ಕುಂದಾಪುರ, ನ. 14: ಮಕ್ಕಳ ದಿನಾಚರಣೆಯ ಪ್ರಯುಕ್ತ ಶನಿವಾರ ಮರವಂತೆಯ ಗ್ರಾ.ಪಂ. ವತಿಯಿಂದ 2020-21ನೇ ಸಾಲಿನ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಸ್ನೇಹಿ ಗ್ರಾ.ಪಂ. ಅಭಿಯಾನ ಹಾಗೂ ಮಕ್ಕಳ ಹಕ್ಕುಗಳ ಗ್ರಾಮಸಭೆ ಮತ್ತು “ಓದುವ ಬೆಳಕು’ ಕಾರ್ಯಕ್ರಮಕ್ಕೆ ಮರವಂತೆ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಾಲನೆ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ ಮಾತನಾಡಿ, ಈಗಿನ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಈಗ ಸಿಕ್ಕಿರುವ ಈ ಸಮಯವನ್ನು ಅದಕ್ಕಾಗಿ ಉಪಯೋಗಿಸಿ. ಇದರಿಂದ ಕಲಿಕೆಗೆ ಮಾತ್ರವಲ್ಲದೆ, ಜ್ಞಾನ ವೃದ್ಧಿಗೂ ಸಹಕಾರಿಯಾಗಲಿದೆ ಎಂದವರು ಹೇಳಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಸಮ್ಮಾನ : ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಬಾಲ ಪ್ರತಿಭೆ ಶ್ರಾವ್ಯಾ ಎಸ್. ಮರವಂತೆ ಅವರನ್ನು ಗ್ರಾ.ಪಂ. ವತಿಯಿಂದ ಸಮ್ಮಾನಿಸಲಾಯಿತು.
ಮರವಂತೆ ಗ್ರಾ.ಪಂ. ಕಾರ್ಯದರ್ಶಿ ದಿನೇಶ್ ಸೇರುಗಾರ್, ಮರವಂತೆ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಕಾರ್ಯದರ್ಶಿ ದಿನೇಶ್ ಶೇರುಗಾರ್, ಗ್ರಂಥಾಲಯದ ಮೇಲ್ವಿಚಾರಕಿ ಶ್ಯಾಮಲಾ, ಸಿಬಂದಿ ಪ್ರಭಾಕರ್, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ. ಸಿಬಂದಿ ಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಬಿಲ್ಲವ ವಂದಿಸಿದರು.