ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಮತ್ತು ಯುಎಸ್ ಎ, ಕೆನಡಾ ಹಾಗೂ ಬ್ರಿಟನ್ ಮೂಲದ ಭಾರತ ವಿರೋಧಿ ಖಲಿಸ್ತಾನಿ ಬಂಡುಕೋರರ ಜತೆ ಸಂಪರ್ಕ ಹೊಂದಿದ್ದ ಕಳ್ಳಸಾಗಾಣಿಕೆದಾರನನ್ನು ಬಂಧಿಸಿ ಅಪಾರ ಪ್ರಮಾಣದ ವಿದೇಶಿ ನಿರ್ಮಿತ ಪಿಸ್ತೂಲ್, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಯೋತ್ಪಾದಕ ಸಂಚನ್ನು ಪಂಜಾಬ್ ಪೊಲೀಸರು ವಿಫಲಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 14975 ಸೋಂಕಿತರು ಗುಣಮುಖ, 8249 ಜನರಿಗೆ ಪಾಸಿಟಿವ್
ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವವರಿಗೆ ನೀಡಲು ಈ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣಿಕೆ ಮೂಲಕ ಭಾರತಕ್ಕೆ ತಂದಿರುವುದಾಗಿ ಡಿಜಿಪಿ ದಿನಕರ್ ಗುಪ್ತಾ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಜಗ್ ಜಿತ್ ಸಿಂಗ್ (25) ಎಂಬಾತನನ್ನು ಅಮೃತ್ ಸರದ ಕಾತುನಂಗಲ್ ಸಮೀಪ ಗುರುವಾರ ರಾತ್ರಿ ಪಂಜಾಬ್ ನ ಆಂತರಿಕ ಭದ್ರತಾ ದಳ ಬಂಧಿಸಿರುವುದಾಗಿ ಗುಪ್ತಾ ತಿಳಿಸಿದ್ದಾರೆ. ಕಾತುನಂಗಲ್ ಗ್ರಾಮದ ಅಮೃತ್ ಸರ್ ಮತ್ತು ಬಾಟಾಲಾ ರಸ್ತೆಯಲ್ಲಿ ವಿಶೇಷವಾಗಿ ಹಾಕಲಾಗಿದ್ದ ನಾಕಾದ ವೇಳೆ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಶಸ್ತ್ರಾಸ್ತ್ರ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಎರಡು ನೈಲಾನ್ ಬ್ಯಾಗ್ ನಲ್ಲಿ ವಿದೇಶಿ ನಿರ್ಮಿತ 48 ಪಿಸ್ತೂಲ್ ಗಳು, ಮ್ಯಾಗಝೈನ್ಸ್ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 37 ಮ್ಯಾಗಝೈನ್ಸ್ ಮತ್ತು 45 ಸಜೀವ ಗುಂಡುಗಳು, 9 ಪಿಸ್ತೂಲ್ (ಚೀನಾ ನಿರ್ಮಿತ), ಸ್ಟಾರ್ ಮಾರ್ಕ್ ನ 19 ಪಿಸ್ತೂಲ್ ಸೇರಿದಂತೆ ಒಟ್ಟು 48 ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಗುಪ್ತಾ ತಿಳಿಸಿದ್ದಾರೆ.