯಂಕರ ಮಾತನಾಡ್ತಾರಲ್ಲಾ, ಆದರೆ ಇದುವರೆಗೂ ದೇವಿಯ ಭಕ್ತರಿಗೆ ನಾವು ಮಾಡಿದಂಥಾ ಕಾರ್ಯಕ್ರಮಗಳ ಬಿಜೆಪಿಯವರು ಏಕೆ ಮಾಡಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ  ದೇವರು, ಧರ್ಮದ ಹೆಸರಲ್ಲಿ ದೇಶ, ರಾಜ್ಯ ವಿಭಜಿಸುವ ಬಿಜೆಪಿಯ ಮೊದಲು ದೂರ ಇಡಿ. ಇಲ್ಲದಿದ್ದರೆ ನಮ್ಮ ನಾಡೂ ಉಳಿಯಲ್ಲ, ದೇಶವೂ ಉಳಿಯಲ್ಲ. ತಾಯಿ ಯಲ್ಲಮ್ಮ ಶಕ್ತಿ ದೇವತೆ. ಯಾವ ದೇವರೂ ಕೂಡ ಮನುಷ್ಯರನ್ನು ಧರ್ಮದ ಕಾರಣಕ್ಕೆ ದ್ವೇಷಿಸಿ ಎಂದು ಹೇಳುವುದಿಲ್ಲ. ದೇವರ ಹೆಸರಲ್ಲಿ ದ್ವೇಷ ಮಾಡಿ ಎಂದು ಹೇಳುವುದು ಬಿಜೆಪಿ ಮಾತ್ರ. ತಾಯಿ ರೇಣುಕಾ ಯಲ್ಲಮ್ಮ ಯಾವ ಮನುಷ್ಯರನ್ನು ದ್ವೇಷಿಸಿ ಎಂದು ಹೇಳುವುದಿಲ್ಲ ತಾನೆ? ಗೃಹಲಕ್ಷ್ಮಿ ಯೋಜನೆ ಜಾರಿಯಾದರೆ ಅತ್ತೆ ಸೊಸೆ ಜಗಳ ಆಗ್ತದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆದರು. ಆದರೆ ಗೃಹಲಕ್ಷ್ಮಿ ಹಣ ಕೂಡಿಸಿಟ್ಟು ಅತ್ತೆಯರು, ಸೊಸೆಯರಿಗೆ ಬಳೆ ಅಂಗಡಿ ಹಾಕಿಕೊಟ್ಟಿದ್ದಾರೆ, ಟೈಲರಿಂಗ್ ಮೆಷಿನ್ ಕೊಡಿಸಿದ್ದಾರೆ. ಇಂಥವು ನೂರಾರು ಉದಾಹರಣೆಗಳಿವೆ ಎಂದು ಸರಕಾರದ ಗ್ಯಾರಂಟಿ ಯೋಜನೆಗಳ  ಸಮರ್ಥಿಸಿಕೊಂಡರು.

ತಾಯಿ ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ನಾವು ಸಿದ್ಧ. ನಿಮ್ಮ ಸಹಕಾರ ಅಗತ್ಯ, ಕ್ಷೇತ್ರದಲ್ಲಿ ಅನಧಿಕೃತವಾಗಿ ಮಳಿಗೆಗಳ ಹಾಕಬೇಡಿ. ಅನಧಿಕೃತವಾಗಿ ಇರುವವರಿಗೆ ಬೇರೆ ವ್ಯವಸ್ಥೆ ಮಾಡೋಣ. ಆದರೆ ಅಕ್ರಮವಾಗಿ ಯಾರೂ ಮಳಿಗೆ ಹಾಕದೆ ಸಹಕರಿಸಿ. ಮುಂದಿನ ವರ್ಷದ ವೇಳೆಗೆ 6 ಸಾವಿರ ಭಕ್ತರು ಉಳಿಯಲು ರೇಣುಕಾ ಯಲ್ಲಮ್ಮ ಸನ್ನಿಧಿಯಲ್ಲಿ ವ್ಯವಸ್ಥೆ ರೂಪಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next