ಹಿಂದೂಗಳ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ದಿನಗಣನೆ ಆರಂಭವಾಗಿದೆ. ಜನವರಿ ತಿಂಗಳ ಮಧ್ಯ ಭಾಗದಲ್ಲಿ ಬರಲಿರುವ ಮಕರ ಸಂಕ್ರಾಂತಿಯನ್ನು ದೇಶಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಾರೆ. ದೇಶದ ವಿವಿಧ ಭಾಗದಲ್ಲಿ ವಿವಿಧ ಹೆಸರುಗಳಿಂದ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿ ಇತಿಹಾಸ:
ಹಿಂದೂ ಪಂಚಾಂಗದ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುತ್ತಾ ಬರಲಾಗಿದೆ. ಹಿಂದೂ ಶಾಸ್ತ್ರದ ಪ್ರಕಾರ ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ ಎನ್ನುತ್ತಾರೆ. ಬಹುತೇಕ ಪ್ರತಿವರ್ಷ ಜನವರಿ 14ರಂದೇ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಸಂಕ್ರಾಂತಿ ಹಬ್ಬವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ, ಬೇರೆ ಹೆಸರುಗಳಲ್ಲಿ ಆಚರಿಸಲ್ಪಡುತ್ತದೆ. ತಮಿಳುನಾಡಿನಲ್ಲಿ ಮಕರ ಸಂಕ್ರಮಣವನ್ನು ಪೊಂಗಲ್ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯ ಕಾಲ ಆರಂಭ ಎಂದೇ ಸಂಭ್ರಮಿಸಲಾಗುತ್ತದೆ. ಹರ್ಯಾಣ ಹಾಗೂ ಪಂಜಾಬ್ ನಲ್ಲಿ ಮಕರ ಸಂಕ್ರಾಂತಿಯನ್ನು ಮಾಘಿ ಎಂದು ಕರೆಯುತ್ತಾರೆ. ಇನ್ನುಳಿದಂತೆ ಗೋವಾ, ಆಂಧ್ರಪ್ರದೇಶ, ಪಶ್ಚಿಮಬಂಗಾಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಕರ ಸಂಕ್ರಾಂತಿ ಅಥವಾ ಪುಷ್ಯ ಸಂಕ್ರಾಂತಿ ಎಂದು ಕರೆಯುತ್ತಾರೆ.
ಕರ್ನಾಟಕದಲ್ಲಿ ಮನೆಗಳಲ್ಲಿ ಎಳ್ಳು-ಬೆಲ್ಲ ತಯಾರಿಸಿ ಸುತ್ತಮುತ್ತ ಹಂಚುವುದು ಸಂಪ್ರದಾಯ. ಎಳ್ಳಿನ ಜೊತೆಗೆ ಬೆಲ್ಲದ ಅಚ್ಚು, ಹಣ್ಣು, ಕಬ್ಬಿನ ತಂಡುಗಳನ್ನು ಕೊಡುತ್ತಾರೆ. ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲದೊಂದಿಗೆ ಸಂಬಂಧಿಕರನ್ನು ಭೇಟಿಯಾಗಿ ಎಳ್ಳುಬೆಲ್ಲ ವಿನಿಮಯ ಮಾಡಿಕೊಳ್ಳುತ್ತಾರೆ.
ಉತ್ತರಾಯಣ ಪುಣ್ಯಕಾಲ:
ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 14) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ, ಈ ದಿನದಂದು ಕೊನೆಯುಸಿರೆಳದರೂ ಅವರಿಗೆ ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಮಹಾಭಾರತದಲ್ಲಿ ಭೀಷ್ಮ ದೇಹ ತ್ಯಜಿಸಲು ಉತ್ತರಾಯಣ ಕಾಲದವರೆಗೂ ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತ ಕಾದಿದ್ದರು ಎಂಬ ಉಲ್ಲೇಖವಿದೆ.
2024ರಲ್ಲಿ ಮಕರ ಸಂಕ್ರಾಂತಿ ಜನವರಿ 14 ಅಥವಾ 15ಕ್ಕಾ?
ಪ್ರತಿವರ್ಷ ಜನವರಿ 14ರಂದೇ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ 2024 ಈ ಬಾರಿ ಅಧಿಕ ವರ್ಷವಾಗಿದೆ.(ಅಂದರೆ ಫೆಬ್ರವರಿ 29 ದಿನ). ಈ ಹಿನ್ನೆಲೆಯಲ್ಲಿ 2024ರ ಆಗಸ್ಟ್ 15ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವರ್ಷ ಜನವರಿ 15ರಂದು ಸೂರ್ಯ ದೇವನು ಧನು ರಾಶಿಯಿಂದ ಹೊರಬಂದು 2;54ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾರೆ. ಆದ್ದರಿಂದ ಜನವರಿ 15ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿ ಶುಭ ಮುಹೂರ್ತ:
ಮಕರ ಸಂಕ್ರಾಂತಿ ದಿನ: ಜನವರಿ 15
ಮಕರ ಸಂಕ್ರಾಂತಿ ಪುಣ್ಯ ಕಾಲ: ಬೆಳಗ್ಗೆ 7-15ಕ್ಕೆ ಆರಂಭವಾಗಿ ಸಂಜೆ 5.46ಕ್ಕೆ ಕೊನೆಗೊಳ್ಳಲಿದೆ.
ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಗ್ಗೆ 7-15ರಿಂದ ಬೆಳಗ್ಗೆ 9ಗಂಟೆವರೆಗೆ.