ನ್ಯೂಯಾರ್ಕ್: ಪತನದ ಅಂಚಿಗೆ ಬಂದಿದ್ದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿ ಹೊಂದಿರುವ “ಫಸ್ಟ್ ರಿಪಬ್ಲಿಕ್ ಬ್ಯಾಂಕ್’ ಗೆ ವಿತ್ತೀಯ ನೆರವು ನೀಡುವ ನಿಟ್ಟಿನಲ್ಲಿ 11 ಬ್ಯಾಂಕ್‌ಗಳು 30 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ನಿಧಿಯನ್ನು ಸಂಗ್ರಹಿಸಿವೆ.
ಸದ್ಯ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್‌ಗಳು ಪತನವಾದಂತೆ ಮತ್ತೂಂದು ಹಣಕಾಸು ಸಂಸ್ಥೆ ಕುಸಿದು ಹೋಗದಂತೆ ಮಾಡುವ ಪ್ರಯತ್ನ ನಡೆಸಲಾಗಿದೆ.
ಕಳೆದ ಶುಕ್ರವಾರ ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ನ ಠೇವಣಿದಾರರಿಗೆ 40 ಬಿಲಿಯನ್ ಡಾಲರ್ ಮೊತ್ತವನ್ನು ವಾಪಸ್ ಪಡೆಯಲು ಅನಾನುಕೂಲವಾಗಿತ್ತು. ಆ ಬ್ಯಾಂಕ್ ಪತನಗೊಳ್ಳಲಿದೆ ಎಂಬ ಮಾಹಿತಿ ಠೇವಣಿದಾರರಿಗೆ ತಲುಪಿದ್ದರಿಂದ ಅವರು ಮೊತ್ತ ವಾಪಸ್ ಪಡೆಯಲು ಮುಂದಾಗಿದ್ದರು. 2022 ಡಿ.31ಕ್ಕೆ ಮುಕ್ತಾಯವಾದಂತೆ ಬ್ಯಾಂಕ್‌ನಲ್ಲಿ 176.4 ಬಿಲಿಯನ್ ಡಾಲರ್ ಠೇವಣಿ ಇತ್ತು.
ಅಮೆರಿಕದ ವಿತ್ತೀಯ ಕ್ಷೇತ್ರದ ವಿಶ್ಲೇಷಕರು ಪ್ರತಿಪಾದಿಸುವ ಪ್ರಕಾರ ಸದ್ಯ ಬ್ಯಾಂಕ್‌ಗೆ ವಿತ್ತೀಯ ಪ್ಯಾಕೇಜ್ ನೀಡಿದರೂ, ಅದು ದೀರ್ಘ ಕಾಲದ ವರೆಗೆ ದೃಢವಾಗಿ ಇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನಗೊಳ್ಳುತ್ತಿದ್ದಂತೆ, ಅದರ ಮಾಜಿ ಸಿಇಒ ಕುಟುಂಬಸಮೇತ ಪರಾರಿಯಾಗಿದ್ದಾರೆ. ಹವಾಯಿ ದ್ವೀಪದಲ್ಲಿರುವ ತಮ್ಮ 3.1 ಮಿಲಿಯನ್ ಡಾಲರ್ ಮೌಲ್ಯದ ಮನೆಯಲ್ಲಿ ವಾಸಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.