ಬೆಂಗಳೂರು: ಯಲಹಂಕದ ಸಮೀಪದ ವಿದ್ಯಾರಣ್ಯಪುರ ಕಡೆ ತೆರಳುವ ರಸ್ತೆಯಲ್ಲಿ ಅಳವಡಿಸಿದ್ದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹೆಸರಿನ ನಾಮಫಲಕ ಧ್ವಂಸಗೊಂಡಿದೆ. ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ ಎಂಬ ವದಂತಿ ಆರಂಭದಲ್ಲಿ ಹಬ್ಬಿತ್ತು. ನಂತರ ಕೆಎಂಎಫ್ ಮದರ್ ಡೈರಿಯ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಸೋಮವಾರ ಬೆಳಗ್ಗೆ ಉನ್ನಿಕೃಷ್ಣನ್ ನಾಮಫಲಕ ಹಾಗೂ ಅದಕ್ಕೆ ನಿರ್ಮಿಸಲಾಗಿದ್ದ ಸಿಮೆಂಟ್ ತಡೆಗೋಡೆ ಧ್ವಂಸಬಾಗಿರುವುದನ್ನು ಗಮನಿಸಿದ ಸ್ಥಳೀಯರು, ಈ ಕುರಿತ ಫೋಟೋಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಲ್ಜರಿಂಗ್ ಹೆಸರಿನ ಟ್ವೀಟರ್ ಅಕೌಂಟ್‌ನಲ್ಲಿ ಫೋಟೋ ಪ್ರಕಟಿಸಿ ಘಟನೆಯನ್ನು ಖಂಡಿಸಿದ್ದಲ್ಲದೆ, ನಾಮಫಲಕ ಧ್ವಂಸಗೊಳಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿತ್ತು.
ಈ ಟ್ವೀಟ್‌ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, ವೀರಮರಣ ಅಪ್ಪಿದ ಯೋಧರಿಗೆ ಸಿಗುವ ಬೆಲೆ ಇದುವೇನಾ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ನಾಮಫಲಕ ಧ್ವಂಸ ಸಂಬಂಧ ಟ್ವಿಟರ್‌ನಲ್ಲಿಯೇ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ, ಈ ಘಟನೆಯಿಂದ ಆಘಾತವಾಗಿದೆ. ಧ್ವಂಸಗೊಂಡಿರುವ ಫಲಕವನ್ನು ಕೂಡಲೆ ಸರಿಪಡಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಿರುವುದಾಗಿ’ ತಿಳಿಸಿದ್ದಾರೆ.
2008ರ ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸ್ಮರಣಾರ್ಥ ಯಲಹಂಕದಲ್ಲಿ ದೊಡ್ಡಬಳ್ಳಾಪುರ ಮುಖ್ಯರಸ್ತೆಯಿಂದ ವಿದ್ಯಾರಣ್ಯಪುರ ಕಡೆ ತೆರಳುವ ದ್ವಿಪಥ ರಸ್ತೆಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಜತೆಗೆ ವೃತ್ತದಲ್ಲಿ ಬಿಬಿಎಂಪಿಯಿಂದ ಕಪ್ಪು ಗ್ರಾನೈಟ್ ಮೇಲೆ ಸಂದೀಪ್ ಅವರ ಫೋಟೋ ಚಿತ್ರಿಸಿ “ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ’ ಎಂದು ಬರೆಯಲಾಗಿತ್ತು.
ಕೆಎಂಎಫ್ ಟ್ಯಾಂಕರ್ ಡಿಕ್ಕಿ: ಭಾನುವಾರ ರಾತ್ರಿ ಕೆಎಂಎಫ್ ಮದರ್ ಡೈರಿಗೆ ಸೇರಿದ ಟ್ಯಾಂಕರ್ ಚಾಲಕ, ಅಜಾಗರೂಕತೆಯಿಂದ ನಾಮಫಲಕಕ್ಕೆ ಡಿಕ್ಕಿ ಹೊಡೆಸಿದ್ದಾನೆ ಎಂದು ಅಲ್ಲಿನ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಅವರೇ ನಾಮ ಫಲಕ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿ, ಕಾಮಗಾರಿ ಆರಂಭಿಸಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ದೂರು ನೀಡಿದರೆ ಪರಿಶೀಲಿಸಿ ವೃತ್ತದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಯಲಹಂಕ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.