ಬ್ಯಾಡಗಿ: ವಿಮಾ ಕಂಪನಿಗಳು ವಿಮೆ ಹಣ ತುಂಬಿಸಿಕೊಳ್ಳಲು ದಿನಾಂಕ ನಿಗದಿ ಪಡಿಸಿದಂತೆ ವಿಮೆ ಹಣವನ್ನು ಸಕಾಲದಲ್ಲಿ ರೈತರಿಗೆ ಬಿಡುಗಡೆ ಮಾಡುವ ಕುರಿತಂತೆ ಸ್ಪಷ್ಟ ದಿನಾಂಕ ನಿಗದಿ ಮಾಡುವವರೆಗೂ ಜಿಲ್ಲೆಯಾದ್ಯಂತ ಯಾವ ರೈತರೂ ವಿಮೆ ಹಣ ಭರಣ ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕ್ ವ್ಯವಸ್ಥಾಪಕ ಹಾಗೂ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸತತ ಬರಗಾಲ ಹಾಗೂ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರು ಸಂಕಷ್ಟದಲ್ಲಿರುವಾಗ ಕೈಡಿಯುತ್ತೆ ಎಂದು ತುಂಬಿರುತ್ತಾರೆ. ಆದರೆ, ಕೃಷಿ ಅಧಿಕಾರಿಗಳ ಹಾಗೂ ವಿಮೆ ಕಂಪನಿಗಳ ಬೇಜವಾಬ್ದಾರಿತನದಿಂದಾಗಿ ಆನ್ನದಾತ ಕಷ್ಟಕ್ಕೆ ಸಿಲುಕಿದಂತಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಯಾರೂ ವಿಮೆ ಹಣ ತುಂಬದಿರಲು ನಿರ್ಧಸಿದ್ದಾಗಿ ತಿಳಿಸಿದರು.
ವಿಮೆ ಯಾಕ್ರೀ ತುಂಬಬೇಕು?: ಗಂಗಣ್ಣ ಎಲಿ ಮಾತನಾಡಿ, ಜಿಲ್ಲೆಯಾದ್ಯಂತ ರೈತರು ಬೆಳೆ ವಿಮೆ ಹಣಕ್ಕಾಗಿ ಅಂಗಲಾಚುವ ಸ್ಥಿತಿ ಎದುರಾಗಿದ್ದು, 15-16 ನೇ ಸಾಲಿನ ಸುಮಾರು 8 ಕೋಟಿಗೂ ಅಧಿಕ ಹಣ ಜಿಲ್ಲಾಡಳಿತದ ವೈಫಲ್ಯದಿಂದ ಹಂಚಿಕೆಯಾಗದೆ ಬ್ಯಾಂಕ್‌ನಲ್ಲಿ ಕೊಳೆಯುತ್ತಿದೆ. ಇದರ ನಡುವೆ ಮತ್ತೊಮ್ಮೆ ವಿಮೆ ಹಣ ತುಂಬುವ ಸಮಯ ಬಂದಿದ್ದು ಬಾಕಿ ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡುವರೆಗೂ ವಿಮೆ ಹಣ ತುಂಬುವುದಿಲ್ಲ ಎಂದರು.
ಕೃಷಿ ಅಧಿಕಾರಿ ಅಮೃತೇಶ ಮಾತನಾಡಿ, ಡಬ್ಲಿಂಗ್ ಆಗಿರುವ ರೈತರ ಕುರಿತಂತೆ ಇಗಾಗಲೇ ವಿಮಾ ಕಂಪನಿಗಳ ಹತ್ತಿರ ಚರ್ಚಿಸಲಾಗಿದೆ. ವಿಮಾ ಕಂಪನಿಗಳು ರೈತರು ಹಾಗೂ ಅಧಿಕಾರಿಗಳ ಸಭೆಯನ್ನು ಜೂ.26 ರಂದು ಬೆಳಗ್ಗೆ 10:30 ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದೆ ಎಂದರು.
ಆಧಾರ್ ಇಲ್ಲದೇ ನೋಂದಣಿ ಇಲ್ಲ: ಸಭೆಯಲ್ಲಿದ್ದ ಯುನೈಟೆಡ್ ಇನ್ಸೂರೆನ್ಸ್ ಕಂಪನಿ ವ್ಯವಸ್ಥಾಪಕ ತಿಮ್ಮೇಶ ಮಾತನಾಡಿ, ರೈತರು ಕಡ್ಡಾಯವಾಗಿ ಆಧಾರ್ ಹೊಂದಿದ್ದಲ್ಲಿ ಮಾತ್ರ ವಿಮೆ ಹಣ ಭರಣ ಮಾಡಿಕೊಳ್ಳಲು ಸಾಧ್ಯ, ಇಲ್ಲದಾದಲ್ಲಿ ಯಾವುದೇ ಕಾರಣಕ್ಕೂ ವಿಮೆ ಹಣ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ವಿಮೆ ಹಣ ತುಂಬುವ ಸಂದರ್ಭದಲ್ಲಿ ಆಧಾರ್, ಪಾಸ್ ಬುಕ್ ಹಾಗೂ ಪಹಣಿ ಕಡ್ಡಾಯವಾಗಿ ತರಬೇಕು ಎಂದರು.
ಪ್ರತ್ಯೇಕ ಕೌಂಟರ್ ಮಾಡಿ:
ತಹಶೀಲ್ದಾರ್ ಎಸ್.ಎ.ಪ್ರಸಾದ ಮಾತನಾಡಿ, ವಿಮೆ ಹಣ ತುಂಬುವ ವೇಳೆಯಲ್ಲಿ ರೈತರು ಕಳೆದ ವರ್ಷ ಪರದಾಡಿದ್ದು ಹಾಗೂ ನಿಗದಿತ ದಿನಾಂಕದಲ್ಲಿ ವಿಮೆ ಹಣ ತುಂಬಲಾಗದೇ ಪ್ರತಿಭಟನೆ ಕೂಡಾ ಮಾಡಿದ ಉದಾಹರಣೆಗಳಿವೆ. ಹೀಗಾಗಿ ಬ್ಯಾಂಕ್‌ಗಳಲ್ಲಿ ವಿಮೆ ಹಣ ಭರಣಕ್ಕಾಗಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿಕೊಂಡು ರೈತರಿಗೆ ಅನೂಕೂಲ ಮಾಡಿಕೊಡುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು. ರೈತ ಮುಖಂಡ ಗಂಗಣ್ಣ ಎಲಿ, ಕಿರಣಕುಮಾರ ಗಡಿಗೋಳ ಸೇರಿದಂತೆ ಎಲ್ಲ ಬ್ಯಾಂಕ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.