ಆ್ಯಂಟಿಗುವಾ: ಮುಂಬರುವ ಆಸ್ಟ್ರೇಲಿಯಾ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಿಸಲಾಗಿದ್ದು, ಮೇಜರ್ ಸರ್ಜರಿ ಮಾಡಲಾಗಿದೆ. ವೆಸ್ಟ್ ಇಂಡೀಸ್ ತಂಡವು ಆಸ್ಟ್ರೇಲಿಯಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
15 ಮಂದಿ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಬರೋಬ್ಬರಿ ಏಳು ಮಂದಿ ಹೊಸ ಆಟಗಾರರಾಗಿದ್ದಾರೆ. ಜೇಸನ್ ಹೋಲ್ಡರ್ ಮತ್ತು ಕೈಲ್ ಮೇಯರ್ಸ್ ಆಯ್ಕೆಗೆ ಲಭ್ಯರಿರಲಿಲ್ಲ.
ಈ ವರ್ಷ ಭಾರತದ ವಿರುದ್ದದ ಸರಣಿಯಲ್ಲಿದ್ದ ಜೆರ್ಮೈನ್ ಬ್ಲಾಕ್‌ವುಡ್, ರೇಮನ್ ರೈಫರ್, ರಹಕೀಮ್ ಕಾರ್ನ್‌ವಾಲ್, ಶಾನನ್ ಗೇಬ್ರಿಯಲ್ ಮತ್ತು ಜೋಮೆಲ್ ವಾರಿಕಾನ್ ಅವರನ್ನು ಕೈಬಿಡಲಾಗಿದೆ. ಭುಜದ ಗಾಯದಿಂದಾಗಿ ಜೇಡನ್ ಸೀಲ್ಸ್ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಮಂಡಳಿಯು ತಿಳಿಸಿದೆ.
ಟೆಸ್ಟ್ ಪದಾರ್ಪಣೆ ಮಾಡದ ಆಲ್ ರೌಂಡರ್ ಕೆವಿನ್ ಸಿಂಕ್ಲೇರ್, ಬ್ಯಾಟರ್ ಜಕಾರಿ ಮೆಕ್‌ಕಾಸ್ಕಿ, ವಿಕೆಟ್ ಕೀಪರ್ ಟೆವಿನ್ ಇಮ್ಲಾಚ್, ಆಲ್‌ರೌಂಡರ್‌ಗಳಾದ ಜಸ್ಟಿನ್ ಗ್ರೀವ್ಸ್ ಮತ್ತು ಕವೆಮ್ ಹಾಡ್ಜ್, ವೇಗದ ಬೌಲರ್‌ಗಳಾದ ಅಕೀಮ್ ಜೋರ್ಡಾನ್ ಮತ್ತು ಶಮರ್ ಜೋಸೆಫ್ ಆಸೀಸ್ ಸರಣಿಯ ಭಾಗವಾಗಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ದದ ಸರಣೀಯ ಭಾಗವಾಗಿದ್ದ ಗುಡಾಕೇಶ್ ಮೋಟಿ ಅವರನ್ನು ಮತ್ತೆ ಕರೆಸಲಾಗಿದೆ.
ಕ್ರೇಗ್ ಬ್ರಾತ್ ವೇಟ್ ಅವರು ತಂಡವನ್ನು ಮುನ್ನಡೆಸುತ್ತಿದ್ದು, ಅಲ್ಜಾರಿ ಜೋಸೆಫ್ ಅವರು ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಜನವರಿ 17ರಂದು ಅಡಿಲೇಡ್ ನಲ್ಲಿ ಮೊದಲ ಪಂದ್ಯ ನಡೆದರೆ, ಜನವರಿ 25ರಂದು ಗಾಬಾದಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಯಲಿದೆ.
ವೆಸ್ಟ್ ಇಂಡೀಸ್ ತಂಡ: ಕ್ರಿಯಾಗ್ ಬ್ರಾಥ್‌ವೈಟ್ (ನಾ), ಟ್ಯಾಗೆನರೈನ್ ಚಂದ್ರಪಾಲ್, ಅಲಿಕ್ ಅಥಾನಾಜೆ, ಕಿರ್ಕ್ ಮೆಕೆಂಜಿ, ಜೋಶುವಾ ಡ ಸಿಲ್ವಾ, ಅಲ್ಜಾರಿ ಜೋಸೆಫ್ (ಉ.ನಾ), ಕೆಮರ್ ರೋಚ್, ಕೆವಿನ್ ಸಿಂಕ್ಲೇರ್, ಕವೆಮ್ ಹಾಡ್ಜ್, ಜಸ್ಟಿನ್ ಗ್ರೀವ್ಸ್, ಅಕೀಮ್ ಜೋರ್ಡಾನ್, ಗುಡಾಕೇಶ್ ಮೋಟಿ, ಟೆವಿನ್ ಇಮ್ಲಾಚ್, ಶಮರ್ ಜೋಸೆಫ್, ಜಕಾರಿ ಮೆಕಾಸ್ಕಿ