ಆಳಂದ: ಜನರ ಹಿತಕ್ಕಾಗಿ ವಕೀಲ ವೃತ್ತಿ ಮಾಡಿದರೆ ಅದು ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಕಲಬುರಗಿಯ ಹಿರಿಯ ಖ್ಯಾತ ನ್ಯಾಯಾವಾದಿ ಬಾಬುರಾವ ಎಸ್. ಮಂಗಾಣೆ ಹೇಳಿದರು. ಪಟ್ಟಣದ ನ್ಯಾಯಾಲಯ ಕಟ್ಟಡದಲ್ಲಿನ ನ್ಯಾಯವಾದಿಗಳ ಸಭಾಂಗಣದಲ್ಲಿ ನ್ಯಾಯವಾದಿ ಸಂಘ, ಕರ್ನಾಟಕ ರಾಜ್ಯ ವಕೀಲ ಪರಿಷತ್ತು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಕೀಲರ ಕಾ ನೂನು ಕಾರ್ಯಾಗಾರದ ಸಮಾರೋಪಸಮಾರಂಭದ ಅತಿಥಿಗಳಾಗಿ ಅವರು ಮಾತನಾಡಿದರು.
ವಕೀಲರ ಅಭಿವೃದ್ಧಿ ಸಮಾಜದ ಒಳಿತಿಗಾಗಿ ಆಗಬೇಕು. ತನ್ನೊಂದಿಗೆ ಇನ್ನೊಬ್ಬರಿಗೆ ಒಳಿತನ್ನೇ ಬಯಸಬೇಕು. ನ್ಯಾಯವಾದಿಗಳ ಎಂಬ ಸೋಗಿನಲ್ಲಿ ನಕಲಿಗಳು ಹೆಚ್ಚುತ್ತಿದ್ದು, ಇದರಿಂದ ವಕೀಲ ವೃತ್ತಿ ಪಾವಿತ್ರತೆಗೆ ಧಕ್ಕೆಯಾಗುತ್ತದೆ. ನ್ಯಾಯಮೂರ್ತಿಗಳಿಗೆ ಅತ್ಯಂತ ಗೌರವ ಕೊಡುವುದರ ಜತೆಗೆ ಹಿರಿಯರು, ಕಿರಿಯರು ಎಂಬುದು ಮುಖ್ಯವಾಗಿದೆ.
ವೃತ್ತಿಯಲ್ಲಿ ಛಲ ಹೊಂದಿ ಶಿಸ್ತು ಮತ್ತು ಸ್ವಾಭಿಮಾನಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ರಾಜ್ಯ ವಕೀಲರ ಪರಿಷತ್ತ ಸದಸ್ಯ ಕಾಶಿನಾಥ ಮೋತಕಪಲ್ಲಿ ಮಾತನಾಡಿ, ವಕೀಲರು ನಿತ್ಯ ಕಲಿಯುವುದು ಅವಶ್ಯಕವಾಗಿದೆ. ವಕೀಲರಿಗಾಗಿ ಪರಿಷತ್ತಿನಿಂದ ಅನೇಕ ಯೋಜನೆಗಳ ಮತ್ತು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹೈಕೋರ್ಟ್ ನ್ಯಾಯವಾದಿ ಅನುರಾಧ ಎಂ. ದೇಸಾಯಿ, ಕೆ.ಯು. ಇನಾಮದಾರ ಮಾತನಾಡಿದರು. ಹಿರಿಯ ಶ್ರೇಣಿಯ ನ್ಯಾಯಾಧೀಶ ಜಿ.ಆರ್. ಶೆಟ್ಟರ, ಸರ್ಕಾರಿ ವಕೀಲ ಸಾಹೇಬಗೌಡ ಪಾಟೀಲ, ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಎ. ಪಾಟೀಲ, ಕಾರ್ಯದರ್ಶಿ ಬಿ.ಐ. ಶಿರೋಳೆ ಇದ್ದರು. ಬಿ.ಎಸ್. ನಿಂಬರಗಿ ಕಾರ್ಯಕ್ರಮ ನಿರೂಪಿಸಿದರು.
ಜ್ಯೋತಿ ಹಂಚಾಟೆ ಸ್ವಾಗತಿಸಿದರು. ಸ್ವಾಮಿರಾವ ಚನಗುಂಡ ವಂದಿಸಿದರು. ಇದೇ ವೇಳೆ ಸ್ಥಳೀಯ ನ್ಯಾಯವಾದಿ ಸಂಘದ ಗ್ರಂಥಾಲಯಕ್ಕಾಗಿ ಹಿರಿಯ ನ್ಯಾಯವಾದಿ ಬಾಬುರಾವ ಮಂಗಾಣೆ ಅವರು 25 ಸಾವಿರ ರೂ. ದೇಣಿಗೆ ಚೆಕ್‌ನ್ನು ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್ ಪಾಟೀಲ ಅವರಿಗೆ ನೀಡಿದರು.