ವೇಣೂರು: ರಾಜ್ಯಹೆದ್ದಾರಿ ಹಾದು ಹೋಗುವ ಅಳದಂಗಡಿ ಪೇಟೆಯಲ್ಲಿ ಚರಂಡಿಗಳಿದ್ದರೂ ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿವೆ. ಇಲ್ಲಿನ ಚರಂಡಿಗಳಲ್ಲಿ ಮಳೆ ನೀರಿನೊಂದಿಗೆ ಬಂದ ಮಣ್ಣು, ಕಸಕಡ್ಡಿ, ಒಣಎಲೆ ತ್ಯಾಜ್ಯಗಳಿಂದ ಮುಖ್ಯ ಪೇಟೆಯಲ್ಲಿನ ಚರಂಡಿ, ಮೋರಿಗಳು ಬ್ಲಾಕ್ ಆಗಿವೆ. ವಿಶಾಲವಾದ ಪೇಟೆಗಿರುವ ಚರಂಡಿಯನ್ನು ಮಳೆಗಾಲದ ಮುನ್ನ ನಿರ್ವಹಣೆ ಮಾಡಬೇಕೆಂಬ ಆಗ್ರಹ ಇಲ್ಲಿನ ನಾಗರಿಕರದ್ದು.
ಸ್ಲ್ಯಾಬ್‌ಗಳಿಲ್ಲದೆ ಅಪಾಯ
ಅಳದಂಗಡಿಯ ಹೆಚ್ಚಿನ ಭಾಗಗಳಲ್ಲಿ ಕಾಂಕ್ರೀಟ್ ಚರಂಡಿಗಳಿದ್ದು, ಪೇಟೆಯ ಅಂದವನ್ನು ಹೆಚ್ಚಿಸಿವೆ. ಆದರೆ ಸ್ಲ್ಯಾಬ್‌ಗಳಿಲ್ಲದೆ ಅಲ್ಲಲ್ಲಿ ತೆರೆದುಕೊಂಡ ಚರಂಡಿಗಳು ಅಪಾಯ ತಂದೊಡ್ಡಿವೆ. ಒಂದೆಡೆ ಬಸ್ ನಿಲ್ದಾಣ, ಪಕ್ಕದಲ್ಲಿ ರಾಜ್ಯಹೆದ್ದಾರಿ. ಸ್ಲ್ಯಾಬ್ ಇಲ್ಲದ ಚರಂಡಿಗಳನ್ನು ದಾಟಿ ಪಾದಾಚಾರಿಗಳು ಆಚಿಂದೀಚೆ ತೆರಳುತ್ತಿದ್ದು, ಅಪಾಯ ತಂದೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಶಾಲಾ ಕಾಲೇಜುಗಳಿಗೆ ನೂರಾರು ಮಂದಿ ವಿದ್ಯಾರ್ಥಿಗಳು ಇದೇ ನಗರ ಭಾಗದಲ್ಲಿ ತೆರಳು ತ್ತಿದ್ದು, ಅವರಿಗೂ ತೆರೆದ ಚರಂಡಿ ಅಪಾಯ ತಂದೊಡ್ಡಿವೆ. ಅಳದಂಗಡಿ ದೈವಸ್ಥಾನದ ಬಳಿ ತೆರೆದ ಕಾಂಕ್ರಿಟ್ ಚರಂಡಿಗಳಿಗೂ ಸ್ಲ್ಯಾಬ್ ಅಳವಡಿಸುವ ಕಾರ್ಯ ಆಗಬೇಕಿದೆ.
ಗಿಡಗಂಟಿಗಳಿಂದ ತೊಡಕು
ಅಳದಂಗಡಿ ಮುಖ್ಯಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ತಿರುವಿನ ರಸ್ತೆಯಲ್ಲಿನ ಮೋರಿ ತ್ಯಾಜ್ಯ ತುಂಬಿ ಬ್ಲಾಕ್ ಆಗಿದೆ. ಪಿಲ್ಯ ಮುಖ್ಯರಸ್ತೆಯ ಜನವಸತಿ ಪ್ರದೇಶದಲ್ಲೂ ಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ. ಇಲ್ಲಿ ಚರಂಡಿ ನೀರು ಹೆದ್ದಾರಿಯಲ್ಲಿ ಹರಿಯುವಂತಾಗಿದ್ದು, ಇದನ್ನು ಸರಿಪಡಿಸುವ ಮೂಲಕ ರಸ್ತೆಯ ಡಾಮಾರು ಹಾಳಾಗುವುದನ್ನು ತಪ್ಪಿಸಬೇಕಿದೆ. ಅಳದಂಗಡಿಯ ಕೆದ್ದು ಪರಿಸರದಲ್ಲಿ ಹಳೆಯ ಮೋರಿಗಳನ್ನು ಚರಂಡಿಯಲ್ಲಿ ಅಡ್ಡವಾಗಿ ಇಡಲಾಗಿದ್ದು, ನೀರು ಸರಾಗವಾಗಿ ಹರಿದುಹೋಗಲು ತೊಡಕಾಗಿದೆ.