ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರ ಪೊಲೀಸರು ಶನಿವಾರ (ಆಗಸ್ಟ್ 14) ಜೈಶ್ ಎ ಮೊಹಮ್ಮದ್ ಉಗ್ರಗಾಮಿ(ಜೆಇಎಂ) ಸಂಘಟನೆಯ ನಾಲ್ವರು ಭಯೋತ್ಪಾದಕರು ಹಾಗೂ ಸಹಚರರನ್ನು ಬಂಧಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯಂದ ನಡೆಸಲು ಉದ್ದೇಶಿಸಿದ್ದ ಬಹುದೊಡ್ಡ ದಾಳಿಯ ಸಂಚನ್ನು ವಿಫಲಗೊಳಿಸಿದೆ.
ಇದನ್ನೂ ಓದಿ:ಬ್ರಿಟಿಷರನ್ನು ಬೆಚ್ಚಿ ಬೀಳಿಸಿದ್ದ ವಿವಿಂಗ್ ಮಾಸ್ತರ್!
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡ್ರೋನ್ ನಿಂದ ಕೆಳಕ್ಕೆ ಎಸೆಯುವ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಅದನ್ನು ಕಾಶ್ಮೀರದಲ್ಲಿರುವ ಜೈಶ್ ಉಗ್ರರಿಗೆ ಸರಬರಾಜು ಮಾಡುವ ಸಂಚು ರೂಪಿಸಿದ್ದರು. ಅಲ್ಲದೇ ಆಗಸ್ಟ್ 15ಕ್ಕೂ ಮುನ್ನ ಜಮ್ಮುವಿನಲ್ಲಿ ಐಇಡಿ ಮೂಲಕ ಸ್ಫೋಟ ನಡೆಸಲು ಉದ್ದೇಶಿಸಿದ್ದರು ಎಂದು ತಿಳಿಸಿದ್ದಾರೆ.
ಬಂಧಿತ ಜೈಶ್ ಉಗ್ರರಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಬೈಕ್ ಗೆ ಐಇಡಿ ಅಳವಡಿಸಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಪುಲ್ವಾಮಾದ ಪ್ರಿಚೂ ಪ್ರದೇಶದಲ್ಲಿ ಮೊದಲು ಮುಂಟಾಝಿರ್ ಮನ್ಸೂರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಒಂದು ಪಿಸ್ತೂಲ್, ಎಂಟು ಸಜೀವ ಗುಂಡು ಮತ್ತು ಚೀನಾ ನಿರ್ಮಿತ ಎರಡು ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಳ್ಳಲಾಗಿತ್ತು. ಕಾಶ್ಮೀರ ಕಣಿವೆ ಪ್ರದೇಶಕ್ಕೆ ಶಸ್ತ್ರಾಸ್ತ್ರ ಸಾಗಿಸಲು ಉಪಯೋಗಿಸಿದ ಲಾರಿಯನ್ನು ಕೂಡಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಟಾಝಿರ್ ಮನ್ಸೂರ್ ಬಂಧನದ ಬಳಿಕ ಇತರ ಮೂವರು ಜೈಶ್ ಉಗ್ರರನ್ನು ಬಂಧಿಸಲಾಗಿತ್ತು. ವಿಚಾರಣೆಯ ವೇಳೆ, ಪಾಕಿಸ್ತಾನದಲ್ಲಿರುವ ಜೈಶ್ ಕಮಾಂಡರ್ ಮುನಾಝಿರ್ ಅಲಿಯಾಸ್ ಶಾಹೀದ್, ಪಂಜಾಬ್ ಪ್ರದೇಶದಲ್ಲಿ ಡ್ರೋನ್ ಮೂಲಕ ಎಸೆಯುವ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದ.
ಅಷ್ಟೇ ಅಲ್ಲ ಪಾಣಿಪತ್ ತೈಲ ಸಂಸ್ಕರಣಾ ಘಟಕ ಹಾಗೂ ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿ ಪ್ರದೇಶವನ್ನು ಪರಿಶೀಲಿಸಲು ಪಾಕ್ ನಲ್ಲಿದ್ದ ಜೈಶ್ ಕಮಾಂಡರ್ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.