ಬಳ್ಳಾರಿ: ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಬ್ಯಾಂಕ್‌ನಿಂದ ಪಡೆದ ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಮಿತಾ ಪ್ರಸಾದ್ ಹೇಳಿದರು.
ಜಿಲ್ಲೆಯಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಬೆಂಬಲ ಮತ್ತು ಉತ್ತೇಜನ ನೀಡಲು ಭಾರತ ಸರ್ಕಾರದ ಜವಳಿ ಸಚಿವಾಲಯದಡಿ 100 ದಿನಗಳ ಕಾಲ ಆಯೋಜಿಸಿದ್ದ ಕಾರ್ಯಾಗಾರ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಾಧನೆಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೊದಲು ಸಣ್ಣ, ಅತಿಸಣ್ಣ, ಮಧ್ಯಮ ಉದ್ಯಮಿಗಳು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಕಷ್ಟು ದಾಖಲೆ, ಮಾಹಿತಿ ಬೇಕಾಗುತ್ತಿತ್ತು. ಇದು ಸಾಮಾನ್ಯ ಜನರಿಗೆ ಸಾಧ್ಯವೂ ಆಗುತ್ತಿರಲಿಲ್ಲ. ಕಾರ್ಯಾಗಾರದ ನಿಮಿತ್ತ ನಾನು ಬಳ್ಳಾರಿ ತಾಲೂಕುಗಳಲ್ಲಿ ಕ್ಯಾಂಪ್ ಸಭೆಗಳ ವೇಳೆ ಸ್ಥಳೀಯ ಜನರು ಮೊದಲು ಇದನ್ನೇ ಹೇಳುತ್ತಿದ್ದರು. ಹಾಗಾಗಿ ಬ್ಯಾಂಕ್‌ನಿಂದ ಸಾಲ ಪಡೆಯಲು ಅತ್ಯಂತ ಸರಳೀಕರಣಗೊಳಿಸಲಾಗಿದೆ. ಪ್ರತಿಯೊಬ್ಬರೂ ಜಿಎಸ್‌ಟಿ ಅಡಿ ನೋಂದಾಯಿಸಿಕೊಳ್ಳಬೇಕು. ಆದಾಯ ತೆರಿಗೆ ಪಾವತಿ ಸೇರಿ ಇನ್ನೊಂದೆರಡು ದಾಖಲೆಗಳು ಇದ್ದರೆ ಸಾಕು. ಆದರೆ, ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ನಿರ್ದಿಷ್ಟ ಉದ್ಯಮಗಳಿಗಾಗಿ ಬಳಸಿಕೊಳ್ಳಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾತ್ ಮನೋಹರ್ ಮಾತನಾಡಿ, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿರುವ ಎಂಎಸ್‌ಎಂಇ ಕಾರ್ಯಕ್ರಮ ಬಳ್ಳಾರಿ ಜಿಲ್ಲೆಯಲ್ಲೇ ಅತ್ಯಂತ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳ ಸಂಘಟನಾತ್ಮಕ ಕಾರ್ಯ. ಕಳೆದ 75 ತಿಂಗಳಲ್ಲಿ 66 ಕ್ಯಾಂಪ್‌ಗ್ಳನ್ನು ಮಾಡಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆಯಾಗಿದೆ. ಎಲ್ಲರೂ ಒಂದೇ ಕ್ಯಾಂಪ್‌ಗೆ ಹೋದರೆ ಕೆಲಸಗಳು ಆಗಲ್ಲವೆಂದು ಇರುವ ಅಧಿಕಾರಿಗಳನ್ನು ವಿಕೇಂದ್ರೀಕರಣಗೊಳಿಸಿ, ಒಬ್ಬೊಬ್ಬ ಅಧಿಕಾರಿ ಒಂದೊಂದು ಕ್ಯಾಂಪ್‌ಗೆ ಕಳುಹಿಸಿ ಸಭೆಗಳನ್ನು ಯಶಸ್ವಿಗೊಳಿಸಲಾಯಿತು. ಇದರಿಂದ 698 ಕೋಟಿ ರೂ. ಯೋಜನೆಗಳು ಜಿಲ್ಲೆಗೆ ಮಂಜೂರಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಸೇರಿ ನೈಸರ್ಗಿಕ ಸಂಪತ್ತು ಅತ್ಯಂತ ಹೇರಳವಾಗಿದೆ. ಹಾಗಂತ ಹೆಚ್ಚಾಗಿ ಅದನ್ನೇ ಬಳಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಈಗಾಗಲೇ ಅದನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳಲಾಗಿದೆ. ಪ್ರಸ್ತುತ ದಿನಗಳಲ್ಲಿ ಟೆಕ್ಸ್‌ಟೈಲ್ಸ್, ಆಹಾರೋದ್ಯಮ, ಪ್ರವಾಸೋದ್ಯಮ ಸೇರಿ ಇನ್ನಿತರೆ ಉದ್ಯಮಗಳನ್ನು ಅಭಿವೃದ್ಧಿ ಪಡಿಸಿದರೆ ಆರ್ಥಿಕ, ಔದ್ಯೋಗಿಕವಾಗಿ ಅಭಿವೃದ್ಧಿಯಾಗಬಹುದು. ಸಣ್ಣ, ಮಧ್ಯಮ ಉದ್ಯಮಿಗಳು ಪ್ರತಿಯೊಬ್ಬರೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆಯತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 100 ದಿನಗಳ ಕಾಲ ಜವಳಿ ಇಲಾಖೆ ಸೇರಿದಂತೆ ಡಿಜಿಎಫ್‌ಟಿ, ಜಿಎಸ್‌ಟಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಿಂಡ್ ಗ್ರಾಮೀಣ ಕಾರ್ಮಿಕ ತರಬೇತಿ ಕೇಂದ್ರ, ಕಾರ್ಮಿಕ ಭವಿಷ್ಯ ನಿಧಿ, ರಾಜ್ಯ ಕಾರ್ಮಿಕ ವಿಮಾ ಸಂಸ್ಥೆ ಸೇರಿದಂತೆ ಮುಂತಾದ ಇಲಾಖೆಗಳು ಭಾಗವಹಿಸಿದ್ದವು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥಗೌಡ ಎಂಎಸ್‌ಎಂಇ ನೂರು ದಿನದ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಜವಳಿ ಸಚಿವಾಲಯದ ಪುಸ್ತಕ ಬಿಡುಗಡೆ ಮಾಡಿದರು. ತರಬೇತಿ ಪಡೆದವರಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ಹಾಗೂ ಸಾಲ ಮಂಜೂರಾದವರಿಗೆ ಸಾಲ ಬಿಡುಗಡೆ ಪತ್ರ ವಿತರಿಸಿದರು.
ಯೋಜನೆ ಜಿಲ್ಲಾ ನೋಡಲ್ ಅಧಿಕಾರಿ ವರಪ್ರಸಾದ್ ವರ್ಮ, ಬೆಂಗಳೂರಿನ ಜವಳಿ ಇಲಾಖೆಯ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಗೌರವ್ ಗುಪ್ತಾ, ಸಹಾಯಕ ನಿರ್ದೇಶಕ ಸತೀಶ್‌ಕುಮಾರ್, ಸಿಂಡಿಕೇಟ್ ಬ್ಯಾಂಕಿನ ಎಲ್‌ಡಿಎಂ ಗೋಲಾಕೃಷ್ಣ, ಯು.ಎಸ್.ಮಜುಂದಾರ್, ತಾಪ್ವಿಲಾಲ್ ಜೈನ್, ಡಿಜಿಎಫ್‌ಟಿ ಹೇಮಚಂದ್ರ ನಾಯರ್, ವಿಠಲ್ ರಾಜ್ ಇನ್ನಿತರರಿದ್ದರು.