Advertisement

‘ಮೇಜರ್‌’ವೀರಯೋಧ ಸಂದೀಪ್‌ ಉನ್ನಿಕೃಷ್ಣನ್‌ ಕುರಿತ ಚಿತ್ರ ; ಇಫಿ ಸೈನಿಕರಿಗೆ ಸಲಾಂ

11:09 PM Nov 27, 2022 | Team Udayavani |

ಪಣಜಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ಎಂದಿಗೂ ನವೆಂಬರ್‌ 26 ರ ದಿನವನ್ನು ಮರೆಯುವುದಿಲ್ಲ. ಹಾಗೆಯೇ ಅಂದಿನ ಘಟನೆಯಲ್ಲಿ ವೀರಾಗ್ರಣಿಗಳಾದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌, ಪೊಲೀಸ್‌ ಅಧಿಕಾರಿಗಳಾದ ಹೇಮಂತ್‌ ಕರ್ಕರೆ, ವಿಜಯ್‌ ಸಲಸ್ಕಾರ್‌ ಅವರನ್ನೂ ಈ ದೇಶ ಮರೆಯುವುದಿಲ್ಲ.ನವೆಂಬರ್‌ 26, 2008 ರಂದು ಮುಂಬಯಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ದಿನ. ಅಂದಿನ ಹೋರಾಟದಲ್ಲಿ ವೀರಸ್ವರ್ಗ ಸೇರಿದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ಜೀವನ ಕುರಿತ “ಮೇಜರ್‌’ ಚಲನಚಿತ್ರ ರವಿವಾರ ಇಫಿ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.

Advertisement

ಈ ಚಿತ್ರವನ್ನು ಶಶಿ ಕಿರಣ್‌ ಟಿಕ್ಕ ನಿರ್ದೇಶಿಸಿದ್ದಾರೆ. ಅದಿವಿ ಶೇಷ್‌, ಸಾಯಿ ಎಂ. ಮಂಜ್ರೇಕರ್‌, ಶೋಭಿತಾ ಧೂಲಿಪಾಲ, ಪ್ರಕಾಶ್‌ರಾಜ್‌, ಮುರಳಿ ಶರ್ಮ ಮತ್ತಿತರರು ಅಭಿನಯಿಸಿದ್ದಾರೆ. ಈ ಘಟನೆ ನಡೆದು ನಿನ್ನೆಗೆ (ನ.26) ಹದಿನಾಲ್ಕು ವರ್ಷ. ಮೇಜರ್‌ ಚಲನಚಿತ್ರ ಪ್ರದರ್ಶನದ ಮೂಲಕ ಮೂವರೂ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿತು ಇಫಿ.

ಸಿನಿಮಾ ಪ್ರದರ್ಶನದ ಬಳಿಕ ನಿರ್ದೇಶಕ ಶಶಿ ಕಿರಣ್‌ ಮಾತನಾಡಿ, ಮೇಜರ್‌ ಸಿನಿಮಾಕ್ಕೆ ಸಾಕಷ್ಟು ಅಧ್ಯಯನ ಮಾಡಲಾಗಿದೆ. ಮೇಜರ್‌ ಸಂದೀಪರ ಪೋಷಕರ ಸಹಕಾರ, ಸೇನೆಯಲ್ಲಿನ ಸ್ನೇಹಿತರ ಸಹಯೋಗ ಅನನ್ಯ. ಮೇಜರ್‌ ರಲ್ಲಿರುವ ವ್ಯಕ್ತಿಯನ್ನು ಹುಡುಕುವ ಪ್ರಯತ್ನ ನನ್ನದು. ನನ್ನ ಅಧ್ಯಯನವೂ ಅದೇ ಹಾದಿಯಲ್ಲಿತ್ತು’ ಎಂದರು.

‘ನನಗೂ ಮತ್ತು ಚಿತ್ರತಂಡಕ್ಕೆ ಅಗ್ನಿ ಪರೀಕ್ಷೆ ಇದ್ದದ್ದು ಸಿನಿಮಾ ನಿರ್ಮಾಣದಲ್ಲಲ್ಲ. ನಿರ್ಮಿತ ಚಿತ್ರವನ್ನು ಮೇಜರ್‌ ಸಂದೀಪರ ಕುಟುಂಬ, ಸ್ನೇಹಿತರಿಗೆ ತೋರಿಸುವುದರಲ್ಲಿ. ಅದರಲ್ಲೂ ಸಂದೀಪರ ಪೋಷಕರಿಗೆ ತೋರಿಸುವಾಗ ಏನು ಹೇಳುತ್ತಾರೆಂಬ ಭಯವಿತ್ತು. ಅವರೇ ಈ ಸಿನಿಮಾದ ಮೊದಲ ಪ್ರೇಕ್ಷಕರು. ಅತ್ಯಂತ ಭಾವುಕ ಗಳಿಗೆಯದು. ಸಿನಿಮಾದ ಬಗ್ಗೆ ಮನದುಂಬಿ ಮಾತನಾಡಿದರು ಎಂದು ವಿವರಿಸಿದರು.

ಚಿತ್ರಕ್ಕೆ ಚಿತ್ರಕಥೆಯನ್ನೂ ಒದಗಿಸಿ ಮೇಜರ್‌ ಸಂದೀಪ್‌ ಪಾತ್ರವನ್ನು ನಿರ್ವಹಿಸಿದ ಅದಿವಿ ಶೇಷ್‌, “ನನ್ನ ಮುಖ ಹಾಗೂ ದೇಹ ಸಂದೀಪರಿಗೆ ಹೋಲಿಕೆಯಾಗುತ್ತಿತ್ತು. ಸಂದೀಪರ ಪೋಷಕರೂ ಸಿನಿಮಾ ನಿರ್ಮಾಣಕ್ಕೆ ಒಪ್ಪಿದಾಗ ಮನಸ್ಸು ತುಂಬಿ ಬಂದಿತು. ಮಹಾನುಭಾವರಿಗೆ ಇದಕ್ಕಿಂತ ದೊಡ್ಡ ಶ್ರದ್ಧಾಂಜಲಿ ಇರದು ಎಂದರು.

Advertisement

‘ಸಿನಿಮಾ ನವೆಂಬರ್‌ 26 ರ ಘಟನೆ ಮೇಲಲ್ಲ. ಬದಲಾಗಿ ಮೇಜರ್‌ ಸಂದೀಪರ ಕುರಿತಾದದ್ದು. ಅವರ ಬದುಕೇ ಕಥಾವಸ್ತು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಶಿ ಕಿರಣ್‌, ಮುಂಬಯಿ ಘಟನೆ ಹಿನ್ನೆಲೆಯಲ್ಲಿ ಸಿನಿಮಾವೊಂದು ಎನ್‌ಎಸ್‌ ಐ ಕಮಾಂಡೋಗಳು ಘಟನೆಯ ಕೊನೆಗೆ ಬಂದವರಂತೆ ಬಿಂಬಿಸಿತ್ತು. ಇದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next