Advertisement

ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಾಯಕಲ್ಪ

12:44 AM Mar 02, 2020 | Lakshmi GovindaRaj |

ಟಿ.ದಾಸರಹಳ್ಳಿ: ಸರ್‌ ಎಂ.ವಿಶ್ವೇಶ್ವರಯ್ಯ ಅವರ ಮುಂದಾಳತ್ವದಲ್ಲಿ ನಿರ್ಮಾಣಗೊಂಡು ಈ ಹಿಂದೆ ನಗರಕ್ಕೆ ನೀರುಣಿಸುತ್ತಿದ್ದ ಮಾಗಡಿ ಮುಖ್ಯ ರಸ್ತೆಯ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಶುಕ್ರದೆಸೆ ಶುರುವಾಗಿದೆ. (ಚಾಮರಾಜಸಾಗರ ಅಣೆಕಟ್ಟೆ) ರಾಸಾಯನಿಕ ನೀರು ಮತ್ತು ತ್ಯಾಜ್ಯದಿಂದ ಹದಗೆಟ್ಟ ಪರಿಣಾಮ 2012ರಿಂದ ನೀರು ಪೂರೈಕೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರ, ಸಮ್ಮಿಶ್ರ ಸರ್ಕಾರದ ವೇಳೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಯಿತು.

Advertisement

ಮೊದಲ ಹಂತದ ಪುನಶ್ಚೇತನ ಕಾಮಗಾರಿ ಭರದಿಂದ ಸಾಗಿದ್ದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಬೃಹತ್‌ ಯೋಜನೆ ಕೈಗೆತ್ತಿಕೊಂಡಿದೆ. 2019 ಮಾರ್ಚ್‌ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭವಾ ಗಿದ್ದು ಸೆಪ್ಟೆಂಬರ್‌ 2021ಕ್ಕೆ ಮುಕ್ತಾಯವಾಗಲಿದೆ.

ಮಳೆ ನೀರು ಶೇಖರಣೆ ಜತೆಗೆ ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವ 1.7 ಟಿಎಂಸಿ ನೀರನ್ನು ಸಂಗ್ರಹಿಸಿ ನಗರಕ್ಕೆ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಎರಡು ಹಂತಗಳಲ್ಲಿ ನಿರ್ವಹಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ, ನೀರು ಶುದ್ಧೀಕರಣ ಘಟಕ, ಜಲಾಶಯ ಶುದ್ಧೀಕರಣ ಕಾರ್ಯ, ಹೊಸ ಕೊಳವೆ ಅಳವಡಿಕೆ ಕಾರ್ಯ ಒಳಗೊಂಡಿವೆ.

ಜಲಮಂಡಳಿ, ರಾಜ್ಯ ಸರ್ಕಾರದ ಪಾಲು ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಾಗಿದೆ. ನಿರ್ಮಾಣ, ನಿರ್ವಹಣಾ ವೆಚ್ಚ ಸೇರಿ 291.57 ಕೋಟಿ ರೂ. ಆಗಲಿದ್ದು ಮೂವತ್ತು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಲಮಂಡಳಿ ಹಿರಿಯ ಅಧಿಕಾರಿ ಮಾಹಿತಿ ನೀಡಿದರು. ಟಾಟಾ ಕನ್ಸಲ್ಟಿಂಗ್‌ ಎಂಜಿ ನಿಯರಿಂಗ್‌ ಇದರ ಸಲಹೆಗಾರನಾಗಿ ಕಾರ್ಯ ನಿರ್ವಹಿ ಸುತ್ತಿದ್ದು ಮೇಘ ಎಂಜಿನಿಯರಿಂಗ್‌ ಆ್ಯಂಡ್‌ ಇನ್ಫ್ರಾಸ್ಟಕ್ಚರ್‌ ಲಿಮಿಟೆಡ್‌ ಪುನಶ್ಚೇತನ ಕಾಮಗಾರಿ ನಿರ್ವಹಿಸುತ್ತಿದೆ.

ತಿಪ್ಪಗೊಂಡನಹಳ್ಳಿ ಅಣೆಕಟ್ಟೆಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳು
20-30 ಎಂಎಲ್‌ ಡಿ (ದಶಲಕ್ಷ) ಸಾಮರ್ಥ್ಯದ ನೀರು ಸಂಸ್ಕರಣಾ ಘಟಕ: ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ತ್ಯಾಜ್ಯ ನೀರು ಹರಿದು ಬರದಂತೆ ತಡೆಗಟ್ಟಲು ಮಾಗಡಿ ಮುಖ್ಯರಸ್ತೆಯ ನಾಗೇನಹಳ್ಳಿ ಸಮೀಪದ ಚನ್ನಮಾರಯ್ಯನ ಪಾಳ್ಯದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಶೇ.40 ಕೆಲಸ ಮುಗಿದಿದೆ. ಪೀಣ್ಯ ಕೈಗಾರಿಕಾ ಪ್ರದೇಶ ಇತ್ಯಾದಿ ಕಡೆಗಳಿಂದ ಬರುವ 20 ರಿಂದ 30 ದಶಲಕ್ಷ ಲೀಟರ್‌ ಕೊಳಚೆ ನೀರನ್ನು ಪ್ರತಿದಿನ ಸಂಸ್ಕರಿಸಿ ನಂತರ ಜಲಾಶಯಕ್ಕೆ ಹರಿಸಲು ಎಸ್‌ಟಿಪಿ ನಿರ್ಮಾಣವಾಗುತ್ತಿದೆ.

Advertisement

110 ದಶಲಕ್ಷ ಲೀಟರ್‌ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ: ಜಲಾಶಯದ ಸಮೀಪ 110 ದಶಲಕ್ಷ ಲೀಟರ್‌ (ಪ್ರತಿದಿನ) ನೀರು ಶುದ್ಧೀಕರಿಸುವ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶೇ.15 ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಬಾರಿಗೆ ಉನ್ನತ ತಂತ್ರಜ್ಞಾನದ ಓಜೊನೈಜೇಶನ್‌ ಮತ್ತು ಗ್ರಾನುಲರ್‌ ಆಕ್ಟಿವೇಟೆಡ್‌ ಕಾರ್ಬನ್‌ ಫಿಲ್ಟರ್ಸ್‌ ಮೂಲಕ ನೀರನ್ನು ಪರಿಣಾಮಕಾರಿಯಾಗಿ ಶುದ್ಧೀಕರಿಸುವ ಘಟಕ ಇದಾಗಿದೆ.

ತಿಪ್ಪಗೊಂಡನಹಳ್ಳಿ ಯಿಂದ ಬೆಂಗಳೂರಿಗೆ 22 ಕಿ.ಮೀ. ಪೈಪ್‌ ಅಳವಡಿಕೆ: ತಿಪ್ಪಗೊಂಡನಹಳ್ಳಿಯಿಂದ ತಾವರೆಕೆರೆ ಮೂಲಕ ಬೆಂಗಳೂರಿಗೆ ನೀರು ಪೂರೈಕೆ ಆರಂಭಗೊಳ್ಳಲಿದೆ. ಹಳೆ ಕೊಳವೆಗಳನ್ನು ಬದಲಾಯಿಸಿ ಹೊಸ ಉಕ್ಕಿನ ಮೆದು ಕೊಳವೆಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೇ.40 ಮುಗಿದಿದೆ. ಜಲಾಶಯದಿಂದ 22 ಕಿ.ಮೀ. ದೂರ ಪೈಪ್‌ ಅಳವಡಿಸಿದ್ದು, ಈಗಾಗಲೇ 4 ಕಿ.ಮೀ ಮುಕ್ತಾಯಗೊಂಡಿದೆ

ಅಪಾಯಕಾರಿ ಬ್ಯಾಕ್ಟೀರಿಯಾ, ಸೂಕ್ಷ್ಮಾಣು ನಾಶಪಡಿಸುವ ಶುದ್ಧೀಕರಣ ಕಾರ್ಯ: ಜಲಾಶಯದ ಹೂಳನ್ನು ನೂತನ ತಂತ್ರಜ್ಞಾನ ವಿಧಾನದ ಮೂಲಕ ಹೊರ ತೆಗೆಯಲಾಗುತ್ತಿದೆ. ಜಲಾಶಯದಲ್ಲಿ ಸಂಗ್ರಹವಾಗಿರುವ ಸುಮಾರು 0.8 ಟಿಎಂಸಿ ನೀರನ್ನು ಹಾಗೆಯೇ ಉಳಿಸಿಕೊಂಡು ಅದರಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾ ಹಾಗೂ ಸೂಕ್ಷ್ಮಾಣು ಜೀವಿಗಳನ್ನು ಮಾತ್ರ ನಾಶಪಡಿಸಲಾಗುತ್ತಿದೆ. ಇದರಿಂದ ಸುಮಾರು 10-15 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸ್ಥಿರವಾಗಿರುತ್ತದೆ. ಕೊಳವೆ ಬಾವಿಗಳಲ್ಲಿ ನೀರೂ ಲಭ್ಯವಿರುತ್ತದೆ. ಜಲಾಶಯವನ್ನು ಆಶ್ರಯಿಸಿರುವ ಪ್ರಾಣಿ ಪಕ್ಷಿ ಹಾಗೂ ಜಲಚರಗಳಿಗೆ ತೊಂದರೆಯಾಗುವುದಿಲ್ಲ ಎಂದು ಜಲಮಂಡಳಿ ಎಂಜಿನಿಯರ್‌ ವಿವರಿಸಿದರು.

ಜಲಾಶಯದಲ್ಲಿ ಬೆಳೆದ ಕಳೆ ತೆಗೆಯಲು ಕ್ರಮ: ಡ್ರೋಸಿಂಗ್‌ ಯಂತ್ರ ಬಳಸಿ 1.30 ಲಕ್ಷ ಘನ ಮೀಟರ್‌ ಆಳದಿಂದ ರಾಸಾಯನಿಕಯುಕ್ತ ಘನ ಹಾಗೂ ದ್ರವರೂಪದ ಹೂಳನ್ನು ಎಳೆದುಕೊಂಡು ಕೊಳದಲ್ಲಿ ಬಿಡುವ ಮೂಲಕ ತಿಳಿ ನೀರು ಮೇಲೆ ತೇಲಿ ಮತ್ತೆ ಜಲಾಶಯಕ್ಕೆ ಸೇರುವಂತೆ ಹಾಗೂ ರಾಸಾಯನಿಕಯುಕ್ತ ತ್ಯಾಜ್ಯ ಕೊಳದ ತಳದಲ್ಲಿ ಶೇಖರಣೆಯಾಗುತ್ತದೆ. ನಂತರ ಇದನ್ನು ಜಲಾಶಯದಿಂದ ಹೊರಕ್ಕೆ ವಿಲೇವಾರಿ ಮಾಡುವ ಕೆಲಸ ನಡೆಯುತ್ತಿದೆ. ನೀರು ಹಾಗೂ ತ್ಯಾಜ್ಯವನ್ನು ಬೇರ್ಪಡಿಸುವ ಉದ್ದೇಶಕ್ಕಾಗಿ ಜಲಾಶಯದ ದಡದಲ್ಲಿ 4 ಕೊಳಗಳನ್ನು ನಿರ್ಮಾಣ ಮಾಡಲಾಗಿದೆ. ಜಲಾಶಯವನ್ನು ಆವರಿಸಿರುವ ಕಳೆಯನ್ನೂ ಸಂಪೂರ್ಣವಾಗಿ ತೆಗೆಯಲಾಗುತ್ತಿದೆ,

10 ಲಕ್ಷ ಜನತೆಗೆ ನೀರು ಪೂರೈಕೆ: ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರು ಪಶ್ಚಿಮ ಹಾಗೂ ವಾಯುವ್ಯ ಪ್ರದೇಶಗಳಿಗೆ ನೀರನ್ನು ಪೂರೈಸಲಾಗುವುದು. ದಾಸರಹಳ್ಳಿ, ಅಂದ್ರಹಳ್ಳಿ , ಲಿಂಗಧೀರನಹಳ್ಳಿ ವಿಶ್ವೇಶ್ವರಯ್ಯ ಬಡಾವಣೆ ಸೇರಿ ವಿವಿಧ ಬಡಾವಣೆಗಳಲ್ಲಿ ವಾಸವಿರುವ ಸುಮಾರು ಹತ್ತು ಲಕ್ಷ ಜನರಿಗೆ ಪ್ರತಿದಿನ 11 ಕೋಟಿ ಲೀಟರ್‌ ನೀರು ಒದಗಿಸಲು ಯೋಜನೆ ಇದಾಗಿದೆ.

ತಿಪ್ಪಗೊಂಡನಹಳ್ಳಿ ಜಲಾಶಯ ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿರುವುದರಿಂದ ವಿಧಾನಸಭೆ ಒಳಗೆ ಹಾಗೂ ಹೊರಗೆ ಇದರ ಪುನಶ್ಚೇತನ ಕಾರ್ಯ ಕೈಗೊಳ್ಳುವಂತೆ ಸಾಕಷ್ಟು ಹೋರಾಟ ನಡೆಸಿದ್ದೆ. ಜತೆಗೆ ಹಲವು ಜನಪ್ರತಿನಿಧಿಗಳು ಸಂಘ -ಸಂಸ್ಥೆಗಳು ನನ್ನೊಟ್ಟಿಗೆ ಕೈಜೋಡಿಸಿದ್ದರ ಫಲವಾಗಿ ಕಾಮಗಾರಿ ಪ್ರಗತಿಯಲ್ಲಿದೆ
-ಎಸ್‌.ಟಿ.ಸೋಮಶೇಖರ್‌, ಸಹಕಾರ ಸಚಿವರು

* ಶ್ರೀನಿವಾಸ್‌ ಅಣ್ಣಯ್ಯಪ್ಪ

Advertisement

Udayavani is now on Telegram. Click here to join our channel and stay updated with the latest news.

Next