Advertisement

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

03:14 PM May 10, 2024 | Team Udayavani |

ಸ್ಟಾರ್‌ ಸಿನಿಮಾಗಳ ಸೋಲು-ಗೆಲುವು ಇಡೀ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರುವುದು ಸುಳ್ಳಲ್ಲ. ಅದರಲ್ಲೂ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ಗೆ ಹೊರಟಿರುವ ಸಿನಿಮಾಗಳ ಮೇಲೆ ಚಿತ್ರರಂಗ ಒಂದು ಕಣ್ಣಿಟ್ಟಿರುತ್ತದೆ. ಈ ಹಿಂದೆ ಬಂದ “ಕೆಜಿಎಫ್’, “ಕಾಂತಾರ’ ಸೇರಿದಂತೆ ಕೆಲವು ಚಿತ್ರಗಳು ಸ್ಯಾಂಡಲ್‌ವುಡ್‌ಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ದೊಡ್ಡ ದಾರಿ ತೋರಿಸಿದವು. ಆದರೆ, ಸರಿಯಾದ ತಯಾರಿ ಇಲ್ಲದೇ ಇದೇ ಹಾದಿಯಲ್ಲಿ ಹೋದ ಕೆಲವು ಸಿನಿಮಾಗಳು ಮುಗ್ಗರಿಸಿ ಸ್ಯಾಂಡಲ್‌ವುಡ್‌ಗೆ ಒಂದಷ್ಟು ಹೊಡೆತಕೊಟ್ಟಿದ್ದು ಸುಳ್ಳಲ್ಲ. ಈಗ ಇಡೀ ಚಿತ್ರರಂಗ “ಮಾರ್ಟಿನ್‌’ ಮೇಲೆ ನಿರೀಕ್ಷೆ ಇಟ್ಟಿದೆ. ಚಿತ್ರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಸಾಗುತ್ತಿದೆ. ಕನ್ನಡ ಚಿತ್ರರಂಗದ ಬಿಗ್‌ ಬಜೆಟ್‌ ಸಿನಿಮಾವಾಗಿ ಮೂಡಿಬರುತ್ತಿರುವ “ಮಾರ್ಟಿನ್‌’ ರಿಸಲ್ಟ್ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರುವುದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ “ಮಾರ್ಟಿನ್‌’ ಚಿತ್ರದ ನಿರ್ಮಾಪಕ ಉದಯ್‌ ಮೆಹ್ತಾ ಒಂದಷ್ಟು ಪ್ರಶ್ನೆಗಳಿಗೆ ಉತ್ತರವಾಗಿದ್ದಾರೆ. ಗಾಂಧಿನಗರದ ಊಹಾಪೋಹಾ, ಸಂದೇಹಗಳನ್ನು ಬಗೆಹರಿಸಿದ್ದಾರೆ.

Advertisement

ಮಾರ್ಟಿನ್‌ ರಿಸಲ್ಟ್ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರಲಿದೆ?

ಖಂಡಿತಾ ಪರಿಣಾಮ ಬೀರುತ್ತದೆ, ಅದರಲ್ಲಿ ಎರಡು ಮಾತಿಲ್ಲ. ಆದರೆ, ಮಾರ್ಟಿನ್‌ ನಿಂದ ಕನ್ನಡ ಚಿತ್ರರಂಗ ಮತ್ತೂಮ್ಮೆ ತಲೆಎತ್ತಲಿದೆ ಎಂದು ಧೈರ್ಯವಾಗಿ ಹೇಳುತ್ತೇನೆ. ಆ ತರಹದ ರಿಸಲ್ಟ್ ಮಾರ್ಟಿನ್‌ನಿಂದ ಬರಲಿದೆ. ಇದು ಕೇವಲ ಕನ್ನಡ ಸಿನಿಮಾವಲ್ಲ. ನಾವು ಇಂಡಿಯನ್‌ ಸಿನಿಮಾ ಎಂಬ ಕಾನ್ಸೆಪ್ಟ್ನೊಂದಿಗೆ ಮಾಡಿರುವ ಸಿನಿಮಾ. ಬಹುಶಃ ಈ ತರಹದ ಸಿನಿಮಾವನ್ನು ಮುಂದೆ ನಾನೇ ಮಾಡಲು ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ, ದೇವರು ಈಗ ನನ್ನ ಕೈಯಲ್ಲಿ ಇಂತಹ ಒಂದು ಅದ್ಭುತ ಸಿನಿಮಾ ಮಾಡಿಸಿದ್ದಾನೆ. ನಾನು ಈಗ ಮಾತನಾಡುವ ಬದಲು ಸಿನಿಮಾ ರಿಲೀಸ್‌ ಆದ ನಂತರ ಇಡೀ ದೇಶವೇ ಮಾತನಾಡಲಿದೆ. ಒಂದೊಳ್ಳೆಯ ಪ್ರಾಜೆಕ್ಟ್ ನೀಡಲು ಇಡೀ ತಂಡ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಒಳ್ಳೆಯ ಫ‌ಲ ಸಿಗುತ್ತದೆ. ಇದರಿಂದ ಇಡೀ ಚಿತ್ರರಂಗ ಮತ್ತೂಂದು ಹೆಜ್ಜೆ ಮುಂದೆ ಸಾಗಲಿದೆ

ಮಾರ್ಟಿನ್‌ ಮಾಡಲು ಪ್ರೇರಣೆ?

ನಾವು ಸಿನಿಮಾ ಶುರು ಮಾಡಿದಾಗ ನಮ್ಮ ಚಿತ್ರರಂಗದಲ್ಲಿ ಆದ ಒಂದಷ್ಟು ದೊಡ್ಡ ಸಿನಿಮಾಗಳು, ಅದರ ಫ‌ಲಿತಾಂಶವನ್ನು ಪ್ರೇರಣೆಯಾಗಿ ತಗೊಂಡಿದ್ದು ಸುಳ್ಳಲ್ಲ. ಕನ್ನಡದಿಂದ ಒಂದು ಇಂಡಿಯನ್‌ ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಶುರು ಮಾಡಿದ ಸಿನಿಮಾ “ಮಾರ್ಟಿನ್‌’. ಅದೇ ಕಾರಣದಿಂದ ಒಂದು ಇಂಡಿನ್‌ ಸಿನಿಮಾ ಎನಿಸಿಕೊಳ್ಳಲು ಅದಕ್ಕೆ ಅದರದ್ದೇ ಆದ ತಯಾರಿ, ಸಮಯ ಎಲ್ಲವೂ ಬೇಕು. ಆ ಪ್ರಕ್ರಿಯೆಯಲ್ಲಿ ನಾವು ಇದ್ದೇವೆ. ಮುಂದೆ “ಮಾರ್ಟಿನ್‌’ ನೋಡಿ ಇನ್ನೊಂದಿಷ್ಟು ದೊಡ್ಡ ಪ್ರಯತ್ನಗಳಾಗುವುದರಲ್ಲಿ ಅನುಮಾನವಿಲ್ಲ.

Advertisement

240 ದಿನಗಳ ಚಿತ್ರೀಕರಣವನ್ನು ನಿಜಕ್ಕೂ ಕಥೆ ಬಯಸಿತ್ತಾ?

ಇಲ್ಲಿ ನಾವು ಯಾವುದನ್ನೂ ಅನಾವಶ್ಯಕವಾಗಿ ಮಾಡಿಲ್ಲ. ಕಥೆ ಬಯಸಿದ್ದರಿಂದಲೇ ಶೂಟಿಂಗ್‌ ಮಾಡಿದ್ದೇವೆ. ಯಾವುದೋ ಒಂದು ಎಪಿಸೋಡ್‌ ಮಾಡಿರುತ್ತೇವೆ. ಅದು ತುಂಬಾ ಚೆನ್ನಾಗಿ ಮೂಡಿಬಂದಿರುತ್ತದೆ. ಮತ್ತೂಂದು ಎಪಿಸೋಡ್‌ ಮಾಡುವಾಗ ಅದಕ್ಕಿಂತ ಚೆನ್ನಾಗಿ ಮಾಡುವ ಸವಾಲನ್ನು ನಮಗೆ ನಾವೇ ಹಾಕಿಕೊಳ್ಳುತ್ತಿದ್ದೆವು. ಇವೆಲ್ಲವೂ ಶೂಟಿಂಗ್‌ ದಿನ ಹೆಚ್ಚಾಗಲು ಕಾರಣ.

ಚಿತ್ರದ ಬಜೆಟ್‌ 80 ಕೋಟಿ ರೂಪಾಯಿ ದಾಟಿದೆಯಂತೆ?

ಯಾರು ಹೇಳಿದ್ದು, ನಾನು ಅಧಿಕೃತವಾಗಿ ಬಜೆಟ್‌ ಬಗ್ಗೆ ಹೇಳಿದ್ದೇನಾ? ನೋಡಿ, ಸಿನಿಮಾ ಈಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಆ ನಂತರ ಪ್ರಮೋಶನ್‌, ರಿಲೀಸ್‌… ಅದಕ್ಕೂ ಬಜೆಟ್‌ ಬೇಕು. ಸಿನಿಮಾದ ಬಜೆಟ್‌ ಇವೆಲ್ಲವನ್ನು ಸೇರಿಕೊಳ್ಳುತ್ತದೆ. ಒಂದಂತೂ ಹೇಳಬಲ್ಲೆ, ಕನ್ನಡ ಚಿತ್ರರಂಗದಲ್ಲೇ ಬಿಗ್‌ ಬಜೆಟ್‌ನ ಸಿನಿಮಾವಿದು.

ಇಷ್ಟೊಂದು ಬಿಗ್‌ಬಜೆಟ್‌ ಹಾಕಿದ್ದೀರಿ. ಹೇಗಿದೆ ಈ ಅನುಭವ?

ಯಾವುದೇ ಕ್ಷೇತ್ರಕ್ಕೆ ಕೈ ಹಾಕಿದರೂ ಅಲ್ಲಿ ಅನುಭವ ಆಗಿಯೇ ಆಗುತ್ತದೆ. ಇಲ್ಲೂ ಅಷ್ಟೇ ಸಿನಿಮಾ ಮುಗಿಸೋದು, ಈ ನಡುವೆ ಬರುವ ಒತ್ತಡ, ಫಾಲೋಆಫ್.. ಎಲ್ಲವೂ ಒಂದೊ ಳ್ಳೆಯ ಅನುಭವ ನೀಡುತ್ತಿದೆ.

ಸಿನಿಮಾ ಯಾಕೆ ಇಷ್ಟೊಂದು ತಡವಾಗುತ್ತಿದೆ?

– ನನಗೆ ಆ ತರಹ ಅನಿಸಿಯೇ ಇಲ್ಲ. ಸಿನಿಮಾ ಅಂದರೆ ಅದೊಂದು ಪ್ರಕ್ರಿಯೆ. ಸ್ಕ್ರಿಪ್ಟ್ನಿಂದ ಪೋಸ್ಟ್ ಪ್ರೊಡಕ್ಷನ್‌ವರೆಗೂ… ಈ ಹಂತಗಳು ಅದರದ್ದೇ ಆದ ಸಮಯ ಬೇಡುತ್ತದೆ. ಚಿತ್ರದಲ್ಲಿ ಎರಡು ಗಂಟೆ ಸಿಜಿ ಬರುತ್ತದೆ. ಇಷ್ಟನ್ನು ಮಾಡಲು ಕನಿಷ್ಠ ಒಂದು ವರ್ಷ ಸಮಯ ಬೇಕು. ಈ ಪ್ರೊಸೆಸ್‌ ನೀಟಾಗಿ ಬರಬೇಕಾದರೆ ನಾವು ಟೈಮ್‌ ಕೊಡಲೇಬೇಕು. ನಾನು ಎಲ್ಲವೂ ಪಕ್ವವಾಗಿಯೇ ಬರಬೇಕೆಂದು ಬಯಸುವವ. ನಮ್ಮ ಹೀರೋ ಸಿನಿಮಾ ಬಂದು ಮೂರು ವರ್ಷ ಆಗಿದೆ. ಅವರು ಕೂಡಾ ಬೇರೆ ಯಾವುದೇ ಸಿನಿಮಾ ಮಾಡದೇ ಪೂರ್ಣವಾಗಿ ಈ ಕಡೆ ತೊಡಗಿಸಿಕೊಂಡಿದ್ದಾರೆ. ಒಂದು ವೇಳೆ ಮಧ್ಯದಲ್ಲಿ ಅವರ ಬೇರೆ ಸಿನಿಮಾ ಬಂದಿದ್ದರೆ ಈ ಸಿನಿಮಾ ತಡ ಎಂಬ ಭಾವನೆ ಬರುತ್ತಿರಲಿಲ್ಲ.

ನಟ ಧ್ರುವ ಅವರಿಗೆ ಕನ್ನಡದಲ್ಲಿ ದೊಡ್ಡ ಫ್ಯಾನ್‌ಬೇಸ್‌ ಇದೆ. ಆದರೆ, ಪ್ಯಾನ್‌ ಇಂಡಿಯಾದಲ್ಲಿ ಅವರು ಈಗಷ್ಟೇ ಗುರುತಿಸಿಕೊಳ್ಳುತ್ತಿರುವ ನಟ. ಹೀಗಿರುವಾಗ ಇಷ್ಟೊಂದು ಬಿಗ್‌ ಬಜೆಟ್‌ ಹಾಕೋದು ಒಬ್ಬ ಹೀರೋ ಬೆನ್ನಿಗೆ ಅತಿ ಭಾರ ಹೊರಿಸಿದೆಯಂತೆ ಅಲ್ವಾ?

ಯಾವುದೇ ಒಂದು ಸಿನಿಮಾಕ್ಕೆ ಬಜೆಟ್‌ ಹಾಕುವ ಮುನ್ನ ಕಂಟೆಂಟ್‌ ನೋಡಬೇಕು. “ಮಾರ್ಟಿನ್‌’ ಸಿನಿಮಾದ ಕಂಟೆಂಟ್‌ ಅಷ್ಟೊಂದು ಗಟ್ಟಿಯಾಗಿದೆ. ಮೊದಲೇ ಹೇಳಿದಂತೆ ಇದು ಇಂಡಿಯನ್‌ ಸಿನಿಮಾ. ಇನ್ನು, ಧ್ರುವ ಅವರ ಬಗ್ಗೆ ಹೇಳುವುದಾದರೆ, ಈಗಾಗಲೇ ಅವರ ಪೊಗರು ಚಿತ್ರ ತಮಿಳು, ತೆಲುಗಿನಲ್ಲಿ ಚೆನ್ನಾಗಿ ಹೋಗಿದೆ. ಈ ಬಾರಿ ಹೊಸದಾಗಿ ಸೇರಿಸಿರೋದು ಹಿಂದಿ ಹಾಗೂ ಮಲಯಾಳಂ ಮಾತ್ರ. ಹಿಂದಿಯಲ್ಲೂ ನಮ್ಮ “ಮಾರ್ಟಿನ್‌’ ಚಿತ್ರ ತುಂಬಾ ಚೆನ್ನಾಗಿ ರೀಚ್‌ ಆಗಿದೆ. ಈಗಾಗಲೇ ಅಲ್ಲಿ ಟಾಕ್‌ ಶುರುವಾಗಿದೆ. ನನಗೆ ಮಾರ್ಟಿನ್‌ ಮೇಲೆ ಶೇ100ರಷ್ಟು ನಂಬಿಕೆ ಇದೆ

ಯಾವ ತಿಂಗಳು ರಿಲೀಸ್‌ ಮಾಡ್ತೀರಿ?

ನಾನು ತಿಂಗಳು ಹೇಳ್ಳೋದು ಕಷ್ಟ. ಫ‌ಸ್ಟ್‌ ಡ್ರಾಪ್ಟ್ ಸಿಜಿ ಬರಬೇಕು. ಆ ನಂತರ ಕರೆಕ್ಷನ್‌ ಸಮಯ ಕೊಡಬೇಕು. ಆ ನಂತರ ಸಿನಿಮಾ ರಿಲೀಸ್‌ ನಿರ್ಧಾರ ಮಾಡಲು ಸಾಧ್ಯ. ಅತೀ ಶೀಘ್ರದಲ್ಲೇ ಎಂದಷ್ಟೇ ಹೇಳಬಲ್ಲೇ.

ನೀವು ಅಂದುಕೊಂಡ ಮಟ್ಟಕ್ಕೆ “ಮಾರ್ಟಿನ್‌’ ಬಿಝಿನೆಸ್‌ ಆಗುತ್ತಿಲ್ಲ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ?

ಅದು ಸುಳ್ಳು. ನಾನು ಬಿಝಿನೆಸ್‌ ಓಪನ್‌ ಮಾಡಿಲ್ಲ. ಹೀಗಿರುವಾಗ ಬಿಝಿನೆಸ್‌ ಮಾತುಕತೆ ಆಗಲು ಹೇಗೆ ಸಾಧ್ಯ. ಸಿನಿಮಾ ಪೂರ್ಣವಾಗದೇ ನಾನು ಬಿಝಿನೆಸ್‌ ಮಾಡಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಏಕೆಂದರೆ ಒಂದು ಪರಿಪೂರ್ಣವಾದ ಪ್ರಾಡಕ್ಟ್‌ನ ಇಟ್ಟುಕೊಂಡು ಬಿಝಿನೆಸ್‌ ಮಾತುಕತೆ ಮಾಡಬೇಕೇ ಹೊರತು ಅರ್ಧಬೆಂದ ಅನ್ನವನ್ನಿಟ್ಟುಕೊಂಡಲ್ಲ.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next