Advertisement

ಕೊರೋನಾ ವೈರಸ್‌ ಬಗ್ಗೆ ಅರಿವು ಮೂಡಿಸಿ

09:13 PM Feb 11, 2020 | Lakshmi GovindaRaj |

ತುಮಕೂರು: ಮಾರಣಾಂತಿಕ ಕೊರೊನಾ ವೈರಸ್‌ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಶಾಲಾ-ಕಾಲೇಜು ಮಕ್ಕಳು ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಲು ಜಾಗೃತಿ ಮೂಡಿಸಬೇಕು ಎಂದು ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೊನಾ ವೈರಸ್‌ ಜಿಲ್ಲೆಯಲ್ಲಿ ಕಂಡು ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಡಿಎಚ್‌ಒ ಡಾ.ಆರ್‌.ಚಂದ್ರಿಕಾ ಅವರನ್ನು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಡಿಎಚ್‌ ಡಾ.ಆರ್‌ ಚಂದ್ರಿಕಾ, ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಕಂಡುಬಂದಿಲ್ಲ. ಚೀನಾದಲ್ಲಿ ಓದಲು ಹೋಗಿದ್ದ, ವಿದ್ಯಾರ್ಥಿಗಳು ವಾಪಾಸ್ಸಾಗಿದ್ದಾರೆ. ಅವರನ್ನು ತಪಾಸಣೆಗೆ ಒಳಪಡಿಸಿದಾಗ ನೆಗೆಟಿವ್‌ ಬಂದಿದೆ. ಜಿಲ್ಲೆಯಲ್ಲಿ ವೈರಸ್‌ ಪ್ರಕರಣ ಕಂಡು ಬಂದಿಲ್ಲ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ತೆರೆದು, ಸಿಬ್ಬಂದಿ ನೇಮಿಸಲಾಗಿದೆ ಎಂದ‌ು ತಿಳಿಸಿದರು.

ಜಿಪಂ ಸಿಇಒ ಶುಭಾ ಕಲ್ಯಾಣ್‌ ಮಾತನಾಡಿ, ಕೊರೊನಾ ವೈರಸ್‌ ಬಗ್ಗೆ ಶಾಲಾ-ಕಾಲೇಜು ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳು ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವಂತೆ ತಿಳಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರ ಪಡೆದುಕೊಳ್ಳಿ ಎಂದು ಹೇಳಿದರು.

ಕಾರ್ಯಾಚರಣೆಯಲ್ಲಿ 4 ತಂಡಗಳು: ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ತುಮಕೂರು ತಾಲೂಕಿನ ಬನ್ನಿಕುಪ್ಪೆ ಹಾಗೂ ಕಣಕುಪ್ಪೆ ಗ್ರಾಮದಲ್ಲಿ ಚಿರತೆ ದಾಳಿ ಪ್ರಕರಣದ ಬಗ್ಗೆ ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಮುನಿರಾಜು, ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಬಂದಿರುವ ವಿಶೇಷ ಹುಲಿ ಸಂರಕ್ಷಣಾ ದಳದ 40 ಜನ ಸಿಬ್ಬಂದಿಯನ್ನು 4 ತಂಡಗಳಾಗಿ ರಚಿಸಿ ದೊಡ್ಡಮಳಲವಾಡಿ, ಹೆಬ್ಬೂರು ಬ್ಲಾಕ್‌, ಸಿ.ಎಸ್‌.ಪುರ ಬ್ಲಾಕ್‌ ಮತ್ತು ಮಣಿಕುಪ್ಪೆ ಬ್ಲಾಕ್‌ಗಳಿಗೆ ನಿಯೋಜಿಸಲಾಗಿದೆ.

Advertisement

ಅಲ್ಲದೇ ತುಮಕೂರು, ಗುಬ್ಬಿ ಮತ್ತು ಕುಣಿಗಲ್‌ ವಲಯಗಳಿಗೆ ಸುಮಾರು 40 ಸಿಬ್ಬಂದಿಯನ್ನೊಳಗೊಂಡ 4 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಸಭೆಗೆ ತಿಳಿಸಿದರು. ನಂತರ ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್‌ ಮಾತನಾಡಿ, ಚಿರತೆ ಕಾಣಿಸಿಕೊಂಡಿರುವ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ರಾತ್ರಿ ಸಮಯದಲ್ಲಿ ಓಡಾಡದಂತೆ ತಿಳಿಸಬೇಕು. ಚಿರತೆ ದಾಳಿ ಭಯ ಜನರನ್ನು ಕಾಡುತ್ತಿರುತ್ತದೆ.

ಯಾವುದೇ ತೊಂದರೆಯಾಗದಂತೆ ಕರಪತ್ರಗಳ ಮೂಲಕ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಮಧುಗಿರಿ ತಾಲೂಕು ವೆಂಗಳಮ್ಮನಹಳ್ಳಿ ಗ್ರಾಮದಲ್ಲಿ ಲೋಟಸ್‌ ಪೌಲಿಫಾರಂ ಇದ್ದು, ಇಲ್ಲಿರುವ ಸುಮಾರು 80 ಮಕ್ಕಳು ಶಾಲೆಗೆ ದಾಖಲಾಗದ ಬಗ್ಗೆ ಅಧ್ಯಕ್ಷರು ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಮಧುಗಿರಿ ಡಿಡಿಪಿಐ, ದಾಖಲಾಗದ ಮಕ್ಕಳು ಹೊರ ರಾಜ್ಯದಿಂದ ಬಂದಿದ್ದಾರೆ.

ಇಲ್ಲಿ ಸುಮಾರು 80 ಕುಟುಂಬಗಳು ವಾಸವಾಗಿವೆ. 2 ತಿಂಗಳ ನಂತರ ಬೇರೆಡೆ ವಲಸೆ ಹೋಗುತ್ತಾರೆ. ಅಲ್ಲದೇ ಬಂದಿರುವ ಮಕ್ಕಳು ಹೊರ ರಾಜ್ಯದವರಾಗಿರುವ ಕಾರಣ ಶಾಲೆಗೆ ದಾಖಲು ಮಾಡಲು ಭಾಷೆಯ ಸಮಸ್ಯೆಯಾಗಿದೆ. ಈ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳುವ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಡಿಡಿಪಿಐ ಎಂ.ಆರ್‌.ಕಾಮಾಕ್ಷಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷವಾಗಿ ಟ್ಯೂಷನ್‌ ಮಾಡಲಾಗುತ್ತದೆ. ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೇ ವಸತಿ ನಿಲಯಗಳಲ್ಲಿಯೂ ಕೂಡ ಸಂಜೆ ವೇಳೆ ತರಗತಿ ನಡೆಸಲಾಗುತ್ತಿದೆ. ಸಂಪನ್ಮೂಲ ಶಿಕ್ಷಕರಿಂದ ವಿಶೇಷವಾಗಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಮಕ್ಕಳಿಗೆ ಪರೀಕ್ಷೆ ಅಭ್ಯಾಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಮಾತನಾಡಿ, ತೋಟಗಾರಿಕೆ ಇಲಾಖೆಯಡಿ ಹವಾಮಾನ ಆಧಾರಿತ ಇನ್ಸೂರೆನ್ಸ್‌ ಯೋಜನೆಯಲ್ಲಿ ಒಟ್ಟು 16,550 ಪ್ರಕರಣಗಳ ಪೈಕಿ 8,176 ಪ್ರಕರಣಗಳಿಗೆ ಒಟ್ಟು 1813.94 ಲಕ್ಷ ರೂ.ಗಳು ರೈತರ ಖಾತೆಗಳಿಗೆ ಪಾವತಿಯಾಗಿದ್ದು, ಬಾಕಿಯಿರುವ 7,760 ಪ್ರಕರಣಗಳಿಗೆ 1984.04 ಲಕ್ಷ ರೂ.ಗಳು ರೈತರಿಗೆ ಪಾವತಿಯಾಗಬೇಕು.

ಈ ಪ್ರಕರಣಗಳಿಗೆ ಬೆಳೆ ಸಮೀಕ್ಷೆಗೂ ಹಾಗೂ ನೋಂದಣಿ ಸಮಯದಲ್ಲಿ ರೈತರು ನೀಡಿರುವ ಸ್ವಯಂ ದೃಢೀಕರಣ ಪತ್ರದಲ್ಲಿ ನಮೂದಿಸಿರುವ ಬೆಳೆಗೂ ಹೊಂದಾಣಿಕೆಯಾಗದ ಕಾರಣ ರೈತರಿಗೆ ಹಣ ಪಾವತಿಯಾಗಿರುವುದಿಲ್ಲ. ಬೆಳೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಪೂರ್ಣಗೊಂಡ ನಂತರ ಇನ್ಯೂರನ್ಸ್‌ ಕಂಪನಿಯಿಂದ ಹಣ ರೈತರಿಗೆ ಪಾವತಿಯಾಗುತ್ತದೆ ಎಂದು ಮಾಹಿತಿ ನೀಡಿದರು. ಜಿಪಂ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ನವ್ಯಾ ಬಾಬು, ಅಕ್ಕಮಹಾದೇವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕೊರೊನಾ ವೈರಸ್‌ ಮಾಹಿತಿ ನೀಡಿ: ಕೊರೊನಾ ವೈರಸ್‌ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ತರಬೇತಿ ನೀಡಿ, ಮನೆ-ಮನೆಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಕ್ರಮವಹಿಸಬೇಕು. ಮತ್ತು ಶಾಲಾ ಮಕ್ಕಳಿಗೆ ಕೈ-ಕಾಲು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಬೇಕು ಎಂದು ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ಕೆಟ್ಟಿರುವ ನೀರಿನ ಘಟಕ ಶೀಘ್ರ ದುರಸ್ತಿಗೊಳಿಸಿ: ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್‌ ಮಾತನಾಡಿ, ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ. ದುರಸ್ತಿ ಹಂತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಮರುಜೀವ ನೀಡಬೇಕು.

ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ ಕೆಆರ್‌ಐಡಿಎಲ್‌ ಸಂಸ್ಥೆ 54 ಘಟಕಗಳನ್ನೊಳಗೊಂಡಿದೆ. ತುರುವೇಕೆರೆ ತಾಲೂಕಿನ 24, ಕೊರಟಗೆರೆ 4, ತಿಪಟೂರು ತಾಲೂಕಿನ 4 ಘಟಕಗಳನ್ನು ಗ್ರಾಪಂ ಹಸ್ತಾಂತರಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಹೊಸದಾಗಿ ಟೆಂಡರ್‌ ಕರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ನಂತರ ಜಿಪಂ ಸಿಇಒ ಮಾತನಾಡಿ, ಗ್ರಾಪಂ ವ್ಯಾಪ್ತಿಗೆ ಬರುವ ಆರ್‌ಒ ಪ್ಲಾಂಟ್‌ಗಳನ್ನು ಪಂಚಾಯಿತಿ ಅನುದಾನದಡಿ ದುರಸ್ತಿ ಪಡಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಪಂ ಪ್ರಗತಿ ಪರಿಶೀಲನೆ ಸಭೆಗೆ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು. ಈ ಸಭೆಗೆ ಗೈರಾದ ಅಧಿಕಾರಿಗಳಿಗೆ ತಕ್ಷಣ ನೋಟೀಸ್‌ ನೀಡಿ, ಬೇಸಿಗೆ ಸಮೀಪಿಸುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆಯಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.
-ಲತಾ ರವಿಕುಮಾರ್‌, ಜಿಪಂ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next