Advertisement
ಕುಡಿಯುವ ನೀರು ಮತ್ತು ಮೇವು ಸಂಗ್ರಹಣೆ ಬಗ್ಗೆ ಪರಾಮರ್ಶೆ ನಡೆಸಿದ ಉಸ್ತುವಾರಿ ಸಚಿವರು, ಬೇಸಿಗೆ ಸನ್ನಿಹಿತವಾಗುತ್ತಿರುವುದರಿಂದ ಕುಡಿಯುವ ನೀರಿನ ಪೂರೈಕೆ ಸಮರ್ಪಕ ರೀತಿಯಲ್ಲಿ ಆಗಬೇಕು. ಹೀಗಾಗಿ ಜಿಲ್ಲಾದ್ಯಂತ 3 ತಿಂಗಳ ಅವಧಿಗೆ ನೀರಿನ ಅಗತ್ಯತೆ ಬಗ್ಗೆ ಮಾಹಿತಿ ಕಲೆಹಾಕಿ, ಅದಕ್ಕೆ ತಕ್ಕಂತೆ ಪೂರೈಸಬೇಕು. ಜತೆಗೆ ಜಾನುವಾರುಗಳ ಮೇವಿನ ದಾಸ್ತಾನು ಬಗ್ಗೆಯೂ ಪರಿಶೀಲನೆ ನಡೆಸಿ, ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದರು.
Related Articles
Advertisement
ನಿಖರ ವರದಿ ಸಿದ್ಧಪಡಿಸಿ: ಜಿಲ್ಲೆಯಲ್ಲಿರುವ ಎಲ್ಲಾ ವಸತಿನಿಲಯಗಳು, ಸಾಮರ್ಥ್ಯ ಹಾಗೂ ಅಗತ್ಯತೆ ಬಗ್ಗೆ ಪರಿಶೀಲಿಸಿ, ನಿಖರ ವರದಿ ಸಿದ್ಧಪಡಿಸಿ ಸಲ್ಲಿಸಬೇಕು. ಅಲ್ಲದೆ, ಜಿಲ್ಲೆಯಲ್ಲಿ ವಯಸ್ಕರ ಶಿಕ್ಷಣ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿ, ಸ್ವಯಂ-ಸೇವಾ ಸಂಸ್ಥೆಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಂಡು, ಯಾವ ವ್ಯಕ್ತಿಯೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಜಿಲ್ಲೆಗಿರುವ ಹಿಂದುಳಿದ ಎಂಬ ಟ್ಯಾಗ್ ತೆಗೆದು ಹಾಕುವಲ್ಲಿ ಕೈಜೋಡಿಸಿ, ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಕೆಲಸಗಳು ಸಮರ್ಪಕವಾಗಿರಲಿ: ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸಗಳು ಸಮರ್ಪಕವಾಗಿ ಆಗಬೇಕು. ಅರೋಗ್ಯ ಇಲಾಖೆಯ ಆಯುಷ್ಮಾನ್ ಕಾರ್ಡ್‌ಗಳಿಂದ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ, ಬೆಳೆ ವಿಮೆ ತಲುಪದ ರೈತರಿಗೆ ಶೀಘ್ರಗತಿಯಲ್ಲಿ ತಲುಪಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದರು.
ಬೆಳೆ ವಿಮೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಮಾತನಾಡಿ, ಬೆಳೆ ವಿಮೆ ಸಂಬಂಧ ಪ್ರತಿನಿತ್ಯದ ಪ್ರಕ್ರಿಯೆಯನ್ನು ಪರಿಶೀಲಿಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರದ ರಜಾ ದಿನವು ಸಹ ಸಿಬ್ಬಂದಿ ಕಾರ್ಯನಿರ್ವಹಿಸಿ ಬೆಳೆ ವಿಮೆ ಕುರಿತ ಕೆಲಸವನ್ನು ಕೈಗೊಂಡಿದ್ದಾರೆ. ಬೆಳೆ ವಿಮೆ ಕುರಿತ ಕಾರ್ಯನಿರ್ವಹಣೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದರು.
ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶಾಸಕ ಎನ್. ಮಹೇಶ್ ಮಾತನಾಡಿಮ ಉಮ್ಮತ್ತೂರು ಕೆರೆಗೆ ನೀರು ತುಂಬಿಸುವ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು. ಸುಮಾರು 1.5 ಕಿ.ಮೀ. ಪೈಪ್ ಲೈನ್ ಅಳವಡಿಕೆಗೆ ಇರುವ ಅಡಚಣೆಗೆ ಪರಿಹಾರ ಕಂಡುಕೊಂಡು ಕಾಲಮಿತಿಯೊಳಗೆ ಕೆರೆಗೆ ನೀರು ತುಂಬಿಸುವ ಕಾರ್ಯವನ್ನು ನೆರವೇರಿಸುವಂತೆ ತಿಳಿಸಿದರು.
ಬೇಡಿಕೆಗೆ ತಕ್ಕಂತೆ ಪರಿಕರ ನೀಡಿ: ಶಾಸಕ ಆರ್. ನರೇಂದ್ರ ಮಾತನಾಡಿ, ಕುಡಿಯುವ ನೀರು, ಮೇವು ದಾಸ್ತಾನಿಗೆ ವಿಶೇಷ ಗಮನ ನೀಡಬೇಕು. ಕೃಷಿ ಇಲಾಖೆಯಿಂದ ಬೇಡಿಕೆಗೆ ತಕ್ಕಂತೆ ರೈತರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಬೇಕು. ಹನೂರಿನಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಅಪೂರ್ಣಗೊಂಡಿರುವ ಸಮುದಾಯ ಭವನಗಳ ನಿರ್ಮಾಣ, ಬಿಳಿಗಿರಿರಂಗನ ದೇವಸ್ಥಾನದ ಕಾಮಗಾರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಉಸ್ತುವಾರಿ ಸಚಿವರು ಪರಿಶೀಲಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್.ಮಹೇಶ್, ಜಿ.ಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗತಮಣಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ ಮತ್ತಿತರರು ಹಾಜರಿದ್ದರು.
ಸಭೆಯಲ್ಲಿ ಮೊಬೈಲ್ ವೀಕ್ಷಣೆ ಬೇಡ: ಸಭೆಗಳಲ್ಲಿ ಕೆಲ ಅಧಿಕಾರಿಗಳು ಮೊಬೈಲ್ ವೀಕ್ಷಣೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಿವೆ. ಮಂಗಳವಾರ ನಡೆದ ಸಭೆಯಲ್ಲೂ ಸಹ ಕೆಲ ಅಧಿಕಾರಿಗಳು ಮೊಬೈಲ್ ವೀಕ್ಷಿಸುತ್ತಿರುವುದು ಗಮನಕ್ಕೆ ಬಂದಿದೆ. ಸಭೆಯ ಗಂಭೀರತೆಯನ್ನು ಅಧಿಕಾರಿಗಳು ಅರಿಯಬೇಕು. ಮೊಬೈಲ್ ವೀಕ್ಷಣೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.