Advertisement

ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿ: ಶಾಸಕ

08:44 PM Jan 13, 2020 | Lakshmi GovindaRaj |

ಶಿಡ್ಲಘಟ್ಟ: ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಶಾಸಕ ವಿ.ಮುನಿಯಪ್ಪ ಸೂಚಿಸಿದರು. ತಾಲೂಕಿನ ಈ.ತಿಮ್ಮಸಂದ್ರ ಗ್ರಾಪಂ ಕೇಂದ್ರದಲ್ಲಿ ಎಸ್‌ಸಿಪಿ ಯೋಜನೆಯಡಿ 6 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

Advertisement

ಅನುದಾನ ಹಿಂತೆಗೆತ: ಗ್ರಾಮಾಂತರ ಪ್ರದೇಶಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಕ್ಷೇತ್ರದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಅನುದಾನವನ್ನು ಹಿಂತೆಗೆದುಕೊಂಡಿದ್ದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯಾಗಿದೆ. ಲೋಕೋಪಯೋಗಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಅನುದಾನ ಬಿಡುಗಡೆ ಮಾಡಲು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.

ರಸ್ತೆ ಕಾಮಗಾರಿಗೆ ಒತ್ತು: ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸುವ ಭಾಗ್ಯ ಲಭಿಸಿದ ಪರಿಣಾಮ ಬಹುತೇಕ ಗ್ರಾಮಗಳಿಗೆ ವಿವಿಧ ಗ್ರಾಮಗಳಿಗೆ ರಸ್ತೆ ಸೌಲಭ್ಯ ಮತ್ತು ಸಂಪರ್ಕ ರಸ್ತೆ ಕಲ್ಪಿಸಿದ್ದು ಪ್ರಸಕ್ತ ಸಾಲಿನಲ್ಲಿ ಮಿತ ಅನುದಾನದಲ್ಲಿ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು ಲೋಕೋಪಯೋಗಿ ಇಲಾಖೆಯಿಂದ ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಪಾಡಿಕೊಳ್ಳಬೇಕು. ಸಾರ್ವಜನಿಕರಿಂದ ಕಳಪೆ ಕಾಮಗಾರಿ ಕುರಿತು ದೂರು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಶಾಸಕರು ಎಚ್ಚರಿಕೆ ನೀಡಿದರು.

ರಸ್ತೆ ಗುಣಮಟ್ಟ ಪರಿಶೀಲನೆ: ಗ್ರಾಪಂ ಮಟ್ಟದಲ್ಲಿ ನರೇಗಾ ಯೋಜನೆಯಡಿ ಕ್ಷೇತ್ರದ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು ಅದರ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ. ಕೆಲ ಗ್ರಾಪಂಗಳಲ್ಲಿ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಮಾದರಿ ಕಾಮಗಾರಿ ನಡೆಸಿದ್ದು ಇನ್ನೂ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ವ್ಯಾಪಕ ಪ್ರಚಾರದ ಕೊರತೆ ಮತ್ತು ಇಚ್ಛಾಶಕ್ತಿ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡಿಲ್ಲ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಮನ್ನಣೆ: ಕ್ಷೇತ್ರದಲ್ಲಿ ಅತಿ ಶೀಘ್ರದಲ್ಲಿ ಗ್ರಾಪಂ ಚುನಾವಣೆಗಳು ನಡೆಯಲಿದೆ. ಗ್ರಾಪಂ ಮಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಗುರುತಿಸಿ ಮತದಾರರು ಮತ ಚಲಾಯಿಸಲಿದ್ದಾರೆ. ಸದಸ್ಯರು ಯಾವ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ ಎಂಬುದನ್ನು ನೋಡಿ ಮತ ಚಲಾಯಿಸುತ್ತಾರೆ. ಸದಸ್ಯರಿಗೆ ತಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಶ್ರೀರಕ್ಷೆಯಾಗಲಿದೆ ಎಂದರು.

Advertisement

ಲೋಕೋಪಯೋಗಿ ಇಲಾಖೆ ಎಇಇ ವಿನೋದ್‌, ಜೆಇ ದಿನೇಶ್‌, ಈ.ತಿಮ್ಮಸಂದ್ರ ಗ್ರಾಪಂ ಅಧ್ಯಕ್ಷ ಎಂ.ವಿ.ದೇವರಾಜ್‌,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತನ್ವೀರ್‌ ಅಹಮದ್‌, ಜಿಪಂ ಮಾಜಿ ಸದಸ್ಯ ಕದಿರಪ್ಪ, ತಾಪಂ ಮಾಜಿ ಸದಸ್ಯ ಶ್ರೀನಾಥ್‌, ಗುತ್ತಿಗೆದಾರ ಆಂಜಿನೇಯರೆಡ್ಡಿ, ಗ್ರಾಪಂ ಸದಸ್ಯರಾದ ಜಯರಾಂರೆಡ್ಡಿ, ಗಂಗಾಧರ, ವೆಂಕಟರವಣಪ್ಪ, ವೆಂಕಟರಮಣರೆಡ್ಡಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next