Advertisement

ವಿಶ್ವ ಚಿತ್ರ ಸಂತೆ…ಚಿಲ್ಡ್ರನ್‌ ಆಫ್‌ ಹೆವನ್‌: ಅಣ್ಣನ ಕಣ್ಣಿನಲ್ಲಿ ತಂಗಿಯ ಕನಸು

05:00 PM Nov 24, 2020 | Nagendra Trasi |

*ಮಧುವಂತಿ 

Advertisement

ಮಜಿದ್‌ ಮಜಿದಿ ಇರಾನ್‌ ನ ಸಿನಿಮಾ ನಿರ್ದೇಶಕ. ಜಗತ್ತಿನ ಕೆಲವು ಅತ್ಯುತ್ತಮ ಕುಸುರಿ ಕಲೆಯ ಚಿತ್ರ ನಿರ್ದೇಶಕರಲ್ಲಿ ಒಬ್ಬ. ಅದರಲ್ಲೂ ಭಾವಕೋಶವನ್ನು ತಟ್ಟುವ ನಿರ್ದೇಶಕ.

ಸಣ್ಣ ಘಟನೆಗಳನ್ನೇ ಎತ್ತಿಕೊಂಡು ಅದಕ್ಕೆ ಚೆಂದದ ಕುಸುರಿ ಕಲೆಯ ಕೌದಿ ಹೊದಿಸಿ, ಸೊಗಸನ್ನು ಹೆಚ್ಚಿಸುವವ ಅವನು. ಆ ಘಟನೆಗಳು ನಮ್ಮೆದುರಿಗೇ ನಡೆದಿರುವಂಥದ್ದೂ ಆಗಿರಬಹುದು. ಆದರೆ, ಅವನ ಚಿತ್ರಪಟದಲ್ಲಿ ಕಂಡರೆ ಹೊಸದಾಗಿಯೇ ಹೊಳೆಯುತ್ತದೆ. ಅವನ ಅತ್ಯಂತ ಕೆಲವು ಹೆಸರಾಂತ ಸಿನಿಮಾಗಳೆಂದರೆ ’ಚಿಲ್ಡ್ರನ್‌ ಆಫ್‌ ಹೆವೆನ್‌‘, ‘ಕಲರ್‌ ಆಫ್‌ ಪ್ಯಾರಡೈಸ್‌‘, ‘ಸಾಂಗ್‌ ಆಫ್‌ ದಿ ಸ್ಪ್ಯಾರೋ‘ ಇತ್ಯಾದಿ. ಅದರಲ್ಲೂ ಮೊದಲೆರಡು ಚಿತ್ರಗಳು ಬಹಳ ಹಳೆಯವು. ಆದರೆ ಇಂದಿಗೂ ಅದೇ ಹೊಸತನವನ್ನು ಕಾದುಕೊಂಡಿರುವಂಥವು.

ತೀರಾ ಮಕ್ಕಳ ಚಿತ್ರವೆಂದೆನಿಸುವ ಕಥಾವಸ್ತುವನ್ನು ಇಟ್ಟುಕೊಂಡೂ ಎಲ್ಲರ ಭಾವಾಕಾಶವನ್ನು ತಟ್ಟಿಬಿಡುವ ಚಿತ್ರಗಳಿವು. ಸಾಂಗ್‌ ಆಫ್‌ ದಿ ಸ್ಪ್ಯಾರೋ ಮತ್ತೊಂದು ನೆಲೆಯ ಚಿತ್ರ. ಸಾಮಾನ್ಯವಾಗಿ ವಿಶ್ವ ಚಿತ್ರ ಪರಂಪರೆಯನ್ನು ಪ್ರವೇಶಿಸುವ [ಕಳೆದರಡು ದಶಕಗಳ ಮಂದಿ] ಬಹಳಷ್ಟು ಮಂದಿ ಈ ಚಿತ್ರಗಳ ಹಾದಿಯಲ್ಲೇ ನಡೆದು ಬಂದಿರುತ್ತಾರೆ. ಆ ರೀತಿ ಶಿಫಾರಸು ಮಾಡುವ ಚಿತ್ರಗಳಿವು, ಬಹಳ ವಿಶೇಷವಾಗಿ ಚಿಲ್ಡ್ರನ್‌ ಆಫ್‌ ಹೆವೆನ್‌ ಮತ್ತು ಕಲರ್‌ ಆಫ್‌ ಪ್ಯಾರಡೈಸ್‌.

Advertisement

ಮೊದಲೇ ಹೇಳಿದಂತೆ ಮನುಷ್ಯ ಸಂಬಂಧಗಳಲ್ಲಿನ ಸೂಕ್ಷ್ಮತೆ, ನಾಜೂಕುತನವನ್ನು ಇರಾನಿ ನಿರ್ದೇಶಕರು ಅತ್ಯಂತ ನಯವಾಗಿ, ಸೊಗಸಾಗಿ ಕಟ್ಟಿಕೊಡಬಲ್ಲರು. ಅದರಲ್ಲೂ ಮಕ್ಕಳ ಮುಗ್ಧ ಭಾವನೆಗಳಲ್ಲಿನ ಹೂಗಳಂಥ ಕೋಮಲತೆಯನ್ನು ಹಾಗೆಯೇ ತಾಜಾ ತಾಜಾ ಆಗಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ.

ಚಿಲ್ಡ್ರನ್‌ ಆಫ್‌ ಹೆವನ್‌ ಕುರಿತಾದ ಬರಹವಿದು. ಈ ಚಿತ್ರದಲ್ಲಿ ಎಲ್ಲೆಲ್ಲೂ ಕಾಣುವುದು ಆ ಸೊಬಗು. ಮನುಷ್ಯ ಸಂಬಂಧಗಳ ನಿರ್ವಹಣೆ. ಅದ್ರಲ್ಲೂ ನಿರ್ದೇಶಕ ತೋರಿದ ನಾಜೂಕುತನ. ಇದನ್ನು ಪುಷ್ಟೀಕರಿಸುವಂಥ ಎಷ್ಟೊಂದು ದೃಶ್ಯಗಳು ಬೇಕು ಆ ಚಿತ್ರದಲ್ಲಿ. ಪ್ರತಿ ಕ್ಷಣದಲ್ಲೂ ಆ ಕಾಳಜಿಯೇ ಇಡೀ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಅಂಥ ಕೆಲವು ಸನ್ನಿವೇಶಗಳನ್ನು ಹೇಳುತ್ತೇನೆ. ಇಲ್ಲಿ ಜಹ್ರಾ ಎಂದರೆ ಶುಭ್ರ, ಹೂವ ಎಂದೆಲ್ಲಾ ಅರ್ಥವಿದೆ. ಇವು ಸ್ವರ್ಗದ ಹೂವುಗಳೇ !

ಮೊದಲಿಗೆ ಅಲಿ (ಅಣ್ಣ)ಯ ಮನೆಯಲ್ಲಿ ಟೀ ಗೆ ಸಕ್ಕರೆ ಇರೋದಿಲ್ಲ. ಅವನಪ್ಪ ಮಸೀದಿಯಲ್ಲಿ ಟೀ ಸರಬರಾಜು ಮಾಡುವವ. ಅದಕ್ಕೆ ಮನೆಯಲ್ಲಿ ಕುಳಿತು ಸಕ್ಕರೆ ಪುಡಿ ಮಾಡುತ್ತಿರುತ್ತಾನೆ. ಆಗ ಅಲಿಯ ತಂಗಿ ಜಹ್ರಾ, ಈ ಸಕ್ಕರೆ ಇದೆಯಲ್ಲಾ ಎಂದು ಅಪ್ಪನಿಗೆ ಕೇಳುತ್ತಾಳೆ. ಆಗ ಅಪ್ಪ “ಇದು ಮಸೀದಿಯದ್ದು, ಹಾಗೆ ಬಳಸುವಂತಿಲ್ಲ’ ಎಂದು ಹೇಳುತ್ತಾನೆ. ಇದು ಪವಿತ್ರತೆ ಇತ್ಯಾದಿಗಿಂತಲೂ ಪ್ರಾಮಾಣಿಕತೆಯನ್ನು ಅನಾವರಣಗೊಳಿಸುವ ಸನ್ನಿವೇಶ.

ಎರಡನೇ ಸನ್ನಿವೇಶದಲ್ಲಿ ತಾನು ಕಳೆದುಕೊಂಡ ಷೂ ತನ್ನ ಸಹಪಾಠಿಯೊಬ್ಬಳಲ್ಲಿ ಇದೆ ಎಂದು ಜಹ್ರಾಳಿಗೆ ತಿಳಿಯುತ್ತದೆ. ಜಹ್ರಾಳಲ್ಲಿ ಒಂದು ಬಗೆಯ ಸಿಟ್ಟು ಬರಿಸಿರುತ್ತೆ. ಆದರೆ ಒಮ್ಮೆ ಅಣ್ಣ ತಂದುಕೊಟ್ಟ ಮುದ್ದಿನ ಪೆನ್ನನ್ನು ಜಹ್ರಾ ತರುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಬಿಟ್ಟಿರುತ್ತಾಳೆ. ಅವಳ ಹಿಂದೆಯೇ ಬರುವ ಅವಳ ಸಹಪಾಠಿ ಹುಡುಗಿ ಅದನ್ನು ಎತ್ತಿಕೊಂಡು ಮರುದಿನ ಅವಳಿಗೆ ನೀಡುತ್ತಾಳೆ. ಆಗ ಜಹ್ರಾ ಅವಳನ್ನು ವಿಶ್ವಾಸದಿಂದ ನೋಡುವ ಬಗೆಯೇ ಅನನ್ಯ. ಇದೊಂದು ದೃಶ್ಯದಲ್ಲಿ ಇಬ್ಬರೊಳಗೂ ಕ್ಷೀಣಿಸಬಹುದಾದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾನೆ. ಅಂದಿನಿಂದ ಅವಳ ಬಗ್ಗೆ ಜಹ್ರಾ ಏನೂ ಅಂದುಕೊಳ್ಳುವುದಿಲ್ಲ.

ಇಂಥದ್ದೇ ಇನ್ನೊಂದು ಸನ್ನಿವೇಶ ಹೇಳುತ್ತೇನೆ. ಅಲಿ ಚೆನ್ನಾಗಿ ಅಂಕ ಗಳಿಸಿದ್ದಕ್ಕೆ ಅವನ ಮೇಸ್ಟ್ರು ಒಂದು ಚೆನ್ನಾದ ಪೆನ್ನನ್ನು ಉಡುಗೊರೆಯಾಗಿ ಕೊಟ್ಟಿರುತ್ತಾರೆ. ಶಾಲೆಯಿಂದ ಬರುವಾಗ ಪಕ್ಕದ ಮನೆಗೆ ಹೋಗ್ತಾ ಇದ್ದ ಜಹ್ರಾ ಸಿಗುತ್ತಾಳೆ ರಸ್ತೆಯಲ್ಲಿ. ಅಲಿ, ತಗೊಳೆ ತಂಗಿ ಈ ಪೆನ್ನು ನಿನಗೆ ಎಂದು ತನ್ನ ಹೊಸ ಪೆನ್ನನ್ನು ಕೊಡುತ್ತಾನೆ. ಆಕೆಗೆ ನಂಬಿಕೆ ಬರುವುದಿಲ್ಲ. ಆ ಪೆನ್ನನ್ನು ಕೈಯಲ್ಲಿಟ್ಟುಕೊಂಡು ನೋಡಿ “ಚೆನ್ನಾಗಿದೆಯಲ್ಲೋ’ ಎನ್ನುತ್ತಾಳೆ. ಆಗ ಅಣ್ಣ ಅಲಿ “ಅದು ನಿನಗೇ’ ಎಂದಾಗ ಅಚ್ಚರಿ ಮತ್ತು ಆನಂದದಿಂದ “ನನಗಾ, ನನ್ನನನ್ಗಾ’ ಎಂದು ಕೇಳುತ್ತಾಳೆ. ಆಗ ಅಲಿ, “ಹೌದೇ, ನಿನಗೇ’ ಎಂದಾಗ ಅವಳ ಮುಖದಲ್ಲಿ ನಗೆ ನದಿಯಲ್ಲಿ ಚಿಕ್ಕದೊಂದು ಗಾಳಿ ಹೊರಡಿಸುವ ತರಂಗದಂತೆ ಅರಳುತ್ತದೆ. ಜತೆಗೆ, “ಅಣ್ಣಾ, ನಾನು ಅಪ್ಪನ ಬಳಿ (ಷೂ ಕಳೆದದ್ದನ್ನು) ಹೇಳುವುದಿಲ್ಲ’ ಎಂದು ಹೇಳುತ್ತಾಳೆ. ಆಗ ಅಣ್ಣ ಹೇಳುವ ವಿಶ್ವಾಸದ ಮಾತು “ನನಗೆ ಗೊತ್ತು ಕಣೆ. ನೀನು ಹಾಗೆ ಹೇಳುವುದಿಲ್ಲ’ ಎಂದು ಹೇಳಿ ಮನೆಗೆ ಹೋಗುತ್ತಾನೆ. ಇದು ಸಂಬಂಧಗಳ ನಿರ್ವಹಣೆ.

ಅಪ್ಪನೊಂದಿಗೆ ಹೊಸ ಕೆಲಸ ಹುಡುಕಿಕೊಂಡು ಬಂದವನಿಗೆ ಕೆಲಸ ಸಿಗುವುದು ಅಂಥದೊಂದು ಸಂಬಂಧದ ಎಳೆಯಿಂದಲೇ. ಅಪ್ಪ-ಅಮ್ಮನಿಲ್ಲದೇ ಅಜ್ಜನೊಂದಿಗೆ ಬದುಕುವ ತಬ್ಬಲಿ ಮಗು ಮತ್ತು ಇವನೊಡನೆ ಸಂಬಂಧ ಬೆಳೆಯುವಂಥದ್ದು.”ನಿಮ್ಮ ಮನೆ ತೋಟದಲ್ಲಿ ಕೆಲಸವಿದೆಯೇ?’ ಎಂದು ಕೇಳುವಾಗ ಅತ್ತಲಿಂದ ಬಾಗಿಲ ಒಳಗಿಂಡಿಯಿಂದಲೇ ಆ ಮಗು “ನೀನ್ಯಾರು, ನಿನ್ನ ಹೆಸರೇನು, ಎಷ್ಟನೇ ಕ್ಲಾಸು’ ಹೀಗೆಲ್ಲಾ ಕೇಳಿ ಪರಿಚಯಿಸಿಕೊಳ್ಳುತ್ತದೆ. ನಂತರ ಅಪ್ಪ ಕೆಲಸ ಮಾಡುವಾಗ ಅಲಿ ಆ ಮಗುವಿನೊಂದಿಗೆ ಆಟವಾಡುತ್ತಾನೆ. ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ಮಧ್ಯೆ ಏರ್ಪಡುವ ಸಂಬಂಧ ಸೂಕ್ಷ್ಮ. ಮಲಗಿದ ಆ ಮಗುವನ್ನು ಬಿಟ್ಟು ಹೋಗುವಾಗ ಅವನೊಳಗೆ ಆವರಿಸಿಕೊಳ್ಳುವ ವಿಷಾದವನ್ನೂ ಮುಖದ ಭಾವ ಹೇಳುತ್ತದೆ. ಈ ಮೂಲಕ ನಗರದ ಸಂಬಂಧಗಳ ನೆಲೆಯನ್ನೂ ಅನಾವರಣಗೊಳಿಸುತ್ತಾನೆ.

ಹೀಗೆ ಮನುಷ್ಯ ಸಂಬಂಧಗಳ ನಿರ್ವಹಣೆ ಕುರಿತೇ ಬರೆಯಲು ಬಹಳಷ್ಟಿದೆ. ಇಡೀ ಚಿತ್ರದಲ್ಲಿ ಅಣ್ಣ-ತಂಗಿಯರಿಬ್ಬರನ್ನೇ ಇಟ್ಟುಕೊಂಡು ಒಂದು ಸುಂದರವಾದ ಕಥೆ ಹೆಣೆಯುವ ಮಜಿದ್ ಮಜ್ದಿ ಎಷ್ಟು ಅದ್ಭುತವಾದ ನಿರ್ದೇಶಕ ಎನಿಸಿ ಬಿಡುತ್ತಾನೆ. ಪ್ರತಿ ಚಿತ್ರದಲ್ಲೂ ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನೇ ಹೇಳುತ್ತಾ, ಅದನ್ನು ಹಾಗೆಯೇ ಗಟ್ಟಿಗೊಳಿಸುವ ಬಗೆಗೆ ಕೃತಜ್ಞತೆ ಹೇಳಲೇಬೇಕು. ಪ್ರತಿ ಸನ್ನಿವೇಶಗಳಲ್ಲೂ ಅದನ್ನೇ “ಕೇಂದ್ರೀಕರಿಸುತ್ತಾ’ ಎಲ್ಲಿಯೂ ಅದು ಭಾರ ಅಥವಾ ರೇಜಿಗೆ ಹುಟ್ಟಿಸದಂತೆ ಎಚ್ಚರ ವಹಿಸುವುದು ಈ ನಿರ್ದೇಶಕನ ವಿಶೇಷತೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಅಣ್ಣ-ತಂಗಿಯಂಥ ಸೂಕ್ಷ್ಮ ಸಂಬಂಧದ ಪೋಟ್ರೈಟ್ ಇದು.

ವಿಷಾದವೆಂಬುದು ಬರೀ ಯಾಂತ್ರಿಕ ನೆಲೆಯ ‘ಪ್ಚ್‌’ ಎಂಬ ಭಾವ ಹೊರಡಿಸಬಾರದು, ಅದರ ಬದಲಾಗಿ ನಮ್ಮ ಭಾವಕೋಶವನ್ನು ತಟ್ಟಿ, ಆವರಿಸಿಕೊಳ್ಳಬೇಕು. ಅದು ಕೊಂಚ ಕಷ್ಟ. ಆ ಸಾಧ್ಯತೆ ಇರಾನಿನ ಚಿತ್ರಗಳಲ್ಲಿ ಆಗಾಗ್ಗೆ ಕಂಡು ಬರುವುದುಂಟು.

Advertisement

Udayavani is now on Telegram. Click here to join our channel and stay updated with the latest news.

Next