Advertisement

ಅಧಿಕ ಇಳುವರಿ ಮಾವಿನ ತಳಿಗಳ ಅರಿವು ಮೂಡಿಸಿ

03:13 PM Sep 03, 2017 | Team Udayavani |

ಹಾಸನ: ಮಾವು ಕೂಡ ಒಂದು ಜನಪ್ರಿಯ ತೋಟಗಾರಿಕಾ ಬೆಳೆಯಾಗಿದ್ದು ಅಧಿಕ ಇಳುವರಿ ನೀಡುವ ಮತ್ತು ಹೆಚ್ಚು ಬೇಡಿಕೆ ಇರುವ ತಳಿಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಸಕಲೇಶಪುರ- ಆಲೂರು ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

Advertisement

ಆಲೂರಿನ ಇಸ್ಲಾಮಿಯಾ ಅರೇಬಿಕ್‌ ಕಾಲೇಜು ಸಭಾಂಗಣದಲ್ಲಿ ತೋಟಗಾರಿಕಾ ಇಲಾಖೆ, ಜಿಪಂ,
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಹಾಸನ ಜಿಲ್ಲಾ ಮಾವು ಬೆಳೆಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾವಿನಲ್ಲಿ ಸವರುವಿಕೆ ಪುನಶ್ಚೇತನ ಮತ್ತು ಮಾರುಕಟ್ಟೆ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್‌.ಗೋಪಾಲಕೃಷ್ಣ ಮಾತನಾಡಿ, ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳು, ತಾಲೂಕು, ರಾಜ್ಯದ ಒಟ್ಟಾರೆ ಮಾವು ಉತ್ಪನ್ನ ಮತ್ತು ಮಾರುಕಟ್ಟೆ ಬಗ್ಗೆ ರೈತರಿಗೆ ಅರಿವು ಮೂಡಿಸಿದರು ಹಾಗೂ
ಕಳೆದ ಒಂದು ವರ್ಷದಲ್ಲಿ ನಡೆದ ವಿವಿಧ ಜಿಲ್ಲೆಗಳ ಮಾವು ಮೇಳಗಳ ಬಗ್ಗೆ ಮತ್ತು ಹಾಸನದಲ್ಲಿ ನಡೆದ ಮಾವು ಮೇಳದ ಬಗ್ಗೆಯೂ ಮಾಹಿತಿ ನೀಡಿದರು.

ಮಾವು ಮಾಗಿಸುವಲ್ಲಿ ಕಾರ್ಬೈಡ್‌ ಬಳಕೆ ಹಾನಿಕಾರಕ ಮತ್ತು ಇಥೀಲಿನ್‌ ಬಳಸುವಂತೆ ರೈತರಿಗೆ ಸಲಹೆ ನೀಡಿ, 2011ರಲ್ಲಿ ಸ್ಥಾಪಿತವಾದ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದಲ್ಲಿ ರೈತರಿಗೆ ದೊರೆಯುವ ವಿವಿಧ ರೀತಿಯ ಸೌಲಭ್ಯಗಳು, ತರಬೇತಿ ಕೇಂದ್ರಗಳ ಬಗ್ಗೆ ಅರಿವು ಮೂಡಿಸಿದರು.
ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್‌. ಪಿ. ಮೋಹನ್‌ ಮಾತನಾಡಿ, ಮಾವಿನಲ್ಲಿ ಹಣ್ಣಿನ ನೊಣದ ಹತೋಟಿಗೆ ಬಳಸಲಾಗುವ ಮೋಹಕ ಬಲೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಿರುವ ಮ್ಯಾಂಗೋ ಸ್ಪೆಷಲ್‌ ಬಳಕೆಯಿಂದ ಹಣ್ಣಿನಲ್ಲಿ ಹೆಚ್ಚು ಬಣ್ಣ ಬರುತ್ತದೆ ಎಂದು ಮಾಹಿತಿ ನೀಡಿದರು.

ಡಾ.ಹಿತ್ತಲಮನಿ ತೋಟಗಾರಿಕಾ ಪಿತಾಮಹರಾದ ಡಾ.ಎಂ.ಎಚ್‌.ಮರಿಗೌಡರ ಸಾಧನೆಗಳ ಬಗ್ಗೆ ಹಾಗೂ ವಿವಿಧ ರೀತಿಯ ಹೊಸ ಪ್ರಭೇದಗಳ ಬಗ್ಗೆ ವಿಷಯ ಮಂಡಿಸಿದರು. ಜಿಪಂ ಸಿಇಒ ಕೆ.ಎಂ. ಜಾನಕಿ ಮಾತನಾಡಿ, ಮಾವು ಬೆಳೆಯಲ್ಲಿ ಅಂತರ್‌ ಬೆಳೆಯಾಗಿ ತರಕಾರಿ ಬೆಳೆಗಳನ್ನು ಬೆಳೆದು ಆದಾಯ ಗಳಿಸಬೇಕೆಂದು ಸಲಹೆ ನೀಡಿದರು. ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕ ಅಭಿವೃದ್ಧಿ ಹೊಂದುವಂತೆ ಹೇಳಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎ.ಬಿ.ಸಂಜಯ್‌ ಇತರರು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next